ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್ ಹಗರಣ | ಅಜ್ಞಾತ ಸ್ಥಳದಲ್ಲಿ ಹ್ಯಾಕರ್ ಶ್ರೀಕಿ

ಜಾಮೀನು ಮೇಲೆ ಹೊರಗಿರುವ ಶ್ರೀಕಿ; ಅಗತ್ಯಬಿದ್ದರಷ್ಟೇ ನೋಟಿಸ್‌
Last Updated 25 ನವೆಂಬರ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಸೇವಿಸಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಅಜ್ಞಾತ ಸ್ಥಳ ಸೇರಿದ್ದಾನೆ. ಆತನ ವಿಳಾಸದ ಬಗ್ಗೆ ಪೊಲೀಸರಿಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ.

‘ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕೃಷ್ಣನ ಜೀವಕ್ಕೆ ಅಪಾಯವಿದೆ. ಆತನಿಗೆ ರಕ್ಷಣೆ ಕೊಡಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿದ್ದರು. ಇದೇ ಕಾರಣಕ್ಕೆ, ಶ್ರೀಕೃಷ್ಣ ಹಾಗೂ ಆತನ ಕುಟುಂಬದವರ ಭದ್ರತೆಗೆ ಇನ್‌ಸ್ಪೆಕ್ಟರ್‌ ಒಬ್ಬರನ್ನು ನಿಯೋಜಿಸಲಾಗಿದೆ.

‘ಜಾಮೀನು ಪಡೆದ ದಿನ ಜೈಲಿನಿಂದ ಹೊರಬಂದಿದ್ದ ಶ್ರೀಕೃಷ್ಣ, ಅದಾದ ನಂತರ ಅಜ್ಞಾತ ಸ್ಥಳಕ್ಕೆ ಹೋಗಿದ್ದಾನೆ. ಆತ ಎಲ್ಲಿದ್ದಾನೆ ಎಂಬುದು ಇದುವರೆಗೂ ಗೊತ್ತಾಗಿಲ್ಲ. ಶ್ರೀಕೃಷ್ಣನ ಪೋಷಕರು ವಾಸವಿರುವ ಜಯನಗರದ ಮನೆಗೆ ಮಾತ್ರ ಭದ್ರತೆ ನೀಡಲಾಗಿದೆ. ಶ್ರೀಕೃಷ್ಣನಿಗಾಗಿ ಹುಡುಕಾಟವೂ ನಡೆದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೋಟೆಲೊಂದರಲ್ಲಿ ಶ್ರೀಕಿ ಉಳಿದುಕೊಂಡಿದ್ದ ಮಾಹಿತಿ ಇತ್ತು. ಪೊಲೀಸರು ಅಲ್ಲೀಗೆ ಹೋಗುವ ಮೊದಲೇ ಶ್ರೀಕಿ ಕೊಠಡಿ ಖಾಲಿ ಮಾಡಿಕೊಂಡು ಹೋಗಿದ್ದಾನೆ. ಜೊತೆಗೆ, ಆತ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿಯೂ ಇದೆ.’

‘ಶ್ರೀಕಿಗೆ ಭದ್ರತೆ ನೀಡುವುದು ನಮ್ಮ ಕರ್ತವ್ಯವೆಂದು ಪೋಷಕರಿಗೆ ತಿಳಿಸಲಾಗಿದೆ. ಅವರ ಮೂಲಕವೇ ಶ್ರೀಕಿಯನ್ನು ಸಂಪರ್ಕಿಸಲು ಯತ್ನಿಸಲಾಗತ್ತಿದೆ. ಪೋಷಕರ ಸಂಪರ್ಕಕ್ಕೂ ಶ್ರೀಕಿ ಲಭ್ಯವಾಗುತ್ತಿಲ್ಲ’ ಎಂದೂ ತಿಳಿಸಿವೆ.

ಅಗತ್ಯಬಿದ್ದರಷ್ಟೇ ನೋಟಿಸ್:
‘ಹೋಟೆಲೊಂದರಲ್ಲಿ ಶ್ರೀಕೃಷ್ಣ ಹಾಗೂ ವಿಷ್ಣು ಭಟ್ ಎಂಬುವರನ್ನು ಜೀವನ್‌ಭಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆತನ ಮೇಲೆ ಡ್ರಗ್ಸ್ ಸೇವಿಸಿದ್ದ ಆರೋಪವಿತ್ತು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಶ್ರೀಕೃಷ್ಣ, ಜೈಲಿನಿಂದ ಹೊರಬಂದಿದ್ದಾನೆ. ಜೀವನ್‌ಭಿಮಾ ನಗರ ಠಾಣೆ ಪೊಲೀಸರ ತನಿಖೆಯಲ್ಲಿ ಸದ್ಯಕ್ಕೆ ಆತನ ವಿಚಾರಣೆ ಅವಶ್ಯತೆ ಇಲ್ಲ. ಅಗತ್ಯಬಿದ್ದರಷ್ಟೇ ಪೋಷಕರು ಅಥವಾ ಸಂಬಂಧಿಕರ ಮೂಲಕ ನೋಟಿಸ್ ಜಾರಿ ಮಾಡಲಾಗುವುದು’ ಎಂದೂ ತಿಳಿಸಿವೆ.

‘ತನಿಖೆಗೆ ಸಹಕರಿಸದಿದ್ದರೆ ಆಕ್ಷೇಪಣೆ’

‘ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ವಿಚಾರಣೆ ಅಗತ್ಯವಿದ್ದರೆ ನೋಟಿಸ್ ನೀಡುತ್ತೇವೆ. ಅದಾದ ಬಳಿಕವೂ ಶ್ರೀಕೃಷ್ಣ ತನಿಖೆಗೆ ಸಹಕರಿಸದಿದ್ದರೆ ಮಾತ್ರ ಜಾಮೀನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT