ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಟೊಮೆಟೊ, ಈರುಳ್ಳಿ ಬಗ್ಗೆ ನಾನು ಮಾತನಾಡಲ್ಲ: ಅರುಣ್ ಸಿಂಗ್

Last Updated 2 ಸೆಪ್ಟೆಂಬರ್ 2021, 21:05 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ಪೆಟ್ರೋಲ್... ಒಂದು ಟೊಮೆಟೊ ... ಒಂದು ಈರುಳ್ಳಿ ಬಗ್ಗೆ ನಾನು ಮಾತನಾಡಲ್ಲ. ಆರ್ಥಿಕ ತಜ್ಞರ ರೀತಿಯಲ್ಲಿ ನೀವು(ಪತ್ರಕರ್ತರು) ಪ್ರಶ್ನೆ ಕೇಳಬೇಕು..’ – ಹೀಗೆಂದು ಸುದ್ದಿ ಮಾಧ್ಯಮಗಳಿಗೆ ಪಾಠ ಮಾಡಿದ್ದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌.

ಗುರುವಾರ ನಡೆದ ಬೆಂಗಳೂರು ನಗರ ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆಯ ಬಳಿಕ ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಮೇಲಿನಂತೆ ಉತ್ತರ ನೀಡಿದರು.

‘ಅಡುಗೆ ಅನಿಲ, ಪೆಟ್ರೋಲ್‌ ಬೆಲೆ ಗಗನಕ್ಕೇರಿದೆ. ಇದನ್ನು ತಗ್ಗಿಸಲು ಏನು ಮಾಡುತ್ತಿದ್ದೀರಿ, ಜನರಿಗೆ ಏನು ಸಂದೇಶ ನೀಡುತ್ತೀರಿ’ ಎಂಬ ಪ್ರಶ್ನೆಗೆ ‘ನೋಡಿ ಪ್ರಧಾನಿ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಬಡವರಿಗೆ ಎಲ್ಲ ರೀತಿಯಿಂದಲೂ ನೆರವು ಸಿಗುತ್ತಿದೆ. ಪ್ರತಿ ಮನೆಗಳಿಗೂ ನಲ್ಲಿಯಿಂದ ನೀರು ಪೂರೈಕೆ ಮಾಡುವ ಕೆಲಸ ನಡೀತಿದೆ. ರೈತರ ಖಾತೆಗಳಿಗೆ ₹ 6 ಸಾವಿರ ಹಾಕುತ್ತಿದ್ದೇವೆ... ಭಾರತ್ ಮಾಲಾ ಯೋಜನೆಯಡಿ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ವಿಷಯಾಂತರಕ್ಕೆ ಯತ್ನಿಸಿದರು.

‘ನಾವು ಆ ಬಗ್ಗೆ ಕೇಳುತ್ತಿಲ್ಲ, ಬೆಲೆ ಏರಿಕೆ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಿ’ ಎಂಬ ಮರು ಪ್ರಶ್ನೆಗೆ, ‘ಆಯುಷ್ಮಾನ್‌ ಭಾರತ್‌ ಜಾರಿ ಆಗಿದೆ. ಎಲ್ಲರಿಗೂ ಹಣ ಬೇಕು. ಎಲ್ಲ ಯೋಜನೆಗಳಿಗೂ ಹಣ ಬೇಕು. ತೆರಿಗೆ ಮೂಲಕ ಹಣ ಬರುತ್ತಾ ಇದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಮುಂದೆ ಕಡಿಮೆ ಆಗಬಹುದು. ನೀವು ಮಾಧ್ಯಮದವರು ಚರ್ಚೆ ಮಾಡಬೇಕಾದರೆ ಹಣದುಬ್ಬರ ಆಧರಿಸಿ ಚರ್ಚೆ ಮಾಡಬೇಕು. ಈ ರೀತಿ ಮಾತನಾಡುವುದಲ್ಲ. ಒಂದು ಪೆಟ್ರೋಲ್, ಒಂದು ಟೊಮೆಟೊ , ಒಂದು ಈರುಳ್ಳಿ ವಿಚಾರ ಇಟ್ಟುಕೊಂಡು ಚರ್ಚೆ ಮಾಡಬೇಡಿ’ ಎಂದರು.

‘ತೈಲ ಬೆಲೆ ಹೆಚ್ಚಳದ ಜೊತೆ ಜೊತೆಗೇ ಹಣದುಬ್ಬರದ ಪರಿಸ್ಥಿತಿಯನ್ನೂ ಗಮನಿಸಿ. ಯುಪಿಎ ಆಡಳಿತದಲ್ಲಿ ಹಣದುಬ್ಬರವು ಶೇ 15 ರಿಂದ 20ರಷ್ಟಿತ್ತು. ಆದರೆ, ಈಗ ನರೇಂದ್ರ ಮೋದಿ ಆಡಳಿತದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕೇವಲ 100 ದಿನಗಳಲ್ಲಿ ಹಣದುಬ್ಬರವನ್ನು ನಿಯಂತ್ರಿಸಲಾಗುವುದು ಎಂದು ಯುಪಿಎ ಸರ್ಕಾರದ ಹಣಕಾಸು ಸಚಿವರಾಗಿದ್ದ ಚಿದಂಬರಂ ಹಿಂದೊಮ್ಮೆ ಹೇಳಿದ್ದರು ಆದರೆ, ಅದು ಏರುತ್ತಲೇ ಹೋಯಿತು. ಬೆಲೆ ಏರಿಕೆ ನಿಯಂತ್ರಣ ಮಾಡಲಾಗಲಿಲ್ಲ’ ಎಂದು ವಿವರಿಸಿದರು.

ಕೇಂದ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರಗಳು ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಇಬ್ಬರ ಸರ್ಕಾರವೂ ಸೇರಿ ಡಬಲ್‌ ಎಂಜಿನ್‌ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅರುಣ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT