ಭಾನುವಾರ, ಆಗಸ್ಟ್ 14, 2022
28 °C
ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಅರುಣ್‌ಸಿಂಗ್

ನಾಯಕತ್ವ ಬದಲಾವಣೆ ವಿಚಾರ: ಬಿಜೆಪಿ ವರಿಷ್ಠರತ್ತ ಅತೃಪ್ತರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೂರು ದಿನಗಳಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದ ಪರ, ವಿರುದ್ಧ ಮತ್ತು ತಟಸ್ಥ ಬಣಗಳ ಅಭಿಪ್ರಾಯ ಸಂಗ್ರಹಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಅವರು ಈ ಕುರಿತಂತೆ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸುವ ಸಾಧ್ಯತೆ ಇದೆ.

ಈ ವರದಿ ಆಧರಿಸಿ ವರಿಷ್ಠರು ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬ ಕುತೂಹಲ ಮೂರೂ ಬಣಗಳಲ್ಲಿಯೂ ಮೂಡಿದೆ. ಈ ಬಾರಿ, ನಾಯಕತ್ವ ಬದಲಾವಣೆ ಆಗಿಯೇ ಆಗುತ್ತದೆ ಎಂಬ ಭರವಸೆ ಅತೃಪ್ತರ ಬಣದ್ದಾಗಿದೆ.

ಇದೇ 24 ರಂದು ಪಕ್ಷದ ಸಂಸದೀಯ ಮಂಡಳಿಯ ಸಭೆ ನವದೆಹಲಿಯಲ್ಲಿ ನಡೆಯಲಿದ್ದು, ಅಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಪ್ರಧಾನವಾಗಿ ನಡೆಯಲಿದೆ. ಹಾಗಿದ್ದರೂ ಉತ್ತರ ಪ್ರದೇಶ ಮತ್ತು ಕರ್ನಾಟಕದ ರಾಜಕೀಯ ವಿದ್ಯಮಾನಗಳು ಪ್ರಮುಖವಾಗಿ ಪ್ರಸ್ತಾಪ ಆಗಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ’ ಎಂದು ಹೇಳುತ್ತಲೇ ರಾಜ್ಯಕ್ಕೆ ಕಾಲಿಟ್ಟ ಅರುಣ್‌ಸಿಂಗ್, ಮಾಧ್ಯಮಗಳ ಮುಂದೆ ನಾಯಕತ್ವದ ಬಗ್ಗೆ ಟೀಕಾ ಪ್ರಹಾರ ನಡೆಸುತ್ತಿರುವವರಿಗೂ ಚಾಟಿ ಬೀಸಿದರು. ಪಕ್ಷದಲ್ಲಿನ ವಿದ್ಯಮಾನಗಳು ಮತ್ತು ಅಪಸ್ವರಗಳನ್ನು ತಮ್ಮದೇ ಶೈಲಿಯಲ್ಲಿ ಸಂಗ್ರಹಿಸಿರುವ ಅವರು ಒಟ್ಟಾರೆ ಚಿತ್ರಣವನ್ನು ವರಿಷ್ಠರ ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ  ಅವರಿಗೆ ಅರುಣ್‌ಸಿಂಗ್ ಭೇಟಿಗೆ ಅವಕಾಶ ಸಿಗಲಿಲ್ಲ. ಸಚಿವ ಸಿ.ಪಿ. ಯೋಗೇಶ್ವರ್‌, ಶಾಸಕ ಎಚ್‌.ವಿಶ್ವನಾಥ್‌ ಅವರು ನಾಯಕತ್ವ ಬದಲಾವಣೆ ಪರವಾಗಿರುವವರ ಎಲ್ಲ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ವಿಶ್ವನಾಥ್‌, ‘ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಪ್ರಭಾವವೂ ಇಲ್ಲದಿರುವುದರಿಂದ ಅವರನ್ನು ಬದಲಿಸುವುದು ಸೂಕ್ತ’ ಎಂಬ ಹೇಳಿಕೆ ನೀಡಿ, ಬಿಜೆಪಿಯಲ್ಲಿ ತಲ್ಲಣವನ್ನೂ ಸೃಷ್ಟಿಸಿದರು. ನವದೆಹಲಿಯಲ್ಲಿಯೇ ಅರುಣ್ ಸಿಂಗ್ ಭೇಟಿ ಮಾಡಿದ ಕಾರಣಕ್ಕೆ ಅರವಿಂದ ಬೆಲ್ಲದ ಅವರು, ಬೆಂಗಳೂರಿನಲ್ಲಿ ಭೇಟಿ ಮಾಡಲಿಲ್ಲ ಎನ್ನಲಾಗಿದೆ.

ಅರುಣ್‌ಸಿಂಗ್ ಅವರನ್ನು ಭೇಟಿ ಮಾಡಿದ ಕೆಲವು ಶಾಸಕರು ಯಡಿಯೂರಪ್ಪ ಅವರನ್ನು ಬದಲಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಆಪ್ತರು, ಯಾವುದೇ ಕಾರಣಕ್ಕೂ ನಾಯಕತ್ವ ಬದಲಿಸಬಾರದು ಎಂದು ತಮ್ಮ ವಾದ ಮುಂದಿಟ್ಟರು. ತಟಸ್ಥರಾಗಿರುವವರು ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಬದ್ಧರಿರುವುದಾಗಿ ಹೇಳಿದರು. ತಟಸ್ಥರ ಸಂಖ್ಯೆಯೇ ಹೆಚ್ಚಾಗಿತ್ತು ಎಂದು ಮೂಲಗಳು ತಿಳಿಸಿವೆ.

51 ಶಾಸಕರು ಮಾತ್ರ ಅರುಣ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಸಚಿವರನ್ನು ಪ್ರತ್ಯೇಕವಾಗಿಟ್ಟುಕೊಂಡರೂ ಸುಮಾರು 40ಕ್ಕೂ ಹೆಚ್ಚು ಶಾಸಕರು ಉಸ್ತುವಾರಿ ಭೇಟಿ ಮಾಡುವ ಗೋಜಿಗೇ ಹೋಗಿಲ್ಲ. ಇವರ ಪೈಕಿ ಹೆಚ್ಚಿನವರು ತಟಸ್ಥ ಬಣದವರು ಎನ್ನಲಾಗುತ್ತಿದೆ.

ವರಿಷ್ಠರತ್ತ ಚಿತ್ತ: ಈ ಹಿಂದೆ ಗುಜರಾತ್‌ ಮತ್ತು ಉತ್ತರಖಂಡ್‌ನಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸಿದ ರೀತಿಯಲ್ಲೇ  ರಾಜ್ಯದಲ್ಲೂ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆ ನಾಯಕತ್ವ ಬದಲಾವಣೆ ಪರ ಇರುವ ಶಾಸಕರದ್ದಾಗಿದೆ. ಆದರೆ, ಯಡಿಯೂರಪ್ಪ ಅವರನ್ನು ಬದಲಿಸಿದರೆ, ಪಕ್ಷಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬುದು ಯಡಿಯೂರಪ್ಪ ಆಪ್ತ ಬಣದ ವಾದ. ಈ ಮಧ್ಯೆ, ಯಡಿಯೂರಪ್ಪ ಅವರ ಪರವಾಗಿ ವೀರಶೈವ– ಲಿಂಗಾಯತ ಮಠಗಳೂ ಹೇಳಿಕೆ ನೀಡಲಾರಂಭಿಸಿವೆ. ಈ ವಿಷಯವನ್ನೂ ಅರುಣ್‌ಸಿಂಗ್‌ ಗಮನಿಸಿದ್ದಾರೆ.

ತಮ್ಮನ್ನು ಭೇಟಿಯಾಗಲು ಬಂದ ಎಲ್ಲ ಶಾಸಕರ ಮಾತುಗಳನ್ನು ತಾಳ್ಮೆಯಿಂದಲೇ ಕೇಳಿಸಿಕೊಂಡಿದ್ದಾರೆ. ಕೆಲವರನ್ನು ಕುಮಾರಕೃಪಾ ಅತಿಥಿಗೃಹಕ್ಕೆ ಕರೆಸಿಕೊಂಡು ಮಾತನಾಡಿದ್ದಾರೆ. ಪಕ್ಷದ ಶಿಸ್ತಿನ ಬಗ್ಗೆ ಎಲ್ಲ ಶಾಸಕರಿಗೂ ಮನದಟ್ಟು ಮಾಡುವ ಪ್ರಯತ್ನವನ್ನು ಮೂರು ದಿನವೂ ಅವರು ನಡೆಸಿದ್ದಾರೆ.

ರಾಜಕೀಯ ಗೊಂದಲವಿಲ್ಲ: ಬಿಎಸ್‌ವೈ
‘ರಾಜಕೀಯದಲ್ಲಿ ಯಾವುದೇ ಗೊಂದಲ ಇಲ್ಲ. ಯಾರೋ ಒಂದಿಬ್ಬರ ಹೇಳಿಕೆಗಳನ್ನು ಮಾಧ್ಯಮಗಳು ತಪ್ಪು ಗ್ರಹಿಕೆ ಮಾಡಿಕೊಂಡಿರುವುದೇ ಈಗಿನ ಗೊಂದಲಕ್ಕೆ ಕಾರಣ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ’ಗುರುವಾರ ಸುಮಾರು 60 ಕ್ಕೂ ಹೆಚ್ಚು ಶಾಸಕರು ಅರುಣ್‌ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಇವರ ಮಾತುಗಳು ಹೈಲೈಟ್‌ ಆಗಿಲ್ಲ. ಆದರೆ, ಒಂದಿಬ್ಬರ ಮಾತುಗಳಿಗೆ ಮಾತ್ರ ಅನಗತ್ಯ ಪ್ರಚಾರ ಸಿಗುತ್ತಿದೆ‘ ಎಂದು ಹೇಳಿದರು.

‘ನನ್ನ ವಿರುದ್ಧ ಮಾತನಾಡುವವರನ್ನು ಅರುಣ್‌ಸಿಂಗ್ ಕರೆಸಿ ಮಾತನಾಡಿಸಿಲ್ಲ. ಯಾವುದೇ ಸಮಸ್ಯೆಗಳು ಇದ್ದರೆ ನೇರವಾಗಿ ಬಂದು ನನ್ನ ಜತೆ ಮಾತನಾಡಬಹುದು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ‘ ಎಂದೂ ಯಡಿಯೂರಪ್ಪ ತಿಳಿಸಿದರು. ‘ಯಾವುದೇ ಸಣ್ಣ ಪುಟ್ಟ ಗೊಂದಲಗಳು ಇದ್ದರೆ ಅದನ್ನು ವರಿಷ್ಠರು ಸರಿಪಡಿಸುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು