ದೇಗುಲ ತೆರವುಗೊಳಿಸಿದರೆ ಜನಾಂದೋಲನ: ಸಂಸದ ಪ್ರತಾಪ ಸಿಂಹ

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳ ತೆರವು ಕಾರ್ಯಾಚರಣೆ ಮುಂದುವರಿಸಿದರೆ ದೇವಸ್ಥಾನ ಉಳಿಸಿ ಜನಾಂದೋಲನ ನಡೆಸಲಾಗುವುದು ಎಂದು ಸಂಸದ ಪ್ರತಾಪಸಿಂಹ ಎಚ್ಚರಿಕೆ ನೀಡಿದರು.
‘ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಜಿಲ್ಲಾಡಳಿತ, ದೇಗುಲಗಳನ್ನಷ್ಟೇ ತೆರವುಗೊಳಿಸುತ್ತಿರುವುದು ಸರಿಯಲ್ಲ. ಈ ಕುರಿತು 2010ರಲ್ಲಿ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಧಾರ್ಮಿಕ ಕಟ್ಟಡಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಬದಲಿ ಸ್ಥಳ ನೀಡುವುದು, ಸಾಧ್ಯವಾದರೆ ಸಕ್ರಮಗೊಳಿಸುವುದು ಸೇರಿ ವಿವಿಧ ಕ್ರಮಗಳ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಿಲ್ಲಾಡಳಿತ ಈ ಅಂಶ ಕೈಬಿಟ್ಟು ನಸುಕಿನಲ್ಲಿ ಬರುವ ಕಳ್ಳರಂತೆ ತೆರವು ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಹರಿಹಾಯ್ದರು.
‘ಮೈಸೂರು ಜಿಲ್ಲಾಡಳಿತ 9 ದೇಗುಲಗಳನ್ನು ತೆರವುಗೊಳಿಸಿ, ಚರ್ಚ್, ಮಸೀದಿ, ದರ್ಗಾಗಳನ್ನು ಉಳಿಸಿದೆ. ಮುಂದೆ ತೆರವು ಮಾಡುವಂತಹ ಪಟ್ಟಿಯಲ್ಲಿ 90ಕ್ಕೂ ಹೆಚ್ಚು ದೇಗುಲಗಳಿದ್ದು, ಹಿಂದೂ ಧರ್ಮವನ್ನಷ್ಟೆ ಅಧಿಕಾರಿಗಳು ಗುರಿಯಾಗಿಸಿಕೊಂಡಿದ್ದಾರೆ’ ಎಂದು ದೂರಿದರು.
‘ಮೆಕ್ಕಾವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಸೀದಿ, ರೋಮ್ ಮನಸ್ಸಿನಲ್ಲಿ ಇಟ್ಟುಕೊಂಡು ಚರ್ಚ್‌ಗಳಲ್ಲಿ ಪ್ರಾರ್ಥಿಸಲಾಗುತ್ತದೆ. ದೇಗುಲದಲ್ಲಿ ವಿಗ್ರಹವನ್ನೇ ಮನಸ್ಸಿನಲ್ಲಿಟ್ಟುಕೊಂಡು ಪ್ರಾರ್ಥಿಸಲಾಗುತ್ತದೆ. ಮಸೀದಿ, ಚರ್ಚ್‌ಗಳನ್ನು ತೆರವು ಮಾಡಿದಂತೆ ದೇಗುಲಗಳನ್ನು ತೆರವುಗೊಳಿಸುವುದು ಸರಿಯಲ್ಲ’ ಎಂದು ಹೇಳಿದರು.
‘ಮಸೀದಿಗಳ ತಂಟೆಗೆ ಬಂದರೆ ನಾವೇನೂ ಬಳೆ ತೊಟ್ಟಿಲ್ಲ’ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ, ‘ಈ ಹೇಳಿಕೆ ಮಹಿಳೆಯರಿಗೆ ತೋರುವ ಅಗೌರವ. ಅವರ ಧರ್ಮದಲ್ಲಿ ಮಹಿಳೆಗೆ ಬುರ್ಖಾ ಹಾಕಿ ಅಡುಗೆ ಮನೆಗೆ ಸೀಮಿತಗೊಳಿಸಲಾಗಿದೆ. ಸೋನಿಯಾ ಗಾಂಧಿ, ಇಂದಿರಾ ಗಾಂಧಿ, ಒನಕೆ ಓಬವ್ವ ಮಹಿಳೆಯರು ಎಂಬುದನ್ನು ಅವರು ಮರೆಯಬಾರದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.