ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಲಿನ್‌ಗೆ ಬಿಎಸ್‌ವೈ ಪತ್ರ ಬರೆದಿದ್ದು ತಪ್ಪು: ಸಿದ್ದರಾಮಯ್ಯ

ಮೇಕೆದಾಟು ಯೋಜನೆ
Last Updated 5 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಾಣದ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿರುವುದು ತಪ್ಪು ನಡೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಗರದಲ್ಲಿ ಯುವ ಕಾಂಗ್ರೆಸ್‌ ಸಮಿತಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ‘ನ್ಯಾಯಾಲಯದ ಆದೇಶದ ಪ್ರಕಾರ ನಮ್ಮ ಕೆಲಸ ಮಾಡಬೇಕು. ಕರ್ನಾಟಕದವರು ಅಣೆಕಟ್ಟೆ ನಿರ್ಮಿಸಲು ತಮಿಳುನಾಡು ಮುಖ್ಯಮಂತ್ರಿಯ ಅನುಮತಿ ಏಕೆ ಬೇಕು? ಮೇಕೆದಾಟು ಅಣೆಕಟ್ಟೆ ನಿರ್ಮಾಣದಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ. ಪತ್ರ ಬರೆದು ಅನುಮತಿ ಕೇಳಿದರೆ ಯಾವ ರಾಜ್ಯವೂ ಒಪ್ಪುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಯಾವತ್ತೂ ಪತ್ರ ಬರೆದು ಒಪ್ಪಿಗೆ ಕೇಳಿರಲಿಲ್ಲ’ ಎಂದರು.

‘ಧರಣಿ ಕೂರುತ್ತಿದ್ದೆ’: ‘15ನೇ ಹಣಕಾಸು ಆಯೋಗದ ವರದಿ ಪ್ರಕಾರ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಇನ್ನೂ ₹ 5,495 ಕೋಟಿ ಬರಬೇಕಿದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುತ್ತಾರೆ ಎಂಬ ಭಯ. ಆದ್ದರಿಂದ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದಿಲ್ಲ. ನಾನೇ ಮುಖ್ಯಮಂತ್ರಿ ಆಗಿದ್ದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಚೇರಿ ಎದುರು ಧರಣಿ ಕೂರುತ್ತಿದ್ದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಜತೆ ವಿಪಕ್ಷಗಳು ಶಾಮೀಲಾಗಿವೆ’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಯತ್ನಾಳ ಹಲವು ದಿನಗಳಿಂದ ಹೇಳುತ್ತಿದ್ದಾರೆ. ಅಂತಹ ಭ್ರಷ್ಟ ಸರ್ಕಾರದಲ್ಲಿ ಇವರೇಕೆ ಶಾಸಕನಾಗಿ ಮುಂದುವರಿದಿದ್ದಾರೆ’ ಎಂದು ಪ್ರಶ್ನಿಸಿದರು.

‘ಕೆಆರ್‌ಎಸ್‌ ಅಣೆಕಟ್ಟೆಗೆ ಸಂಸದೆ ಸುಮಲತಾ ಅವರನ್ನು ಅಡ್ಡಲಾಗಿ ಮಲಗಿಸಿ’ ಎಂಬ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಅದನ್ನು ಸುಮಲತಾ ಅವರೇ ನೋಡಿಕೊಳ್ಳುತ್ತಾರೆ’ ಎಂದರು.

ಕೋವಿಡ್‌ ಲಸಿಕೆ ಪಡೆಯದೇ ಇರುವವರಿಗೆ ಕೊರೊನಾ ವೈರಾಣು ಸೋಂಕಿನ ಮೂರನೆ ಅಲೆ ಅಪಾಯಕಾರಿಯಾಗಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಟೀಕಿಸಿದರು.

ಶೀಘ್ರವೇ ಮೇಕೆದಾಟು ಯೋಜನೆ ಆರಂಭ: ಬಿಎಸ್‌ವೈ
ಬೆಂಗಳೂರು:
ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ, ಕಾನೂನಾತ್ಮಕ ಕ್ರಮ ಕೈಗೊಳ್ಳುವ ಜತೆಗೆ ಮೇಕೆದಾಟು ಯೋಜನೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಹೊಸ ಸರ್ಕಾರವು ಅಸ್ತಿತ್ವಕ್ಕೆ ಬಂದ ಕಾರಣ ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ಸಲುವಾಗಿ ಅಲ್ಲಿನ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಟಾನಗೊಳಿಸುವ ದೃಷ್ಟಿಯಿಂದ ಮತ್ತು ಈ ಯೋಜನೆಯ ನಿರ್ಮಾಣದಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗುವ ಅಂಶಗಳನ್ನು ಪತ್ರದಲ್ಲಿ ತಿಳಿಸಲಾಗಿತ್ತು ಎಂದಿದ್ದಾರೆ.

ಆದರೆ, ತಮಿಳುನಾಡು ಸರ್ಕಾರ, ಅದನ್ನು ಅರ್ಥ ಮಾಡಿಕೊಳ್ಳದೇ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆ ಆಗುತ್ತದೆ ಎಂದು ವ್ಯಾಖ್ಯಾನಿಸಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು 4.75 ಟಿಎಂಸಿ ಅಡಿ ನೀರನ್ನು ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆ. ಈ ಉದ್ದೇಶಕ್ಕಾಗಿ 23.75 ಟಿಎಂಸಿ ಅಡಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ವಾಸ್ತವದಲ್ಲಿ ನೀರಿನ ಹರಿವಿನಲ್ಲಿ ಅನುಕೂಲವಾಗುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯ ಕಾರಣಗಳಿಗೆ ವಿರೋಧಿಸುತ್ತಿದೆ ಎಂದಿದ್ದಾರೆ.

ಈ ವಿಚಾರವಾಗಿ 2018 ರಲ್ಲಿ ತಮಿಳುನಾಡು ರಾಜ್ಯವು (ಮಿಸಲೇನಿಯಸ್‌ ಅಪ್ಲಿಕೇಷನ್) ದಾವೆಯನ್ನು ಸಲ್ಲಿಸಿದೆ. ಆದರೆ, ಯೋಜನೆಯನ್ನು ಅನುಷ್ಟಾನಗೊಳಿಸಲು ಯಾವುದೇ ಅಡೆ ತಡೆ ಇರುವುದಿಲ್ಲ. ಯೋಜನೆಯನ್ನು ಜಾರಿಗೊಳಿಸಲು ಅಗತ್ಯವಿರುವ ತೀರುವಳಿಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ತೀರುವಳಿಗಳನ್ನು ಪಡೆದು ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.

‘ಕೂಡಲೆ ಕಾಮಗಾರಿ ಆರಂಭಿಸಿ‘
ಮಂಗಳೂರು:
‘ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ತಮಿಳುನಾಡು ಮುಖ್ಯಮಂತ್ರಿಗೆ ಮನವಿ ಮಾಡುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಸಂಧಾನಕ್ಕೆ ಹೋಗುತ್ತಿರುವುದು ರಾಜ್ಯಕ್ಕೆ ಗೌರವ ತರುವಂಥದ್ದಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು, ‘ಯಡಿಯೂರಪ್ಪ ಅವರಿಗೂ ರಾಜಕೀಯ ಬದ್ಧತೆ ಇರಬೇಕು. ರಾಜ್ಯದ ಹಿತ ಕಾಪಾಡಬೇಕು. ನಾವು ನಿಮ್ಮ ಜೊತೆ ಇರುತ್ತೇವೆ. ಕೂಡಲೇ ಟೆಂಡರ್ ಕರೆದು, ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT