ಶುಕ್ರವಾರ, ಆಗಸ್ಟ್ 12, 2022
26 °C
ವಿಸ್ತರಿತ ಮಾರ್ಗದ ಪರಿವೀಕ್ಷಣೆ ನಡೆಸಿದ ಮುಖ್ಯಮಂತ್ರಿ

ಮೆಟ್ರೊ 2ನೇ ಹಂತ: ಕೆಂಗೇರಿ ಮಾರ್ಗ‌ ಜುಲೈನಲ್ಲಿ ಪ್ರಯಾಣಿಕರಿಗೆ ಮುಕ್ತ -ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮೈಸೂರು ರಸ್ತೆ ವಿಸ್ತರಿತ ಮಾರ್ಗವು ಜುಲೈನಲ್ಲಿ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ. 7.53 ಕಿ.ಮೀ. ಉದ್ದದ ಈ ಮಾರ್ಗ ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಗೆ ಸಂಪರ್ಕ ಕಲ್ಪಿಸಲಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ₹56 ಹಾಗೂ  ಕೆಂಗೇರಿಯಿಂದ ರೇಷ್ಮೆ ಸಂಸ್ಥೆಗೆ ಪ್ರಯಾಣಿಸಲು ₹ 60 ದರ ನಿಗದಿ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ನೂತನ ಸಂಚಾರ ಮಾರ್ಗದ ಪರಿವೀಕ್ಷಣೆ ನಡೆಸಿದ ಬಳಿಕ ಮಾತನಾಡಿದರು.

‘ಈ ಯೋಜನೆಗೆ ₹1,560 ಕೋಟಿ ವೆಚ್ಚ ಮಾಡಲಾಗಿದೆ. ಭೂ ಸ್ವಾಧೀನಕ್ಕೆ ₹360 ಕೋಟಿ ವ್ಯಯಿಸಲಾಗಿದೆ. ಈ ಮಾರ್ಗದಿಂದಾಗಿ ಪೂರ್ವ–ಪಶ್ಚಿಮ ಕಾರಿಡಾರ್‌ ಮಾರ್ಗದ ಉದ್ದವು 18.1 ಕಿ.ಮೀ.ಗೆ ಹೆಚ್ಚಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ನಿಲ್ದಾಣ ಹಾಗೂ ಕೆಂಗೇರಿಯಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ’ ಎಂದರು.  

‘ನೂತನ ಮಾರ್ಗದಲ್ಲಿ ‘ಒಂದು ದೇಶ–ಒಂದು ಕಾರ್ಡ್‌’ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗವು ‘ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌’ ಹಾಗೂ ಕ್ಯೂ ಆರ್‌ ಕೋಡ್‌ಗೆ ಹೊಂದಿಕೆಯಾಗುವ ಎಎಫ್‌ಸಿ ವ್ಯವಸ್ಥೆ ಹೊಂದಿರಲಿದೆ. ಪ್ರತಿಯೊಂದು ನಿಲ್ದಾಣದ ಮೇಲ್ಛಾವಣಿಯಲ್ಲಿ 250 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಅಳವಡಿಸಲು ವಿನ್ಯಾಸಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

‘ಈ ಮಾರ್ಗದಲ್ಲಿ ರೈಲಿನ ಪರೀಕ್ಷಾರ್ಥ ಓಡಾಟ ಪೂರ್ಣಗೊಂಡಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್‌ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಈ ನಿಲ್ದಾಣ ಬಿಟ್ಟು ಉಳಿದೆಡೆ ಪ್ರಯಾಣಿಕರು ರಸ್ತೆ ದಾಟಲು ಪಾದಚಾರಿ ಮಾರ್ಗ ಬಳಸಬಹುದು. ವಿಸ್ತರಿತ ಮಾರ್ಗದಿಂದಾಗಿ ಪ್ರತಿದಿನ ಸರಾಸರಿ 75 ಸಾವಿರ ಮಂದಿಗೆ ಅನುಕೂಲವಾಗಲಿದೆ. ನಗರದ ಸಂಚಾರ ವ್ಯವಸ್ಥೆಯೂ ಸುಗಮಗೊಳ್ಳಲಿದೆ’ ಎಂದು ತಿಳಿಸಿದರು.

‘ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಿತ ಮಾರ್ಗದ ಕಾಮಗಾರಿಯೂ ಪ್ರಗತಿಯಲ್ಲಿದೆ. ಇದು 2022ರ ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ಕೇಂದ್ರ ಸರ್ಕಾರವು 2ಎ, 2ಬಿ ಹಂತಗಳ ಮಾರ್ಗಗಳಿಗೆ ಹಸಿರು ನಿಶಾನೆ ತೋರಿದೆ. ಇದರಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೂ ಮೆಟ್ರೊ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು