ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷ ಬಿಎಸ್‌ವೈ ಮುಖ್ಯಮಂತ್ರಿ

ಸಚಿವರ ಬೆಂಬಲ l ಆಂತರಿಕ ವಿಚಾರ ಪಕ್ಷದೊಳಗೇ ಚರ್ಚೆ-– ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
Last Updated 20 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆದ್ದರಿಂದ ಖಾಲಿ ಇಲ್ಲದ ಕುರ್ಚಿಗೆ ಟವೆಲ್‌ ಹಾಕಿ ವ್ಯರ್ಥ ಮಾಡುವುದು ಸರಿಯಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಬಸನಗೌಡ ಯತ್ನಾಳ ಅವರಿಗೆ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಹೆಚ್ಚು ದಿನ ಮುಖ್ಯಮಂತ್ರಿ ಆಗಿ ಮುಂದುವರಿಯುವುದಿಲ್ಲ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ, ವಿಧಾನಸಭೆ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೇ ಗೆದ್ದಿದ್ದೇವೆ. ಅವರ ನೇತೃತ್ವದಲ್ಲೇ ಮುಂದಿನ ಮೂರು ವರ್ಷ ಸರ್ಕಾರ ನಡೆಯುತ್ತದೆ ಎಂದು ಹೇಳಿದರು.

ಯತ್ನಾಳ ಅವರು ಖಾಲಿ ಇಲ್ಲದ ಸೀಟಿಗೆ ಟವೆಲ್‌ ಹಾಕುವುದನ್ನು ಬಿಡಲಿ. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಅವರು ಹೇಳಿದರು.

ಸೂಕ್ತ ವೇದಿಕೆಯಲ್ಲಿ ಚರ್ಚೆ: ಯತ್ನಾಳ ಅವರು ಹಲವು ಕಾರಣಗಳಿಗೆ ಆಗಾಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಆ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಪಕ್ಷದ ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಲಾಗುವುದು ಎಂದೂ ಅವರು ತಿಳಿಸಿದರು.

ಅನವಶ್ಯಕ ಗೊಂದಲ: ಬಸನಗೌಡ ಪಾಟೀಲ ಅವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ನೀವು ಸಿಎಂ ಆಗಲು ಸಾಧ್ಯವಿಲ್ಲ: ರಾಜ್ಯ ರಾಜಕಾರಣದಲ್ಲಿ ಬಿ.ಎಸ್‌.ಯಡಿಯೂರಪ್ಪ ಆಲದ ಮರ ಇದ್ದಂತೆ. ಆ ಮರದ ಕೆಳಗೆ ನಾವು ರಾಜಕಾರಣ ಮಾಡಬೇಕು. ಅವರನ್ನು ಟೀಕೆ ಮಾಡಿ ನೀವು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಯತ್ನಾಳಗೆ ತಿರುಗೇಟು ನೀಡಿದ್ದಾರೆ.

ಯತ್ನಾಳ ಅವರು ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಬದಲಿಸಬೇಕು ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ರೀತಿಯ ಚರ್ಚೆಗಳು ನಡೆದಿಲ್ಲ. ಯತ್ನಾಳ ಅವರು ಸ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಅವರು ಹರಿಹಾಯ್ದರು.

ಬಿಎಸ್‌ವೈ ಇಳಿಸಿದರೆ ಬಿಜೆಪಿಯೇ ಇರಲ್ಲ

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಐದಾರು ತಿಂಗಳುಗಳಿಂದ ಈ ಪ್ರಯತ್ನ ನಡೆಯುತ್ತಿದೆ. ಆದರೆ, ಅವರನ್ನು ಕೆಳಗಿಳಿಸಿದರೆ ಈ ಸರ್ಕಾರವೂ ಇರಲ್ಲ, ಬಿಜೆಪಿಯೂ ಇರಲ್ಲ. ಅದರ ಲಾಭ ಕಾಂಗ್ರೆಸ್‌ಗೆ ಸಿಗಲಿದೆ’ ಎಂದು ಕಾಂಗ್ರೆಸ್‌ ಶಾಸಕ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯ ಒಳಜಗಳ, ಕಿತ್ತಾಟಗಳೇ ಆ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಳುವಾಗಲಿದೆ’ ಎಂದರು. ‘ಗುಂಪುಗಾರಿಕೆ, ಬಣ ರಾಜಕಾರಣ ಬಿಜೆಪಿಯಲ್ಲಿ ಹೆಚ್ಚಾಗಿದೆ. ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲೇ ಹೆಚ್ಚು ಬಣ ರಾಜಕೀಯ ಇರುವುದು. ನಮ್ಮ ಪಕ್ಷದಲ್ಲೂ ಸಣ್ಣಪುಟ್ಟ ಅಸಮಾಧಾನಗಳಿವೆ. ಆದರೆ, ಬಿಜೆಪಿಯಷ್ಟು ಇಲ್ಲ’ ಎಂದರು.

‘ಪ್ರಧಾನಿ ಮೋದಿ ತಿರುಪತಿ ತಿಮ್ಮಪ್ಪ ಇದ್ದಂತೆ. ತಿಮ್ಮಪ್ಪನನ್ನು ಮಾತನಾಡಿಸಲು ಆಗುತ್ತದೆಯೇ. ನಮಸ್ಕಾರ ಮಾಡಿಕೊಂಡು ಬರಬಹುದು ಅಷ್ಟೇ. ಮೋದಿ ಕೂಡ ಹಾಗೆಯೇ, ಬಿಜೆಪಿಯವರೆಲ್ಲ ಅವರಿಗೆ ನಮಸ್ಕಾರ ಮಾಡಿ ಬರುತ್ತಾರೆ ಅನುದಾನ ಕೇಳಲು ಆಗಲ್ಲ’ ಎಂದು ವ್ಯಂಗ್ಯವಾಡಿದರು.

ಬಿಎಸ್‌ವೈ ಪೂರ್ಣಾವಧಿ ಸಿ.ಎಂ

‘ಬಿ.ಎಸ್. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರಾಗಿದ್ದು, ಪೂರ್ಣಾವಧಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘2018ರಲ್ಲಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಿ, ಅವರ ನಾಯಕತ್ವದಲ್ಲೇ ಸರ್ಕಾರವನ್ನೂ ರಚಿಸಲಾಗಿದೆ. ಸರ್ಕಾರದ ಉಳಿದ ಅವಧಿಯಲ್ಲಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ನಾಯಕತ್ವ ಬದಲಾವಣೆ ಬಗ್ಗೆ ಕೆಲವರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಗೆ ಯಾವುದೇ ಅರ್ಥ ಇರುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT