ಮಂಗಳವಾರ, ಮೇ 11, 2021
20 °C
ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರು: ಅಪರಿಚಿತ ದುಷ್ಕರ್ಮಿಗಳಿಂದ ದಾಳಿ

ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರು: ಕಲ್ಲು ಹೊಡೆದು ಬಸ್ ಚಾಲಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಶುಕ್ರವಾರ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ ತಡೆದ ಅಪರಿಚಿತ ದುಷ್ಕರ್ಮಿಗಳು ಚಾಲಕ ನಬಿ ರಸೂಲ್ ಆವಟಿ (59) ಅವರನ್ನು ಕಲ್ಲು ಹೊಡೆದು ಸಾಯಿಸಿದ್ದಾರೆ.

ಮುಷ್ಕರದ ನಡುವೆ ಮೇಲಧಿಕಾರಿಗಳ ಕರೆಗೆ ಓಗೊಟ್ಟು ನಬಿ ರಸೂಲ್ ಆವಟಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ. ಜಮಖಂಡಿ ಡಿಪೋಗೆ ಸೇರಿದ ಬಸ್‌ ಇದಾಗಿದ್ದು, ಜಮಖಂಡಿ–ವಿಜಯಪುರ ಹಾಗೂ ಮಹಾರಾಷ್ಟ್ರದ ಘತ್ತರಗಾ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಕೋವಿಡ್‌ ಸೋಂಕು ಹೆಚ್ಚಳದ ಕಾರಣ ಘತ್ತರಗಾಕ್ಕೆ ಹೋಗದೇ ವಿಜಯಪುರ–ಜಮಖಂಡಿ ಮಧ್ಯೆ ಮಾತ್ರ ಸಂಚರಿಸುತ್ತಿತ್ತು.

ಬಸ್‌ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಮುನ್ನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆಯೇ ನಿರ್ಜನ ಪ್ರದೇಶದಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಅಡ್ಡಹಾಕಿ ಚಾಲಕನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ತಲೆಗೆ ಪೆಟ್ಟು ಬಿದ್ದು ನಬಿ ರಸೂಲ್ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿದ್ದಾರೆ.  ಬಸ್‌ನಲ್ಲಿದ್ದ ಪ್ರಯಾಣಿಕರು, ಸ್ಥಳೀಯರ ನೆರವಿನಿಂದ ಜಮಖಂಡಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಜಮಖಂಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. 

ಜಮಖಂಡಿಯ ಆವಟಿ ಗಲ್ಲಿಯ ನಿವಾಸಿಯಾದ ನಬಿ ರಸೂಲ್ ಅವರಿಗೆ ಪತ್ನಿ ಹಾಗೂ ನಾಲ್ವರು ಪುತ್ರರು ಇದ್ದಾರೆ. ಅವರ ಸೇವಾ ನಿವೃತ್ತಿ  ಇನ್ನೊಂದು ವರ್ಷ ಮಾತ್ರ ಇದೆ.

’ಮುಷ್ಕರದ ಕಾರಣ ಪತಿ ಮನೆಯಲ್ಲಿಯೇ ಇದ್ದರು. ಮನೆಗೆ ಬಂದ ಸಂಸ್ಥೆಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಬೆದರಿದ ಪತಿ  ಗುರುವಾರದಿಂದ ಕೆಲಸಕ್ಕೆ ಹೋಗಿದ್ದರು. ಮೊದಲ ದಿನ ಜಮಖಂಡಿ–ಮಹಾಲಿಂಗಪುರ ನಡುವೆ ಬಸ್ ಓಡಿಸಿದ್ದರು. ಈಗ ಅವರೇ ಇಲ್ಲ. ಮೇಲಧಿಕಾರಿಗಳ ಬೆದರಿಕೆಗೆ ಅವರು ಜೀವವನ್ನೇ ಕಳೆದುಕೊಂಡರು‘ ಎಂದು ನಬಿ ಅವರ ಪತ್ನಿ ಸಾಯಿರಾಬಾನು ಆಸ್ಪತ್ರೆ ಎದುರು ಕಣ್ಣೀರು ಹಾಕಿದರು.

ಚಿನ್ನದ ಪದಕ ಪಡೆದಿದ್ದರು

1984ರಲ್ಲಿ ನಬಿ ರಸೂಲ್ ಆವಟಿ ಅವರು ಸಾರಿಗೆ ಸಂಸ್ಥೆಯ ನೌಕರಿಗೆ ಸೇರಿದ್ದರು. ತಮ್ಮ 37 ವರ್ಷಗಳ ಸೇವಾ ಅವಧಿಯಲ್ಲಿ ಒಮ್ಮೆಯೂ ಅಪಘಾತ ಮಾಡದ ಕಾರಣ 2015ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ನಿವೃತ್ತಿ ಅಂಚಿಗೆ ಬಂದಿದ್ದ ಅವರಿಗೆ ಡಿಪೋ ಹಾಗೂ ಬಸ್‌ ನಿಲ್ದಾಣದಲ್ಲಿಯೇ ಕೆಲಸ ನೀಡಲಾಗಿತ್ತು. ಇತ್ತೀಚೆಗೆ ಅವರು ಚಾಲಕರಾಗಿ ಹೊರಗೆ ಹೋಗುತ್ತಿರಲಿಲ್ಲ. ಸಿಬ್ಬಂದಿ ಮುಷ್ಕರದ ಕಾರಣ ಅನಿವಾರ್ಯವಾಗಿ ಅವರನ್ನು ಕರ್ತವ್ಯಕ್ಕೆ ಕಳುಹಿಸಲಾಗಿತ್ತು ಎಂದು ನಬಿ ಅವರ ಸಹೊದ್ಯೋಗಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

ಮತ್ತೊಂದು ಬಸ್‌ಗೆ ಕಲ್ಲು...

ಘತ್ತರಗಾ ಬಸ್‌ ಮೇಲೆ ಕಲ್ಲು ತೂರಾಟಕ್ಕೂ ಮುನ್ನ ಅದೇ ಮಾರ್ಗದಲ್ಲಿ ಆಲಗೂರಿನಲ್ಲಿ ಮತ್ತೊಂದು ಬಸ್‌ ಮೇಲೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲಿ ಜನ ಸೇರುತ್ತಿದ್ದಂತೆಯೇ ಪರಾರಿಯಾಗಿದ್ದಾರೆ.

ಎರಡು ಬಸ್‌ಗಳ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದವಾಗಿ ವರ್ತಿಸಿದ 10ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು ಜಮಖಂಡಿ ನಗರ ಠಾಣೆಗೆ ಕರೆತಂದು ವಿಚಾರಣೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್ ಭೇಟಿ ನೀಡಿ ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು