ಮಂಗಳವಾರ, ಏಪ್ರಿಲ್ 20, 2021
26 °C

ಬಿಬಿಎಂಪಿ: ಕಸ ವಿಲೇವಾರಿಗೆ ಹೊಸ ಸಂಸ್ಥೆ ಆರಂಭಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹ ಮತ್ತು ವಿಲೇವಾರಿಗೆ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪಾಲುದಾರಿಕೆಯಲ್ಲಿ ‘ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ’ (ಬಿಎಸ್‌ಡಬ್ಲ್ಯುಎಂಎಲ್‌) ಎಂಬ ಕಂಪನಿಯನ್ನು ಪ್ರಾರಂಭಿಸುವ ಪ್ರಸ್ತಾವಕ್ಕೆ ಬುಧವಾರ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಈ ಬಗ್ಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ‘ಬಿಬಿಎಂಪಿಯನ್ನು ಕಸ ವಿಲೇವಾರಿ ಕೆಲಸದಿಂದ ಮುಕ್ತಗೊಳಿಸುವ ಉದ್ದೇಶದಿಂದ ನೂತನ ಕಂಪನಿಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಬಿಬಿಎಂಪಿಯ ಶೇ 51ರಷ್ಟು ಮತ್ತು ರಾಜ್ಯ ಸರ್ಕಾರದ ಶೇ 49ರಷ್ಟು ಪಾಲುದಾರಿಕೆಯೊಂದಿಗೆ ಕಂಪನಿ ಆರಂಭವಾಗಲಿದೆ’ ಎಂದರು.

ಬಿಎಸ್‌ಡಬ್ಲ್ಯುಎಂಎಲ್‌ ಅಧ್ಯಕ್ಷರಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಹ ಅಧ್ಯಕ್ಷರಾಗಿ ಬಿಬಿಎಂಪಿ ಆಯುಕ್ತರು ಕಾರ್ಯನಿರ್ವಹಿಸುತ್ತಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಹುದ್ದೆಗೆ ಸಮನಾದ ಅರ್ಹತೆಯುಳ್ಳ ವ್ಯಕ್ತಿಯನ್ನು ಆಡಳಿತ ಮಂಡಳಿಯು ನೇಮಕ ಮಾಡುತ್ತದೆ. ಪಾಲಿಕೆಯಿಂದ ಇಬ್ಬರು, ರಾಜ್ಯ ಸರ್ಕಾರದಿಂದ ಮೂವರು ಪದನಿಮಿತ್ತ ನಿರ್ದೇಶಕರು ಇರಲಿದ್ದು, ಕಸ ನಿರ್ವಹಣೆಯಲ್ಲಿ ತಜ್ಞರಾಗಿರುವ ಇಬ್ಬರು ನಿರ್ದೇಶಕರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನಕ್ಕೆ 5000 ಟನ್‌ಗಳಷ್ಟು ಕಸ ಉತ್ಪತ್ತಿಯಾಗುತ್ತಿದೆ. ಸಂಪೂರ್ಣ ಕಸ ಸಂಗ್ರಹ, ಸಾಗಣೆ, ವಿಲೇವಾರಿ ಎಲ್ಲವನ್ನೂ ಕಂಪನಿಯೇ ನಿರ್ವಹಿಸುತ್ತದೆ. ರಾಜ್ಯ ಸರ್ಕಾರ ಒದಗಿಸುವ ಅನುದಾನ, ಬಳಕೆದಾರರ ಶುಲ್ಕ ಮತ್ತು ಬಿಬಿಎಂಪಿ ನಿಧಿಯಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತದೆ. ಕಸ ನಿರ್ವಹಣೆಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಕಂಪನಿ ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬಿಬಿಎಂಪಿಯ ನೂತನ ಕಾಯ್ದೆಯ ಅಡಿಯಲ್ಲಿ ಕಂಪನಿ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಸದಿಂದ ಕಾಂಪೋಸ್ಟ್‌ ತಯಾರಿ, ವಿದ್ಯುತ್‌ ಉತ್ಪಾದನೆ ಮಾಡುವ ಹೊಣೆಗಳನ್ನೂ ಕಂಪನಿಗೆ ವರ್ಗಾಯಿಸಲಾಗುವುದು. ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳ ನಿರ್ಮಾಣ, ನಿರ್ವಹಣೆಯನ್ನೂ ಹೊಸ ಕಂಪನಿ ಮಾಡಲಿದೆ ಎಂದರು.

ಗುತ್ತಿಗೆ ಪದ್ಧತಿ ರದ್ದು: ಬಿಎಸ್‌ಡಬ್ಲ್ಯುಎಂಎಲ್‌ ಅಸ್ತಿತ್ವಕ್ಕೆ ಬಂದ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಗುತ್ತಿಗೆ ವ್ಯವಸ್ಥೆ ರದ್ದಾಗಲಿದೆ. ಮುಂದೆ ಪಾಲಿಕೆಯ ಮೂಲಕ ಯಾವುದೇ ಟೆಂಡರ್‌ ಪ್ರಕ್ರಿಯೆಗಳೂ ನಡೆಯುವುದಿಲ್ಲ. ಆ ಎಲ್ಲ ಪ್ರಕ್ರಿಯೆಗಳನ್ನೂ ಬಿಎಸ್‌ಡಬ್ಲ್ಯುಎಂಎಲ್‌ನಿರ್ವಹಿಸುತ್ತದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಮಾಫಿಯಾದಿಂದಾಗಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಯಾವುದೇ ಮಿಶ್ರ ಕಸ ಭೂಭರ್ತಿ ಕೇಂದ್ರವನ್ನು ತಲುಪಬಾರದು ಎಂದು ಹಸಿರು ನ್ಯಾಯಮಂಡಳಿ ಸೂಚನೆ ನೀಡಿದ್ದರೂ ಅದರ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈಗಲೂ ನಿತ್ಯ 3 ಸಾವಿರ ಟನ್‌ಗಳಷ್ಟು ಮಿಶ್ರ ಕಸ ಭೂಭರ್ತಿ ಕೇಂದ್ರವನ್ನು ತಲುಪುತ್ತಿದೆ. ಗುತ್ತಿಗೆದಾರರು ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ನಡುವಿನ ಅಪವಿತ್ರ ಮೈತ್ರಿಯಿಂದಾಗಿ ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದವು. ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆಯಲ್ಲೂ ಬಿಬಿಎಂಪಿಯ ಕಳಪೆ ಸಾಧನೆ ಮಾಡುವುದಕ್ಕೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ಕೂಡಾ ಕಾರಣವಾಗಿತ್ತು. ಈ ಸಮಸ್ಯೆಗೆ  ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.

ನೀರು ಪೂರೈಕೆ: ಮರು ಪರಿಶೀಲನೆಗೆ ನಿರ್ಧಾರ

ಆನೇಕಲ್‌ ತಾಲ್ಲೂಕಿನ ಸೂರ್ಯನಗರ ಮತ್ತು ಸುತ್ತಲಿನ 52 ಗ್ರಾಮಗಳಿಗೆ ಜಲ ಜೀವನ್ ಮಿಷನ್‌ನಡಿ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡುವ ಪ್ರಸ್ತಾವ ಸಂಪುಟ ಸಭೆಯ ಮುಂದಿತ್ತು. ಆದರೆ, ಯೋಜನೆಯನ್ನು ಮರು ಪರಿಶೀಲಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು