ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಅಸ್ತ್ರ; ಮಾಂಸ ಮಾರಾಟಕ್ಕೆ ಇಲ್ಲ ಅಡ್ಡಿ

Last Updated 28 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶದ ಮಾದರಿಯ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಸೋಮವಾರ ನಡೆದ ಸಂಪುಟ ಸಭೆ ತೀರ್ಮಾನಿಸಿದೆ.

ಹಸು ಮತ್ತು ಎತ್ತುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಗೋಹತ್ಯೆ ಮಾಡಿದವರಿಗೆ ದಂಡ ಮತ್ತು ಕಠಿಣ ಜೈಲು ಶಿಕ್ಷೆ ವಿಧಿಸಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಿದೆ. ವಿಧಾನಮಂಡಲದ ಕಳೆದ ಅಧಿವೇಶನದಲ್ಲಿ ಮಸೂದೆಗೆ ವಿಧಾನಸಭೆಯ ಒಪ್ಪಿಗೆ ದೊರಕಿತ್ತು. ಆದರೆ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಗದ್ದಲದಿಂದಾಗಿ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಲು ಅವಕಾಶವೇ ದೊರಕಿರಲಿಲ್ಲ.

ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಮಂಗಳವಾರವೇ ರಾಜಭವನಕ್ಕೆ ಸುಗ್ರೀವಾಜ್ಞೆಯ ಪ್ರತಿ ಕಳುಹಿಸಿ, ತಕ್ಷಣವೇ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗುವುದು’ ಎಂದರು.

1964ರಿಂದಲೂ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಮಸೂದೆಗೆ ಕೆಲವು ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ. ಮಹಾತ್ಮ ಗಾಂಧಿಯವರ ಆಶಯ ಮತ್ತು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳಿಗೆ ಅನುಗುಣವಾಗಿ ಈ ತಿದ್ದುಪಡಿಗಳನ್ನು ತರಲಾಗಿದೆ. ಆರ್‌ಎಸ್‌ಎಸ್‌ ಅಥವಾ ಬಿಜೆಪಿಯ ಯೋಚನೆಗಳ ಕಾರಣದಿಂದ ಈ ತಿದ್ದುಪಡಿ ತಂದಿಲ್ಲ ಎಂದು ಹೇಳಿದರು.

ಕೋಣ, ಎಮ್ಮೆ ಮಾಂಸ ಮಾರಬಹುದು: 12 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಸು, ಎತ್ತು, ಎಮ್ಮೆ ಮತ್ತು ಕೋಣಗಳನ್ನು ವಧಿಸಲು ಈಗಿರುವ ಕಾಯ್ದೆಯಲ್ಲಿ ಅವಕಾಶವಿದೆ. ಹಸು ಮತ್ತು ಎತ್ತುಗಳ ಹತ್ಯೆಯನ್ನು ಮಾತ್ರ ನಿಷೇಧಿಸಲಾಗುವುದು. 13 ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆ ಹಾಗೂ ಕೋಣಗಳನ್ನು ವಧಿಸಲು ಅವಕಾಶ ದೊರೆಯಲಿದೆ. ಈ ಕಾಯ್ದೆಯ ಜಾರಿಯಿಂದ ಗೋಮಾಂಸ ಮಾರಾಟ, ಬಳಕೆ ನಿಷೇಧವಾಗುವುದಿಲ್ಲ. ಚರ್ಮೋದ್ಯಮಕ್ಕೂ ತೊಂದರೆ ಆಗುವುದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಹಸು ಮತ್ತು ಎತ್ತುಗಳಿಗೆ ಜೀವಮಾನ ಪೂರ್ತಿ ರಕ್ಷಣೆ ದೊರಕಲಿದೆ. ಗೋಹತ್ಯೆಯಲ್ಲಿ ಭಾಗಿಯಾದವರನ್ನು ಶಿಕ್ಷಿಸಲು ಸ್ಥಳೀಯ ಸಕ್ಷಮ ಪ್ರಾಧಿಕಾರಗಳ ರಚನೆಗೆ ಅವಕಾಶ ದೊರಕಲಿದೆ. ಹತ್ಯೆಯ ಉದ್ದೇಶಕ್ಕೆ ಗೋ ಸಾಗಣೆ ಮತ್ತು ಹತ್ಯೆಯನ್ನು ತಡೆಯಲು ಸದುದ್ದೇಶದಿಂದ ನೆರವಾದವರಿಗೆ ಮಾತ್ರ ಈ ಕಾಯ್ದೆಯಡಿ ರಕ್ಷಣೆ ದೊರಕುತ್ತದೆ ಎಂದರು.

ತೊಡಕು ನಿವಾರಣೆ: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ‘2010ರಲ್ಲಿ ಎಮ್ಮೆ ಮತ್ತು ಕೋಣಗಳ ಹತ್ಯೆಯನ್ನೂ ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ಮಸೂದೆಗೆ ಕೇಂದ್ರಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಈ ಬಾರಿ ಅಂತಹ ತೊಡಕುಗಳನ್ನು ನಿವಾರಣೆ ಮಾಡಲಾಗಿದೆ. ಆದರೂ ಕಾಂಗ್ರೆಸ್‌ ಪಕ್ಷದ ಕುತಂತ್ರದ ಕಾರಣದಿಂದ ವಿಧಾನ ಪರಿಷತ್‌ನಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಗೋಹತ್ಯೆ ನಿಷೇಧಕ್ಕೆ ನಾವು ಬದ್ಧರಾಗಿದ್ದೇವೆ. ಅದಕ್ಕಾಗಿಯೇ ಸುಗ್ರೀವಾಜ್ಞೆ ಜಾರಿಯ ನಿರ್ಧಾರ ಮಾಡಿದ್ದೇವೆ’ ಎಂದು ಹೇಳಿದರು.

ಜ.18ಕ್ಕೆ ಅಧಿವೇಶನ?: ಜನವರಿ 18ರಂದು ವಿಧಾನಮಂಡಲದ ಜಂಟಿ ಅಧಿವೇಶನ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ. ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

‘ವಿಧಾನಮಂಡಲ ಅಧಿವೇಶನದ ಕುರಿತು ಚರ್ಚೆ ನಡೆಸಿದ್ದೇವೆ. ಆದರೆ, ತೀರ್ಮಾನಿಸಿಲ್ಲ. ಜನವರಿ 1ರ ಬಳಿಕ ಜಂಟಿ ಅಧಿವೇಶನ ನಡೆಸುವುದು ಕಡ್ಡಾಯ. ಹೀಗಾಗಿ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ವಯಸ್ಸಾದ ಹಸುಗಳಿಗೆ ದುಡ್ಡು ಕೊಡ್ತಾರಾ?: ‘ವಯಸ್ಸಾದ ಹಸುವೊಂದನ್ನು ಸಾಕಲು ರೈತನಿಗೆ ನಿತ್ಯ 100 ರೂಪಾಯಿ ಖರ್ಚಾಗುತ್ತೆ, ಅದನ್ನೇನಾದ್ರೂ ಬಿಜೆಪಿಯವರು ಕೊಡ್ತಾರಾ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ’ವಯಸ್ಸಾದ ಹಸು, ಗಂಡು ಕರುಗಳು ಹೀಗೆ ಅನುಪಯುಕ್ತ ಜಾನುವಾರುಗಳನ್ನು ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರೆ ನನ್ನನ್ನು ಗೋಮಾತೆಯ ವಿರೋಧಿ ಅಂತಾರೆ’ ಎಂದು ಅವರು ಹೇಳಿದ್ದಾರೆ. ‘ನಾವು ಮಹಾತ್ಮ ಗಾಂಧಿಯವರು ಬೋಧಿಸಿದ ಹಿಂದುತ್ವದ ಹಾದಿಯಲ್ಲಿ ನಡೆಯುವವರು. ಬಿಜೆಪಿಯವರಂತೆ ಧರ್ಮ, ದೇವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರಲ್ಲ. ನಾನು ಹಿಂದೂ, ಗಾಂಧೀಜಿಯವರು ಹಿಂದೂ, ಗೋಪಾಲಕೃಷ್ಣ ಗೋಖಲೆ ಅವರು ಹಿಂದೂ, ನಮ್ಮದು ಪ್ರೀತಿಸುವ ಹಿಂದುತ್ವವಾದರೆ, ಬಿಜೆಪಿಯವರದು ದ್ವೇಷಿಸುವ ಹಿಂದುತ್ವ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT