ಶುಕ್ರವಾರ, ಸೆಪ್ಟೆಂಬರ್ 17, 2021
29 °C
‘ಕಾವೇರಿ ಕೂಗು’ ಕಾರ್ಯಕ್ರಮ

ವನ್ಯಜೀವಿ ರಕ್ಷಣೆಗೆ ಲಿಡಾರ್ ತಂತ್ರಜ್ಞಾನ ಬಳಕೆ: ಸಚಿವ ಪ್ರಕಾಶ್‌ ಜಾವಡೇಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವನ್ಯಜೀವಿ–ಮಾನವ ಸಂಘರ್ಷ ಹೆಚ್ಚುತ್ತಿದೆ. ಆಹಾರ–ನೀರು ಅರಸಿ ಪ್ರಾಣಿಗಳು ನಗರ ಪ್ರವೇಶಿಸುತ್ತಿವೆ. ಲಿಡಾರ್‌ ತಂತ್ರಜ್ಞಾನವನ್ನು ಬಳಸಿ ಅವುಗಳು ಇರುವಲ್ಲಿಯೇ ಆಹಾರ–ನೀರು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಜಾರಿಗೆ ತರುತ್ತಿದೆ’ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

ನಗರದಲ್ಲಿ ಭಾನುವಾರ ಈಶ ಫೌಂಡೇಷನ್‌ನ ‘ಕಾವೇರಿ ಕೂಗು’ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಾನವ–ಆನೆ ಸಂಘರ್ಷದಲ್ಲಿ ಪ್ರತಿ ವರ್ಷ 500 ಜನ ಸಾವಿಗೀಡಾಗುತ್ತಿದ್ದರೆ, 100 ಆನೆಗಳೂ ಮರಣ ಹೊಂದುತ್ತಿವೆ’ ಎಂದರು.

‘ಲಿಡಾರ್ (ಲೈಟ್‌ ಡಿಟೆಕ್ಷನ್‌ ಅಂಡ್‌ ರೇಂಜಿಂಗ್ ) ತಂತ್ರಜ್ಞಾನವು ಅರಣ್ಯಪ್ರದೇಶದ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ನೀರಿನ ಲಭ್ಯತೆ ಎಲ್ಲಿದೆ ಅಥವಾ ನೀರಿನ ಒದಗಿಸಲು ಇರುವ ಸೂಕ್ತ ಸ್ಥಳ ಯಾವುದು, ಪ್ರಾಣಿಗಳಿಗೆ ಹುಲ್ಲು ಅಥವಾ ಆಹಾರ ಯಾವ ಸ್ಥಳದಲ್ಲಿ ಸಿಗುತ್ತದೆ ಎಂಬುದನ್ನು ನಿಖರವಾಗಿ ತಿಳಿದು, ಒದಗಿಸುವ ಕೆಲಸ ಮಾಡಲಾಗುತ್ತದೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಅರಣ್ಯ ಸಂರಕ್ಷಣೆಯ ಉದ್ದೇಶಕ್ಕೆ ಈ ಬಾರಿಯ ಬಜೆಟ್‌ನಲ್ಲಿ ₹2,945 ಕೋಟಿ ತೆಗೆದಿರಿಸಲಾಗಿದೆ. 2019ರಲ್ಲಿ ರಾಜ್ಯದಲ್ಲಿ 1,025 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಅಬಿವೃದ್ಧಿ ಪಡಿಸುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದೇವೆ’ ಎಂದರು.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ನೆಟ್ಟು ಮೂರು ವರ್ಷ ಪೋಷಿಸುವ ರೈತರಿಗೆ ಪ್ರತಿ ಸಸಿಗೆ ₹125 ಪ್ರೋತ್ಸಾಹ ಧನವನ್ನು ಅರಣ್ಯ ಇಲಾಖೆ ಮೂಲಕ ನೀಡಲಾಗುತ್ತಿದೆ’ ಎಂದು ಹೇಳಿದರು.

ಇದನ್ನೂ ಓದಿ... ಕೋವಿಡ್‌ | ಜನ ಎಚ್ಚರಿಕೆ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ಡಾ. ಸುಧಾಕರ್

ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಅಭಿವೃದ್ಧಿಯ ಹೆಸರಲ್ಲಿ ನಾವು ಕಾಂಕ್ರೀಟ್ ಕಾಡುಗಳನ್ನು ಸೃಷ್ಟಿಸುತ್ತಿದ್ದೇವೆ. ನಾವು ಉಳಿಯಬೇಕೆಂದರೆ ಜಲಮೂಲಗಳನ್ನು, ಪರಿಸರವನ್ನು ಸಂರಕ್ಷಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಕಾವೇರಿ ಕೂಗು ಅಭಿಯಾನ ಅತಿ ಮಹತ್ವದ್ದಾಗಿದೆ’ ಎಂದು ಶ್ಲಾಘಿಸಿದರು.

ಈಶ ಫೌಂಡೇಷನ್‌ ಸ್ಥಾಪಕ ಜಗ್ಗಿ ವಾಸುದೇವ್, ‘2019ರ ಸೆಪ್ಟೆಂಬರ್‌ನಲ್ಲಿ ಕಾವೇರಿ ಕೂಗು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅವಧಿಯಲ್ಲಿ ಕಾವೇರಿ ಕೊಳ್ಳದ 189 ತಾಲ್ಲೂಕುಗಳಲ್ಲಿ 1.1 ಕೋಟಿ ಸಸಿಗಳನ್ನು ನೆಡಲಾಗಿದೆ. 33 ಸಾವಿರ ರೈತರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘12 ವರ್ಷಗಳ ಈ ಅಭಿಯಾನದಲ್ಲಿ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅರಣ್ಯಕೃಷಿಯ ಮೂಲಕ ರೈತರ ಆದಾಯವನ್ನು 8 ಪಟ್ಟು ಹೆಚ್ಚಿಸುವ ಉದ್ದೇಶವಿದೆ. 166 ದೇಶಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ, ಸಂಗ್ರಹವಾದ ಒಟ್ಟು ಮೊತ್ತವೆಷ್ಟು ಎಂಬುದರ ಬಗ್ಗೆ ಇನ್ನೂ ಲೆಕ್ಕಪರಿಶೋಧನೆ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು