ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಲ್ಲಿ 5 ಬಾರಿ ಸಿಬಿಐ, ಐಟಿ, ಇ.ಡಿ ಸಮನ್ಸ್! ಡಿಕೆಶಿ ಆಪ್ತರ ಆರೋಪ

ಕೇಂದ್ರ ಸರ್ಕಾರದಿಂದ ಪದೇ ಪದೇ ಕಿರುಕುಳ- ಡಿಕೆಶಿ ಆಪ್ತರ ಆರೋಪ
Last Updated 14 ನವೆಂಬರ್ 2022, 0:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ನ. 14) ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮುಂದೆ ಹಾಜರಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಇದೇ ತಿಂಗಳು ಬೇರೆ ಬೇರೆ ದಿನಗಳಲ್ಲಿ ಇನ್ನೂ ನಾಲ್ಕು ಪ್ರಕರಣಗಳಲ್ಲಿ ಸಿಬಿಐ, ಐಟಿ, ಇ.ಡಿ, ಹೈಕೋರ್ಟ್‌ ವಿಚಾರಣೆ ಎದುರಿಸಲಿದ್ದಾರೆ.

‘ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ನಮ್ಮ ನಾಯಕನಿಗೆ ಕೇಂದ್ರ ಸರ್ಕಾರ ಪದೇ ಪದೇ ಕಿರುಕುಳ ನೀಡುತ್ತಿದೆ. ಆ ಮೂಲಕ, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡದಂತೆ ತೊಂದರೆ ಕೊಡುತ್ತಿದೆ’ ಎಂದು ಶಿವಕುಮಾರ್ ಆಪ್ತರು ಆರೋಪಿಸಿದ್ದಾರೆ.

‘ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಲ್ಲಿ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಇದೇ 18ರಂದು ರಾಜ್ಯ ಹೈಕೋರ್ಟ್‌ನಲ್ಲಿ ಶಿವಕುಮಾರ್‌ ವಿಚಾರಣೆಗೆ ಹಾಜರಾಗಬೇಕಿದೆ. ಮರುದಿನ (ನ. 19) ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಐಟಿ ಮತ್ತು ಇತರ ಎರಡು ಪ್ರಕರಣಗಳ ವಿಚಾರಣೆ ನಡೆಯಲಿದ್ದು, ಅದಕ್ಕೂ ಅವರು ಹಾಜರಾಗಬೇಕಿದೆ. ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಚೆನ್ನೈನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 21ರಂದು ವರ್ಚುವಲ್‌ ಮೂಲಕ ವಿಚಾರಣೆಗೆ ಹಾಜರಾಗಬೇಕಾಗಿದ್ದು, ದೆಹಲಿಯ ರೋಸ್‌ ಅವೆನ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಹಣ ಪತ್ತೆಯಾದ ಘಟನೆಯಲ್ಲಿ ಇ.ಡಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ 23ರಂದು ವಿಚಾರಣೆ ಎದುರಿಸಬೇಕಾಗಿದೆ’ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ನ. 7ರಂದು ತನ್ನ ಮುಂದೆ ಹಾಜರಾಗುವಂತೆ ಡಿ.ಕೆ. ಶಿವಕುಮಾರ್‌ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್‌ ಅವರಿಗೆ ಇ.ಡಿ ನೋಟಿಸ್‌ ನೀಡಿತ್ತು. ಆದರೆ, ವಿಚಾರಣೆಗೆ ಹಾಜರಾಗುವುದರಿಂದ ಶಿವಕುಮಾರ್‌ ವಿನಾಯಿತಿ ಪಡೆದಿದ್ದರು. ಅದರ ಹಿಂದಿನ ದಿನ (ನ. 6) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಕಾಂಗ್ರೆಸ್‌ ಘಟಕದ ವತಿಯಿಂದ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದೇ ದಿನ ರಾತ್ರಿ ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದ ಶಿವಕುಮಾರ್‌ ಮತ್ತು ಸುರೇಶ್‌, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇಡಿ ವಿಚಾರಣೆ ಕುರಿತಂತೆ ಖರ್ಗೆ ಅವರ ಜೊತೆ ಚರ್ಚೆ ನಡೆಸಿದ್ದರು. ಅಂದು ಗೈರಾಗಿದ್ದರಿಂದ, ನ. 14ರಂದು ಹಾಜರಾಗುವಂತೆ ಇ.ಡಿ ಮತ್ತೆ ಸಮನ್ಸ್ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT