ಸೋಮವಾರ, ಜೂನ್ 21, 2021
28 °C

ಐಎಂಎ ಹಗರಣ: ರೋಷನ್ ಬೇಗ್ ವಿರುದ್ಧ ಸಿಬಿಐನಿಂದ ಪೂರಕ ದೋಷಾರೋಪ ಪಟ್ಟಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ₹ 4,000 ಕೋಟಿ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, ಅಂದಿನ ಐಎಂಎ ಗ್ರೂಪ್‌ನ ಎಂಡಿ ಮನ್ಸೂರ್ ಖಾನ್, ರೋಶನ್ ಬೇಗ್ ಅವರ ಕಂಪನಿಯ ದಾನೀಶ್ ಪಬ್ಲಿಕೇಶನ್ಸ್ ಮತ್ತು ಇತರರನ್ನು ಹೆಸರಿಸಿದೆ.

‘ಪ್ರಕರಣದ ಆರೋಪಿ ಮಾಜಿ ಸಚಿವರು ಚುನಾವಣಾ ವೆಚ್ಚಕ್ಕಾಗಿ ಐಎಂಎ ನಿಧಿಯಿಂದ ಹಲವಾರು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ತಮ್ಮ ಸಂಸ್ಥೆಯ ನೌಕರರ ವೇತನ ಸೇರಿದಂತೆ ದಿನನಿತ್ಯದ ಖರ್ಚಿಗೆ ಈ ಸಂಸ್ಥೆಯ ನಿಧಿಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಆರೋಪಿಯು ತನ್ನ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ’ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಎಂಎ ಗ್ರೂಪ್ ಇಸ್ಲಾಮಿಕ್ ಮಾರ್ಗಗಳನ್ನು ಅನುಸರಿಸಿ ಹೂಡಿಕೆಯ ಮೇಲೆ ಆಕರ್ಷಕ ಆದಾಯವನ್ನು ನೀಡುವುದಾಗಿ ನಂಬಿಸಿ ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಂದ ₹ 4,000 ಕೋಟಿ ಸಂಗ್ರಹಿಸಿದೆ ಎಂಬ ಆರೋಪ ಸಂಸ್ಥೆ ಮೇಲಿದೆ.

ಐಎಂಎ ಗ್ರೂಪ್ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಲು ಈ ಹಣವನ್ನು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಬೇಗ್‌ ಅವರಿಗೆ ವರ್ಗಾಯಿಸಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲಿಸಿತ್ತು. ಈ ಹಿಂದೆ ಮನ್ಸೂರ್ ಖಾನ್, ಕಂಪನಿ ನಿರ್ದೇಶಕರು, ಹಲವಾರು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 33 ಆರೋಪಿಗಳ ವಿರುದ್ಧ ಮೂರು ಚಾರ್ಜ್‌ಶೀಟ್‌ಗಳು ಮತ್ತು ಮೂರು ಪೂರಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು.

‘ಐಎಂಎ ಗ್ರೂಪ್ ಅನಧಿಕೃತ ಠೇವಣಿಗಳನ್ನು ಸಂಗ್ರಹಿಸಿದೆ. ಅಸಲು ಮತ್ತು ವಾಗ್ದಾನ ಮಾಡಿದ ಆದಾಯವನ್ನು ಮರುಪಾವತಿಸುವಲ್ಲಿ ವಿಫಲವಾಗುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ. ಜನರಿಂದ ಸಂಗ್ರಹಿಸಿದ ಹಣವನ್ನು ಆಸ್ತಿಗಳನ್ನು ಖರೀದಿಸಲು, ಲಂಚದ ಮೊತ್ತವನ್ನು ಪಾವತಿಸಲು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ, ಕೆಪಿಐಡಿಎಫ್‌ಇ (ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ) ಕಾಯ್ದೆ 2004 ರ ಅಡಿಯಲ್ಲಿ ಸ್ಥಿರ ಮತ್ತು ಚರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜೋಶಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು