ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಸಿಬಿಐ ಶೋಧ

Last Updated 19 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿರುವ ನ್ಯಾಷನಲ್ ಎಜುಕೇಷನ್ ಫೌಂಡೇಷನ್‌ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಶೋಧ ನಡೆಸಿದರು.

ಈ ಫೌಂಡೇಷನ್ ಅಡಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗಳ ಆಡಳಿತ ಮಂಡಳಿ ಕಚೇರಿಗಳಿಗೆ ಭೇಟಿ ಕೊಟ್ಟ ಅಧಿಕಾರಿಗಳ ತಣಡ ದಾಖಲೆಗಳನ್ನು ಪರಿಶೀಲಿಸಿತು. ಸಾರ್ವಜನಿಕ ಹಣ ದುರ್ಬಳಕೆ ಆರೋಪದಲ್ಲಿ ಸಿಬಿಐ, ಈ ದಾಳಿ ನಡೆಸಿದೆ. ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದಲೂ ದಾಖಲೆಗಳ ಕುರಿತು ಮಾಹಿತಿ ಪಡೆಯಿತು.

ರಾಜರಾಜೇಶ್ವರಿ ನಗರದಲ್ಲಿರುವ ಈ ಶಿಕ್ಷಣ ಸಂಸ್ಥೆ, 2000ನೇ ಇಸವಿಯಲ್ಲಿ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದರೆ, ಅವರ ಪತ್ನಿ ಉಷಾ ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಟ್ರಸ್ಟಿಯಾಗಿದ್ದಾರೆ. ಮಗಳು ಡಿ.ಕೆ.ಎಸ್. ಐಶ್ವರ್ಯ ಅವರು ಟ್ರಸ್ಟಿ ಕಾರ್ಯದರ್ಶಿಯಾಗಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದಾರೆ. ಇದೇ ವೇಳೆ ರಾಜಧಾನಿಯಲ್ಲಿನ ಅವರ ಅಧ್ಯಕ್ಷತೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿ, ದಾಖಲೆಗಳನ್ನು ಪಡೆದು ವಾಪಸ್ ತೆರಳಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಅವರ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ(ಐ.ಟಿ) ಮತ್ತು ಜಾರಿ ನಿರ್ದೇಶನಾಲಯ(ಇ.ಡಿ) ಕೂಡ ದಾಳಿ ನಡೆಸಿತ್ತು. ಈ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬ ಸದ್ಯ ವಿಚಾರಣೆ ಎದುರಿಸುತ್ತಿದೆ.

ತಪ್ಪು ಮಾಡಿಲ್ಲ, ಕಿರುಕುಳಕ್ಕೆ ಹೆದರಲ್ಲ– ಡಿಕೆಶಿ

ಬೆಳಗಾವಿ: ‘ಕಾಂಗ್ರೆಸ್ ಪಕ್ಷದವರನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿರೋಧಿಗಳನ್ನು ಮಟ್ಟಹಾಕಲು ಐಟಿ, ಇ.ಡಿ, ಸಿಬಿಐ ಮೂಲಕ ಕಿರುಕುಳ ನೀಡಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೂರಿದರು.

ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಕುಟುಂಬಕ್ಕೆ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ನ್ಯಾಯಾಲಯ, ದೇವರ ಮೇಲೆ ಭಾರ ಹಾಕಿ ಮುನ್ನಡೆಯುತ್ತೇವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಧೈರ್ಯವಾಗಿದ್ದೇನೆ’ ಎಂದರು.

‘ಈ ಹಿಂದೆ ಮೊಬೈಲ್ ಉಡುಗೊರೆಯಾಗಿ ನೀಡಿದ್ದಕ್ಕೆ ನೋಟಿಸ್ ನೀಡಿದ್ದರು. ನನ್ನ ಸಂಬಂಧಿಕರ ಜೊತೆಗಿನ ವ್ಯವಹಾರದ ಪಾಲುದಾರರಿಗೂ ನೋಟಿಸ್ ನೀಡಿ ಸಿಬಿಐ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ವಕೀಲರಿಗೆ ₹5 ಲಕ್ಷ ಶುಲ್ಕ ನೀಡಿರುವುದಕ್ಕೂ ನೋಟಿಸ್ ನೀಡಿದ್ದರು. ನಮ್ಮ ಜಮೀನು ವ್ಯವಹಾರದ ಬಗ್ಗೆಯೂ ತನಿಖೆ ಮಾಡಿದ್ದಾರೆ. ಈಗ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT