ಗುರುವಾರ , ಅಕ್ಟೋಬರ್ 22, 2020
25 °C

ಡಿ.ಕೆ. ಶಿವಕುಮಾರ್‌ ನಿವಾಸ, ಕಚೇರಿ ಮೇಲೆ ಸಿಬಿಐ ದಿಢೀರ್‌ ದಾಳಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನ ಸದಾಶಿವನಗರದ ಡಿ.ಕೆ. ಶಿವಕುಮಾರ್ ಮನೆ ಸೇರಿದಂತೆ 15 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಲ್ಲ ಕಡೆಗಳಲ್ಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳಿಗಾಗಿ ಶೋಧ ನಡೆಸಲಾಗುತ್ತಿದೆ.

ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನಂತರ ಆ ಪ್ರಕರಣದ ಸಿಬಿಐ ತನಿಖೆಗೂ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಒಂದು ವರ್ಷದಿಂದ ಸಿಬಿಐ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ15 ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ.

ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.‌ಸುರೇಶ್ ಅವರ ದೆಹಲಿಯ ಮನೆ ಮೇಲೂ ಸಿಬಿಐ ದಾಳಿ ನಡೆದಿದೆ. ಅಲ್ಲಿಯೂ ಹಲವು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ದೆಹಲಿಯಲ್ಲೂ‌ ದಾಳಿ

ನವದೆಹಲಿ: ಇಲ್ಲಿನ ನಾರ್ತ್ ಅವೆನ್ಯೂದಲ್ಲಿರುವ ನರ್ಮದಾ ಅಪಾರ್ಟ್ ಮೆಂಟ್ ನಲ್ಲಿರುವ ಸಂಸದ ಡಿ.ಕೆ. ಸುರೇಶ್ ಅವರ ನಿವಾಸದ ಮೇಲೂ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ತಪಾಸಣೆಯಲ್ಲಿ ತೊಡಗಿದ್ದಾರೆ.

ಇಲ್ಲಿನ ಸಫ್ದರ್‌ಜಂಗ್ ಎನ್ ಕ್ಲವೇ ನಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿರುವ ಫ್ಲ್ಯಾಟ್ ಗಳಲ್ಲೂ  ಸಿಬಿಐ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.

ದೊಡ್ಡಾಲಹಳ್ಳಿಯಲ್ಲಿ ಶೋಧ

ರಾಮನಗರ: ಡಿ.ಕೆ. ಶಿವಕುಮಾರ್ ಹುಟ್ಟೂರು ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ನಿವಾಸದ ಮೇಲೂ ಸೋಮವಾರ ಮುಂಜಾನೆ  ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಆಸ್ತಿ ವ್ಯವಹಾರಗಳ ದಾಖಲೆಗಳ ಪರಿಶೀಲನೆ ನಡೆಸಿದೆ.

ಸುಮಾರು ಎಂಟು ಅಧಿಕಾರಿಗಳನ್ನು ಒಳಗೊಂಡ ತಂಡವು ಮೂರು ಕಾರುಗಳಲ್ಲಿ ಬಂದಿದೆ. ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿರುವ ಡಿ.ಕೆ. ಸಹೋದರರ ಮನೆಗೂ ಅಧಿಕಾರಿಗಳ ಮತ್ತೊಂದು ತಂಡ ಭೇಟಿ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ ಎನ್ನಲಾಗಿದೆ. ಎರಡೂ ನಿವಾಸಗಳ ಸುತ್ತ ಜನರ ಓಡಾಟ ನಿರ್ಬಂಧಿಸಲಾಗಿದೆ.

ದಾಳಿಗೆ ಸಿದ್ದರಾಮಯ್ಯ ಆಕ್ರೋಶ 

ಬಿಜೆಪಿ ಪ್ರತೀಕಾರದ ರಾಜಕೀಯದಲ್ಲಿ ನಿರತವಾಗಿದೆ. ಈ ಮೂಲಕ ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಡಿಕೆ ಶಿವಕುಮಾರ್‌ ಅವರ ಮೇಲೆ ನಡೆದಿರುವ ಇವತ್ತಿನ ಸಿಬಿಐ ದಾಳಿಯು ಉಪಚುನಾವಣೆಯಲ್ಲಿನ ನಮ್ಮ ಸಿದ್ಧತೆಯನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವಾಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು