ಬುಧವಾರ, ಮಾರ್ಚ್ 29, 2023
32 °C
ಸಿಸಿಬಿ ತನಿಖೆ ಮೇಲೆಯೇ ಸಂಶಯ l ಸದ್ಯದ ಮಾರುಕಟ್ಟೆ ಮೌಲ್ಯ ₹14.35 ಕೋಟಿ

ಜಪ್ತಿ ಮಾಡಿದ್ದ 31 ಬಿಟ್ ಕಾಯಿನ್ ಮಾಯ!

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ಆನ್‌ಲೈನ್ ಗೇಮಿಂಗ್‌ ಜಾಲತಾಣಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ದೋಚುತ್ತಿದ್ದ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು (26) ಬಂಧಿಸಿದ್ದ ಸಿಸಿಬಿ ಪೊಲೀಸರ ತನಿಖೆ ಮೇಲೆಯೇ ಸಂಶಯ ಶುರುವಾಗಿದೆ.

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಬಿಟ್ ಕಾಯಿನ್ (ಬಿಟಿಸಿ) ಹಗರಣದ ಬಗ್ಗೆ ವಿದೇಶದ ಹಾಗೂ ಕೇಂದ್ರ ತನಿಖಾ ತಂಡಗಳು ಮಾಹಿತಿ ಕಲೆ ಹಾಕುತ್ತಿವೆ. ಶ್ರೀಕೃಷ್ಣನನ್ನು ಕಸ್ಟಡಿಗೆ ಪಡೆದಿದ್ದ ಸಿಸಿಬಿ ಪೊಲೀಸರು, ಯಾವ ರೀತಿ ವಿಚಾರಣೆ ನಡೆಸಿದರು ಎಂದು ಈ ತನಿಖಾ ತಂಡಗಳು ಪರಿಶೀಲಿಸುತ್ತಿವೆ ಎಂದು ಗೊತ್ತಾಗಿದೆ.

‘ಬಿಟ್ ಕಾಯಿನ್’ ಹಗರಣದ ಮೂಲ ಸೂತ್ರದಾರ ಎನ್ನಲಾದ ಶ್ರೀಕೃಷ್ಣನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಈತ ಅಂತರರಾಷ್ಟ್ರೀಯ ಹ್ಯಾಕರ್ ಎಂಬುದು ಗೊತ್ತಾಗಿತ್ತು. ಆತ ಎಸಗಿದ್ದ ಸಾಲು ಸಾಲು ಸೈಬರ್ ಅಪರಾಧಗಳನ್ನು ಪತ್ತೆ ಮಾಡಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಶ್ರೀಕೃಷ್ಣ, ಸ್ನೇಹಿತರಾದ ಸುನೀಶ್ ಹೆಗ್ಡೆ, ಪ್ರಸಿದ್ಧ ಶೆಟ್ಟಿ, ಸುಜಯ್ ರಾಜ್, ಹೇಮಂತ್ ಮುದ್ದಪ್ಪ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿತ್ತು. ಕಮಿಷನರ್ ಕಮಲ್ ಪಂತ್ ಹಾಗೂ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಅವರ ಆದೇಶದಂತೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಸಿಬಿಯ ಇನ್‌ಸ್ಪೆಕ್ಟರ್ ಜಿ. ಲಕ್ಷ್ಮಿಕಾಂತಯ್ಯ ನೇತೃತ್ವದ ತಂಡ, ಶ್ರೀಕೃಷ್ಣ ಸೇರಿದಂತೆ ಹಲವರನ್ನು ಬಂಧಿಸಿತ್ತು. ಮತ್ತೊಬ್ಬ ಆರೋಪಿ ರಾಬಿನ್ ಖಂಡೇಲ್‌ವಾಲಾ ಸಹ ಸಿಕ್ಕಿಬಿದ್ದಿದ್ದ.

ಶ್ರೀಕೃಷ್ಣನನ್ನು ಬಂಧಿಸಿದ್ದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದ ಸಿಸಿಬಿ ಪೊಲೀಸರು, ‘ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಲಾಗಿದೆ. ಆತನಿಂದ ₹ 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್ (ನ. 6ರಂದು ಮಾರುಕಟ್ಟೆ ಮೌಲ್ಯ ₹ 14.07 ಕೋಟಿ) ಜಪ್ತಿ ಮಾಡಿದ್ದೇವೆ’ ಎಂದಿದ್ದರು. ಈಗ ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ 31 ಬಿಟ್ ಕಾಯಿನ್‌ಗಳ ಬಗ್ಗೆ ಉಲ್ಲೇಖವೇ ಇಲ್ಲ. ಇದು, ಸಿಸಿಬಿ ಪೊಲೀಸರ ತನಿಖೆ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ. 31 ಬಿಟ್‌ ಕಾಯಿನ್‌ಗಳು ಎಲ್ಲಿ ಹೋದವು ಎಂಬ ಪ್ರಶ್ನೆಯೂ ಮೂಡಿದೆ.

‘ಶ್ರೀಕೃಷ್ಣನಿಂದ ಆ್ಯಪಲ್ ಕಂಪನಿ ಲ್ಯಾಪ್‌ಟಾಪ್ (ಡಿಸ್‌ಪ್ಲೇ ಒಡೆದಿರುವುದು), ಹಾರ್ಡ್‌ಡಿಸ್ಕ್, ವಿವಿಧ ಕಂಪನಿಯ ಮೂರು ವ್ಯಾಲೆಟ್, ಬ್ಯಾಗ್ ಮಾತ್ರ ಜಪ್ತಿ ಮಾಡಲಾಗಿದೆ’ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಆರೋಪಿಗೆ ಕ್ಲೀನ್‌ಚಿಟ್: ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ ಠಾಣೆಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಿ ಹೇಮಂತ್ ಮುದ್ದಪ್ಪನಿಗೆ ಪ್ರಕರಣದಿಂದ ಕ್ಲೀನ್‌ಚಿಟ್ ನೀಡಲಾಗಿದೆ. ಇದು, ಸಿಸಿಬಿ ತನಿಖೆ ಮೇಲೆ ಮತ್ತಷ್ಟು ಶಂಕೆ ಮೂಡಿಸಿದೆ. ಇನ್‌ಸ್ಪೆಕ್ಟರ್‌ ನೀಡಿದ್ದ ದೂರೇ ಸುಳ್ಳಾಯಿತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ತಮ್ಮದೇ ಸಿಸಿಬಿಯ ಇನ್‌ಸ್ಪೆಕ್ಟರ್ ದೂರು ನೀಡಿದ್ದ ಪ್ರಕರಣದ ಆರೋಪಿ ಹೇಮಂತ್‌ನನ್ನು ದೋಷಮುಕ್ತಗೊಳಿಸಲಾಗಿದೆ. ಶ್ರೀಕೃಷ್ಣನ ಕೃತ್ಯಕ್ಕೆ ಸಹಕರಿಸಿದ್ದ ಹಾಗೂ ರಾಜ್ಯ ಸರ್ಕಾರ ಇ–ಪ್ರೊಕ್ಯೂರ್‌ಮೆಂಟ್ ಜಾಲತಾಣದಿಂದ ಹಣ ಪಡೆದಿದ್ದ ಆರೋಪ ಹೊಂದಿರುವ ಹೇಮಂತ್‌ನನ್ನು ಆರೋಪ ಪಟ್ಟಿಯಿಂದ ಕೈಬಿಟ್ಟಿದ್ದು ಏಕೆ ? ಸಿಸಿಬಿ ಪೊಲೀಸರು ಪ್ರಭಾವಕ್ಕೆ ಒಳಗಾದರೆ? ಅಥವಾ ಪ್ರಭಾವಿಗಳ ಜೊತೆ ಸೇರಿ ಬಿಟ್ ಕಾಯಿನ್ ಹಗರಣಕ್ಕೆ ದಾರಿ ಮಾಡಿಕೊಟ್ಟರೆ? ಎಂಬ ಬಗ್ಗೆ ವಿದೇಶದ ಹಾಗೂ ಕೇಂದ್ರ ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿರುವುದಾಗಿ ಗೊತ್ತಾಗಿದೆ.

ವಿನಾಕಾರಣ ಆರೋಪ: ‘ಪ್ರಕರಣದಲ್ಲಿ ಸುಜಯ್‌ ರಾಜ್ (29) ವಿರುದ್ಧ ಸಿಸಿಬಿ ಪೊಲೀಸರು ವಿನಾಕಾರಣ ಆರೋಪ ಹೊರಿ
ಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತಿದೆ. ಸುಜಯ್‌ ಘನತೆಗೆ ಧಕ್ಕೆ ತರುವ ಸುದ್ದಿ ಪ್ರಕಟಿಸ
ದಂತೆಯೂ ತಡೆಯಾಜ್ಞೆ ಇದೆ’ ಎಂದು ಆತನ ಪರ ವಕೀಲ ಎಸ್. ಸುಧನ್ವ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು