ಗುರುವಾರ , ಮೇ 26, 2022
24 °C
ಕೋವಿಡ್‌ ತಡೆ ಮಾರ್ಗಸೂಚಿ ಪಾಲನೆ ಕಡ್ಡಾಯ l ಇಂದು (ಆ.31) ಆದೇಶ ಸಾಧ್ಯತೆ

ರಾಜ್ಯದಲ್ಲಿ ಕ್ಲಬ್, ಪಬ್, ಬಾರ್ ನಾಳೆಯಿಂದ (ಸೆ.1) ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರ ನಾಲ್ಕನೇ ಹಂತದ ಲಾಕ್‌ಡೌನ್‌ ತೆರವು (ಅನ್‌ಲಾಕ್‌–4) ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೆ, ರಾಜ್ಯದಲ್ಲಿ ಐದು ತಿಂಗಳುಗಳಿಂದ ಮುಚ್ಚಿದ್ದ ಕ್ಲಬ್, ಪಬ್, ಬಾರ್, ರೆಸ್ಟೋರೆಂಟ್‌ಗಳು ಸೆ. 1 ರಿಂದ ಕಾರ್ಯ ಆರಂಭಿಸಲಿವೆ. ಈ ಸಂಬಂಧ, ರಾಜ್ಯ ಸರ್ಕಾರ ಸೋಮವಾರ (ಆ.31) ಆದೇಶ ಹೊರಡಿಸಲಿದೆ.

ಅಬಕಾರಿ ಇಲಾಖೆಯ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ. ಆದ್ದರಿಂದ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅಬಕಾರಿ ಸಚಿವ ಎಚ್‌. ನಾಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮದ್ಯ ಪೂರೈಸುವ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನೂ ಪ್ರಕಟಿಸಲಾಗುವುದು. ಆದರೆ, ಕಾರ್ಯಾಚರಣೆ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಖ್ಯವಾಗಿ ಶೇ 50 ರಷ್ಟು ಗ್ರಾಹಕರಿಗೆ ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚು ಮಂದಿಗೆ ಅನುಮತಿ ನೀಡುವುದಿಲ್ಲ. ಅಲ್ಲದೆ, ಎಲ್ಲರೂ ಅಂತರ ಕಾಯ್ದುಕೊಳ್ಳಲೇ ಬೇಕು’ ಎಂದರು.

‘ರಾಜ್ಯ ಸರ್ಕಾರ, ಅಬಕಾರಿ ಇಲಾಖೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ (2020–21) ₹ 22,700 ಕೋಟಿ ವರಮಾನ ಗುರಿ ನಿಗದಿಪಡಿಸಿದೆ. ಆದರೆ, ಆರ್ಥಿಕ ವರ್ಷದ ಆರಂಭದಲ್ಲೇ ಲಾಕ್‌ಡೌನ್‌ ಕಾರಣ ಪಬ್‌, ಬಾರ್‌, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಯಿತು. ಇದರಿಂದ ಇಲಾಖೆಯ ವರಮಾನದಲ್ಲಿ ಭಾರಿ ಖೋತಾ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈವರೆಗೆ ₹1,435 ಕೋಟಿ ಖೋತಾ ಆಗಿದೆ. ಮದ್ಯ ಖರೀದಿಸಿ ಮನೆಗೆ ಕೊಂಡೊಯ್ಯಲು ಗ್ರಾಹಕರಿಗೆ ಅನುಮತಿ ನೀಡದೇ ಇರುತ್ತಿದ್ದರೆ, ಈ ಕೊರತೆ ₹3,000 ಕೋಟಿ ದಾಟುತ್ತಿತ್ತು. ಕೊರತೆಯನ್ನು ಡಿಸೆಂಬರ್‌ ಒಳಗಾಗಿ ಭರ್ತಿ ಮಾಡಿ, ಆರ್ಥಿಕ ವರ್ಷದ ಅಂತ್ಯಕ್ಕೆ ನಿಗದಿತ ಗುರಿ ತಲುಪುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

‘ಕೋವಿಡ್‌ ಇರುವುದರಿಂದ ಗುರಿ ಸಾಧಿಸುವ ಕಡೆಗಷ್ಟೇ ಇಲಾಖೆ ಗಮನಹರಿಸುವುದಿಲ್ಲ. ಜನರ ಆರೋಗ್ಯ, ಜೀವವೂ ಮುಖ್ಯ. ಹೀಗಾಗಿ, ಒತ್ತಾಯಪೂರ್ವಕ ಮದ್ಯಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ತೆರವುಗೊಂಡ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರೂ ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಪರವಾನಗಿ ಹೊಂದಿದ ಸ್ಥಳದಲ್ಲೇ ಮದ್ಯಸೇವನೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ರಾಜ್ಯದ ಎಲ್ಲ ಹೋಟೆಲ್, ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್‌ಗಳಲ್ಲಿ ಮದ್ಯ ಸರಬರಾಜು ನಿಲ್ಲಿಸಲಾಗಿತ್ತು. ಇದೀಗ ಈ ನಿರ್ಬಂಧ ಸಂಪೂರ್ಣ ತೆರವುಗೊಳ್ಳಲಿದೆ.

ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದ ಬೆನ್ನಲ್ಲೆ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಮೇ ತಿಂಗಳ ಆರಂಭದಲ್ಲಿ ಲಾಕ್‌ಡೌನ್‌ ನಿರ್ಬಂಧ ಸಡಿಲಿಸಿದ ಬಳಿಕ ಎಂಆರ್‌ಪಿ ಮಳಿಗೆಗಳಿಂದ ಗ್ರಾಹಕರು ಮದ್ಯ ಖರೀದಿಸಿ ಕೊಂಡೊಯ್ಯಲು ಅನುಮತಿ ನೀಡಲಾಗಿತ್ತು. ಆ ಬಳಿಕ, ದಾಸ್ತಾನಿನಲ್ಲಿದ್ದ ಮದ್ಯವನ್ನು ಮಾರಾಟ ಮಾಡಿ ಖಾಲಿ ಮಾಡಲು ಪಬ್‌ ಮತ್ತು ಬಾರ್‌ಗಳಿಗೆ ಅವಕಾಶ ನೀಡಲಾಗಿತ್ತು.

'ಬಾರ್ ಆಂಡ್ ರೆಸ್ಟೋರೆಂಟ್‌ ಸೇರಿದಂತೆ ಈ ಹಿಂದೆ ಪರವಾನಗಿ ನೀಡಿದ ಎಲ್ಲ ಕಡೆಗಳಲ್ಲೂ ಗ್ರಾಹಕರಿಗೆ ಸೆ. 1ರಿಂದ ಮದ್ಯ ಪೂರೈಕೆಗೆ ಅನುಮತಿ ನೀಡಲಾಗುವುದು' ಎಂದು ಅಬಕಾರಿ ಸಚಿವ ಎಚ್‌. ನಾಗೇಶ್ ಹೇಳಿದ್ದಾರೆ.

ಷರತ್ತುಗಳು ಏನೇನು?

* ಶೇ 50ರಷ್ಟು ಗ್ರಾಹಕರಿಗಷ್ಟೆ ಅವಕಾಶ

* ಗ್ರಾಹಕರ ಮಧ್ಯೆ ಅಂತರ ಕಡ್ಡಾಯ

* ಟೇಬಲ್‌ನಲ್ಲಿ ನಿಗದಿತ ಸಂಖ್ಯೆಯಷ್ಟೆ ಸದಸ್ಯರು ಕುಳಿತುಕೊಳ್ಳಬೇಕು

* ಆಹಾರ ಮತ್ತು ಮದ್ಯ ವಿತರಿಸುವವರು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು