ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸರ್ವರಿಗೂ ಉದ್ಯೋಗ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ

Last Updated 23 ಡಿಸೆಂಬರ್ 2021, 5:42 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ 'ಸರ್ವರಿಗೂ ಉದ್ಯೋಗ' ಮತ್ತು ಬೆಳಗಾವಿ ಉದ್ಯೋಗ ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚಾಲನೆ ನೀಡಿದರು.

ಇಲ್ಲಿನ ಉದ್ಯಮಬಾಗ್‌ನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಬದಲಾವಣೆಗೆ ಹೊಂದಿಕೊಂಡು ಹೋಗುತ್ತಿರಬೇಕು.‌ ಬದಲಾವಣೆ ಅರ್ಥ ಮಾಡಿಕೊಂಡವರು ಯಶಸ್ಸು ಸಾಧಿಸುತ್ತಾರೆ.‌ ಅರ್ಥ (ಗಳಿಕೆ) ಎನ್ನುವುದು ಹಿಂದೆ ಪುರುಷರಿಗೆ ಮಾತ್ರ ಎನ್ನುವಂತಿತ್ತು. ಈಗ ಸ್ತ್ರೀ ಅರ್ಥ ಕೂಡ ಇದೆ. ಮಹಿಳೆಯರಿಗೂ ಅವಕಾಶ ಇದೆ' ಎಂದು ತಿಳಿಸಿದರು.

'ಸ್ವಾಭಿಮಾನದ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶ‌‌ ಮಾಡಿಕೊಡಬೇಕು. ಕೌಶಲ ಎಂದಿಗೂ ಪ್ರಸ್ತುತ. ಡಿಸ್ಟಿಂಕ್ಸನ್ ಪಡೆದಿರುವ ಎಂಜಿನಿಯರ್‌ಗಳು ಕೂಡ ನೇರವಾಗಿ ಗೆರೆ ಬರೆಯಲಾರರು. ಇದಕ್ಕೂ ಕೌಶಲ ಬೇಕಾಗುತ್ತದೆ' ಎಂದರು.

'ಉದ್ಯೋಗ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ ತರಬೇತಿ ಅತ್ಯಗತ್ಯವಾಗಿದೆ' ಎಂದು ತಿಳಿಸಿದರು.

'ರಾಜ್ಯದಲ್ಲಿ ಉದ್ಯೋಗ ನೀತಿ ರೂಪಿಸಿದ್ದೇವೆ. ಯಾವುದೇ ರಾಜ್ಯದಲ್ಲೂ ಇಂತಹ ನೀತಿ ಇಲ್ಲ. ಹೆಚ್ಚು ಉದ್ಯೋಗ ‌ನೀಡಿದವರಿಗೆ ಹೆಚ್ಚಿನ‌ ರಿಯಾಯಿತಿ ನೀಡಲಾಗುವುದು. ಸಂಪತ್ತಿನ‌ ಹಂಚಿಕೆಯು ಉದ್ಯೋಗ ನೀಡುವ ಮೂಲಕ ನಡೆಯಲಿ'‌ ಎಂದು ಹೇಳಿದರು.

'ಹಳ್ಳಿಗಳಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮ ನಡೆಸಬೇಕು. 7, 8ನೇ ತರಗತಿ ಅನುತ್ತೀರ್ಣರಾದವರಿಗೂ ಅವಕಾಶ ಸಿಗುವಂತಾಗಬೇಕು. ಪಠ್ಯಕ್ರಮ ಪರಿಷ್ಕರಣೆ ಆಗಬೇಕು ಹಾಗೂ ಬೋಧನಾ ಪದ್ಧತಿಯಲ್ಲೂ ಸುಧಾರಣೆ ಆಗಬೇಕು' ಎಂದು ತಿಳಿಸಿದರು.

'ನನ್ನ ಸರ್ಕಾರ ರಾಜ್ಯದ ಜನರ‌ ಭವಿಷ್ಯ ರೂಪಿಸುವ ಉದ್ದೇಶ ಹೊಂದಿದೆ. ಅದನ್ನು ಎಲ್ಲ ಕಾರ್ಯಕ್ರಮಗಳಲ್ಲೂ‌ ನಿರೂಪಿಸಿ ತೋರಿಸುತ್ತೇವೆ' ಎಂದರು.

ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, 'ಸೂಪರ್ 30 ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್‌‌ಮೊದಲಾದ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಜ್ಞಾನ ಆಧಾರಿತ ಆರ್ಥಿಕತೆಗೆ ತಕ್ಕಂತೆ ಶಿಕ್ಷಣದಲ್ಲಿ ಸುಧಾರಣೆ ತರಲಾಗುವುದು' ಎಂದರು.

'ಯುವಜನರ ಕನಸಿನ ಉದ್ಯೋಗಕ್ಕೆ ತಕ್ಕಂತೆ ಕೌಶಲ ಹಾಗೂ ತರಬೇತಿಯನ್ನೂ ನೀಡಲಾಗುತ್ತಿದೆ. ಇದಕ್ಕಾಗಿ
ಟ್ಯಾಲೆಂಟ್ ಅಕ್ಸಲರೇಟರ್ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ವರ್ಷ ಐದು ಲಕ್ಷ ಮಂದಿಗೆ ತರಬೇತಿ ನೀಡಲಾಗುವುದು. ಉಪನ್ಯಾಸಕರಿಗೂ ತರಬೇತಿ ಕೊಡಲಾಗುವುದು' ಎಂದು ತಿಳಿಸಿದರು.

'ಪುಣೆಗಿಂತಲೂ ದೊಡ್ಡ ಮಟ್ಟಕ್ಕೆ ಬೆಳಗಾವಿಯನ್ನು ಬೆಳೆಸಲಾಗುವುದು. ಇಲ್ಲಿನವರು ಉದ್ಯೋಗಕ್ಕಾಗಿ ವಲಸೆ ಹೋಗಬೇಕಾಗಿಲ್ಲ.‌ಇಂಡಸ್ಟ್ರಿ‌ ಕನೆಕ್ಟ್ ಕಾರ್ಯಕ್ರಮದಲ್ಲಿ ಕೈಗಾರಿಕೆಗಳವರಿಗೂ ತರಬೇತಿ ಕೊಡಲಾಗುವುದು' ಎಂದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಐಟಿ ಪಾರ್ಕ್‌ಗೆ ಅಗತ್ಯವಾದ ಜಾಗ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ‌ಕೋರಿದರು.

ಬಿಇ, ಎಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಐಟಿಐ ಮಾಡಿದವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿತ್ತು. ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿದ್ದವು.

ಸಚಿವರಾದ ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ್, ಐಟಿ-ಬಿಟಿತ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ.ಗೌಡ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಸದಸ್ಯ ಆರ್.ಎಸ್. ಮುತಾಲಿಕ‌, ಜಿಐಟಿ ಪ್ರಾಂಶುಪಾಲ ಡಾ.ಜಯಂತ್ ಕಿತ್ತೂರು ಭಾಗವಹಿಸಿದ್ದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಸ್ವಾಗತಿಸಿದರು. ಶಂಕರ್ ಪ್ರಕಾಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT