ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಎಸ್‌ಟಿ ಪೋರ್ಟಲ್‌ನಲ್ಲೇ ಆಮ್ಲಜನಕ, ಲಸಿಕೆ ಮಾಹಿತಿ‌: ಅಶ್ವತ್ಥನಾರಾಯಣ

Last Updated 10 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಆಮ್ಲಜನಕ, ರೆಮ್‌ಡಿಸಿವಿರ್ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿರುವ ಸರ್ಕಾರಿ ಕೋಟಾದ ಹಾಸಿಗೆಗಳ ಮಾಹಿತಿ ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಪೋರ್ಟಲ್‌ನಲ್ಲಿ ಸಿಗುವಂತೆ ಮಾಡಲಾಗುವುದು’ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ರಾಜ್ಯ ಕೋವಿಡ್‌ ವಾರ್ ರೂಂಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಈ ವ್ಯವಸ್ಥೆಯಿಂದ ಪಾರದರ್ಶಕತೆಯ ಜತೆಗೆ ಸಾರ್ವಜನಿಕರಿಗೂ ವಾಸ್ತವ ಚಿತ್ರಣ ಸಿಗಲಿದೆ’ ಎಂದರು.

ಇನ್ನು 2–3 ದಿನಗಳಲ್ಲಿ ಎಸ್‌ಎಎಸ್‌ಟಿ ಪೋರ್ಟ್‌ಲ್‌ಗೆ (http://arogya.karnataka.gov.in/) ಎಲ್ಲವನ್ನೂ ಲಿಂಕ್‌ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದರು.

‘ಬೆಂಗಳೂರಿನಲ್ಲಿ ಈಗ ಪ್ರತಿನಿತ್ಯ ಸರಿಸುಮಾರು 950 ಹಾಸಿಗೆ ಖಾಲಿ ಆಗುತ್ತಿವೆ. ಆದರೆ 7 ಸಾವಿರದಿಂದ 8 ಸಾವಿರ ಹಾಸಿಗೆಗಳಿಗೆ ಬೇಡಿಕೆ ಬರುತ್ತಿದೆ. ಇಷ್ಟು ಸೋಂಕಿತರಲ್ಲಿ ವೈದ್ಯರ ಪರಿಶೀಲನೆ (ಟ್ರಾಯಾಜ್) ಮೇಲೆ ಆಸ್ಪತ್ರೆಗೆ ಸೇರಬೇಕಾದವರೇ 2 ಸಾವಿರಕ್ಕೂ ಹೆಚ್ಚು ಇದ್ದಾರೆ. ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್‌ಡೌನ್‌ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಳ್ಳಿಗಳಲ್ಲಿ ಆಮ್ಲಜನಕ ಸೌಲಭ್ಯದ 8,105 ಹಾಸಿಗೆ’
‘ಕೋವಿಡ್‌ ಮೂರನೇ ಅಲೆ ಎದುರಿಸಲು ಸಾಧ್ಯವಾಗುವಂತೆ ತಾಲ್ಲೂಕು ಆಸ್ಪತ್ರೆಗಳೂ ಸೇರಿದಂತೆ ಹಳ್ಳಿಗಳಲ್ಲಿ ಆಮ್ಲಜನಕ ಸೌಲಭ್ಯದ 8,105 ಹಾಸಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

‘ರಾಜ್ಯದ 146 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 4ರಿಂದ 6 ಐಸಿಯು ಹಾಸಿಗೆಗಳಿವೆ. ಅವುಗಳನ್ನು 20ಕ್ಕೆ ಹೆಚ್ಚಿಸಲಾಗುವುದು. ಅದರಿಂದ 1,925 ಐಸಿಯು ಹಾಸಿಗೆಗಳು ಲಭ್ಯವಾಗಲಿವೆ’ ಎಂದರು.

‘ರಾಜ್ಯದ 206 ಸಮುದಾಯ ಆರೋಗ್ಯ ಕೇಂದ್ರಗಳಿರುವ ತಲಾ 30 ಸಾಮಾನ್ಯ ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗುವುದು. ಅದರಿಂದ 6,180 ಹಾಸಿಗೆಗಳು ಸಿಗುತ್ತವೆ. ಪ್ರತಿ ಸಮುದಾಯ ಕೇಂದ್ರದ 30 ಹಾಸಿಗೆಗಳ ಪೈಕಿ ಐದನ್ನು ಅಧಿಕ ಆಮ್ಲಜನಕ ಸಾಂದ್ರತೆಯ ಹಾಸಿಗೆಗಳಾಗಿ ಪರಿವರ್ತಿಸಲಾಗುವುದು. ಜಿಲ್ಲಾಸ್ಪತ್ರೆಗಳಲ್ಲಿ 50 ಐಸಿಯು ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು’ ಎಂದರು.

ಸಂಪೂರ್ಣ ಲಾಕ್‌ಡೌನ್‌: ಸಿದ್ದರಾಮಯ್ಯ ಸಲಹೆ
ಬೆಂಗಳೂರು:
‘ಕೋವಿಡ್‌ ರೋಗಿಗಳು ಹೆಚ್ಚು ಪತ್ತೆ ಆಗಬಾರದೆಂಬ ಕಾರಣಕ್ಕೆ ಸರ್ಕಾರ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದೆ’ ಎಂದು ಆರೋಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಎರಡು ವಾರ ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಿಕೇಶಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಆಹಾರಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೈಕೋರ್ಟ್, ಸುಪ್ರೀಂ ಕೋರ್ಟ್ ಹೇಳಿದ ನಂತರವೂ ಕೇಂದ್ರ ಸರ್ಕಾರ ಹೆಚ್ಚುವರಿ ಆಮ್ಲಜನಕ ಕೊಡುತ್ತಿಲ್ಲ.’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಸ್ಪತ್ರೆ, ಆಂಬುಲೆನ್ಸ್, ಆಮ್ಲಜನಕ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಲಾಕ್‌ಡೌನ್‌ ಅವಧಿಯಲ್ಲಿ ದುಡಿಯುವ ಹಾಗೂ ಬಡವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT