ಗುರುವಾರ , ಮಾರ್ಚ್ 4, 2021
22 °C
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕೋವಿಡ್‌ ನೆಪ: ‘ಮಿತವ್ಯಯ’ ಕಾರಣ ಮುಂದಿಟ್ಟ ಆರ್ಥಿಕ ಇಲಾಖೆ

ಪ್ರಾಂಶುಪಾಲರ ಹುದ್ದೆ ಭರ್ತಿಗೆ ‘ಗ್ರಹಣ’

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ 10 ವರ್ಷಕ್ಕೂ ಹೆಚ್ಚು ಅವಧಿಯಿಂದ ಖಾಲಿ ಇರುವ ಪ್ರಾಂಶುಪಾಲರು ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಇದೀಗ ಕೋವಿಡ್‌ ನೆಪ ಮುಂದೊಡ್ಡಿ, ‘ಮಿತವ್ಯಯ’ದ ಕಾರಣ ನೀಡಿ ಆರ್ಥಿಕ ಇಲಾಖೆ ಅಡ್ಡಗಾಲು ಹಾಕಿದೆ.

ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳಿವೆ. ಈ ಪೈಕಿ, ಚಿತ್ರದುರ್ಗದ ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಕಾಯಂ ಪ್ರಾಂಶುಪಾಲರಿದ್ದಾರೆ. ಉಳಿದ ಕಾಲೇಜು ಗಳಲ್ಲಿ ಪ್ರಭಾರ ಪ್ರಾಂಶುಪಾಲರಿದ್ದಾರೆ. 310 ಪ್ರಾಂಶುಪಾಲ ಹುದ್ದೆಗಳು ಮಂಜೂರಾಗಿವೆ. 250ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಿಗೆ ಪ್ರಾಂಶುಪಾಲ ಹುದ್ದೆ ಮಂಜೂರಾಗಿಲ್ಲ.

310 ಪ್ರಾಂಶುಪಾಲರು ಮತ್ತು 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಈ ಹಿಂದೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇಮಕಾತಿಗೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿತ್ತು.

‘ಪ್ರಾಂಶುಪಾಲರ ಹುದ್ದೆಗಳಿಗೆ ಪದೋನ್ನತಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರಾಕರಿಸಿತ್ತು. ಈ ಬಗ್ಗೆ ಸತತವಾಗಿ ಮಾಡಿದ್ದ ಮನವಿಯ ಬಳಿಕ, ನೇಮ ಕಾತಿಗೆ ಸಂಬಂಧಿಸಿದಂತೆ ಫೆ. 20ರಂದು ಕರಡು ನಿಯಮಾವಳಿಯನ್ನು ಇಲಾಖೆ ಪ್ರಕಟಿಸಿತ್ತು. ನಿಯಮಾವಳಿ ಅಂತಿಮಗೊಳಿಸಿ ಪ್ರಕಟಿಸಿ (ಸೆ. 9) ಮೂರು ತಿಂಗಳು ಕಳೆದರೂ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ’ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ (ಕೆಜಿಸಿಟಿಎ) ಆರೋಪಿಸಿದೆ.

‘ನೇಮಕಾತಿ ನಿಯಮಗಳಲ್ಲಿ ಪ್ರಾಂಶುಪಾಲ ಹುದ್ದೆ ಭರ್ತಿಗೆ ವಿಧಿಸಿದ್ದ ವಯೋಮಿತಿ ಮತ್ತು ಖಾಸಗಿ ಕಾಲೇಜು ಅಧ್ಯಾಪಕರಿಗೂ ಅವಕಾಶ ನೀಡಿರು ವುದನ್ನು ನಾವು ತೀವ್ರವಾಗಿ ವಿರೋ ಧಿಸಿದ್ದೇವೆ. ನಮ್ಮ ಅಹವಾಲಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಈ ಎರಡು ಅಂಶಗಳನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪ್ರಕ್ರಿಯೆಯಲ್ಲಿ ಪ್ರಗತಿ ಕಂಡಿಲ್ಲ’ ಎಂದು ಸಂಘದ ಅಧ್ಯಕ್ಷ ಟಿ.ಎಂ. ಮಂಜುನಾಥ್‌ ದೂರಿದರು.

ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿಗೂ ಅಡ್ಡಿ ‘ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಲು 2006 ಮತ್ತು 2016ರ ಯುಜಿಸಿ ನಿಯಮಾವಳಿಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ, 14 ವರ್ಷಗಳಿಂದ ಈ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ. ನೂರಾರು ಅರ್ಹ ಸಹ ಪ್ರಾಧ್ಯಾಪಕರು ಅವಕಾಶ ವಂಚಿತರಾಗಿ ನಿವೃತ್ತರಾಗುತ್ತಿದ್ದಾರೆ.

ಈ ಬಗ್ಗೆಯೂ ಮಾಡಿದ ಮನವಿಗಳ ಕಾರಣ ಅಂತಿಮವಾಗಿ ಕಾಲೇಜು ಶಿಕ್ಷಣ ಇಲಾಖೆ ನಿಯಮಗಳನ್ನು ರೂಪಿಸಿ ಅರ್ಹ ಸಹ ಪ್ರಾಧ್ಯಾಪಕರುಗಳಿಗೆ ಪ್ರಾಧ್ಯಾಪಕರುಗಳಾಗಿ ಪದೋನ್ನತಿ ಹೊಂದಲು ಅಧಿಸೂಚನೆ ಹೊರಡಿಸಲು ಅನುಮತಿ ನೀಡುವಂತೆ ಮೇ 7ರಂದೇ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವ ಕಳುಹಿಸಿತ್ತು. ಆದರೆ, ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡು ಜಾರಿಗೆ ಬಂದಿರುವ ಯುಜಿಸಿ ನಿಯಮಾವಳಿಗಳಲ್ಲೇ ಈ ಪದೋನ್ನತಿಗೆ ಅವಕಾಶ ಇದ್ದರೂ ಮತ್ತೆ ಅನುಮೋದನೆ ನೀಡುವಂತೆ ಹಣಕಾಸು ಇಲಾಖೆಗೆ ಕಡತ ಕಳುಹಿಸಲಾಗಿದೆ. ನಾಲ್ಕು ತಿಂಗಳು ಕಳೆದರೂ ಅನುಮೋದನೆ ಸಿಕ್ಕಿಲ್ಲ’ ಎಂದು ಕೆಜಿಸಿಟಿಎ ಅಧ್ಯಕ್ಷ ಟಿ.ಎಂ. ಮಂಜುನಾಥ್‌ ಹೇಳಿದರು.

**

ಹಣಕಾಸು ಇಲಾಖೆ ಜೊತೆ ಚರ್ಚಿಸಿದ್ದೇನೆ. ಕೊರೊನಾ ಬಿಕ್ಕಟ್ಟು ಮುಗಿದ ತಕ್ಷಣ ಒಪ್ಪಿಗೆ ಸಿಗುವ ವಿಶ್ವಾಸವಿದೆ. ನಂತರ ಕೆಇಎ ಮೂಲಕ ನೇಮಕಾತಿ ಆರಂಭಿಸಲಾಗುವುದು.
-ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

**

ಪ್ರಾಂಶುಪಾಲರ ನೇಮಕವನ್ನು ಯುಜಿಸಿ ನಿಯಮಾವಳಿಗಳ ನೆಪ ಮುಂದಿಟ್ಟು ಮುಂದೂಡುತ್ತಲೇ ಬರಲಾಗಿದೆ. ನಿಯಮ ಅಂತಿಮಗೊಂಡು 4ತಿಂಗಳು ಕಳೆದರೂ ನೇಮಕಾತಿ ನಡೆದಿಲ್ಲ.
-ಟಿ.ಎಂ. ಮಂಜುನಾಥ್,ಅಧ್ಯಕ್ಷ, ಕೆಜಿಸಿಟಿಎ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು