ಗುರುವಾರ , ಮೇ 19, 2022
20 °C

ಕರ್ನಾಟಕ ವಿಧಾನಸಭೆ ಚುನಾವಣೆ ಮತಬೇಟೆಯ ಮೊದಲಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮತಬೇಟೆಯ ಮೊದಲಾಟ ರಾಜ್ಯದಲ್ಲಿ ಶುರುವಾಗಿದೆ. 2023ರಲ್ಲೂ ಗೆದ್ದು ಅಧಿಕಾರದಲ್ಲಿ ಉಳಿಯಲು ‘ಕಮಲ’ ಪಡೆ ಕಣಕ್ಕೆ ಇಳಿದಿದೆ. ಬಿಜೆಪಿಯನ್ನು ಮಣಿಸಿ, ಗದ್ದುಗೆಗೇರುವ ತವಕದಲ್ಲಿರುವ ಕಾಂಗ್ರೆಸ್‌ ತಲೆಯಾಳುಗಳು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ಆಯಾ ಪಕ್ಷಗಳ ರಾಜ್ಯನಾಯಕರ ಮಧ್ಯದ ಸಣ್ಣಪುಟ್ಟ ಭಿನ್ನಮತ ಬದಿಗೆ ಸರಿಸಿ, ಒಗ್ಗಟ್ಟು ಮೂಡಿಸಲು ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಶುಕ್ರವಾರ ಅಖಾಡಕ್ಕೆ ಇಳಿದರು. ಎರಡು ದಿನ ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ತಮ್ಮ ಪಕ್ಷಗಳ ನಾಯಕರ ಜತೆ ಚರ್ಚಿಸಿ, ಚುನಾವಣೆಯ ತಾಲೀಮಿಗೆ ಅಧಿಕೃತ ಚಾಲನೆಯನ್ನೂ ಕೊಟ್ಟಿದ್ದಾರೆ.

ಮಿಷನ್ 150+ ಗುರಿ: ಶಾ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ (ಮಿಷನ್‌ 150+) ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಗುರಿ ನಿಗದಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಗುರಿ ಮುಟ್ಟಲು ರಾಜ್ಯದ ನಾಯಕರಿಗೆ ಮಹತ್ವದ ಸೂಚನೆಗಳನ್ನೂ ನೀಡಿದ್ದಾರೆ. ತಕ್ಷಣವೇ ‘ರೋಡ್‌ ಮ್ಯಾಪ್‌’ ಸಿದ್ಧಪಡಿಸುವಂತೆಯೂ ಸೂಚಿಸಿದ್ದಾರೆ. 

ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ಪ್ರಮುಖರ ಸಭೆಯನ್ನು ಶುಕ್ರವಾರ ರಾತ್ರಿ ನಡೆಸಿದ ಅವರು, ‘ಈ ಹಿಂದೆ ಯಡವಟ್ಟು ಮಾಡಿಕೊಂಡಂತೆ ಈ ಬಾರಿ ಮಾಡಬಾರದು. ಕಳೆದ ಬಾರಿ 104 ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. ಈ ಬಾರಿ 150 ಕ್ಕೂ ಕಡಿಮೆ ಆಗಬಾರದು’ ಎಂದು ಅವರು ತಾಕೀತು ಮಾಡಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಗಮನ ಕೇಂದ್ರೀಕರಿಸಬೇಕು. ಜಾತಿ ಸಮೀಕರಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಆದ್ಯತೆ ನೀಡಬೇಕು. ಚುನಾವಣೆ ಯಾವಾಗ ನಡೆದರೂ ಒಂದೇ, ಅವಧಿಪೂರ್ವ ಮಾಡಬೇಕೆಂದೇನೂ ಇಲ್ಲ. ಪರಿಣಾಮ ಬೇರೆ ಆಗುವುದಿಲ್ಲ. ಸಂಘಟನೆಯಲ್ಲಿ ಸಚಿವರಾದಿಯಾಗಿ ಎಲ್ಲರೂ ಪ್ರಖರವಾಗಿ ತೊಡಗಿಸಿಕೊಳ್ಳಬೇಕು. ಮೀಸಲಾತಿಯಂತಹ ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದು ಶಾ ಸೂಚಿಸಿದರು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ‘ಈಗ ವಿಧಾನಸಭೆಯಲ್ಲಿ ನಮ್ಮ ಸಂಖ್ಯೆ 120 ಇದೆ. 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಯಾವ ಮಾನದಂಡ ಅನುಸರಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು. ಅದರ ಪ್ರಕಾರವೇ ಚುನಾವಣೆಗೆ ತಳಮಟ್ಟದಲ್ಲಿ ಸಿದ್ಧತೆ ನಡೆಸುತ್ತೇವೆ’ ಎಂದರು.

‘ಐದು ರಾಜ್ಯಗಳಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಮೇಲೆ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳಿಂದ ಬಿಜೆಪಿಗೆ ಬರಲು ಸಾಕಷ್ಟು ಜನ ಆಸಕ್ತಿ ತೋರಿದ್ದಾರೆ. ಇದಕ್ಕಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಒಂದು ತಂಡ ಮಾಡಲಾಗುವುದು. ಅಗತ್ಯ ಇರುವ ಕ್ಷೇತ್ರಗಳಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಈ ತಂಡ ತೀರ್ಮಾನಿಸುತ್ತದೆ’ ಎಂದು ರವಿ ಹೇಳಿದರು.

150 ಸ್ಥಾನ ಗೆಲ್ಲಲೇಬೇಕು: ರಾಹುಲ್‌

ಬೆಂಗಳೂರು: ‘ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಗುರಿ ಹೊಂದಬೇಕು’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಅವರು, ಚುನಾವಣೆಯಲ್ಲಿ ಗೆಲ್ಲುವ ಸೂತ್ರಗಳನ್ನು ಬಿಚ್ಚಿಟ್ಟರು. ಜತೆಗೆ, ಬಿಜೆಪಿಯ ಕೋಮುವಾದ, ದ್ವೇಷದ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಅವಿಶ್ರಾಂತ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಖರ್ಗೆ ಅವರೇ ನಿಮ್ಮ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನಿಮ್ಮ ಜತೆ ಚುನಾವಣೆಯನ್ನೂ ನಡೆಸಿದ್ದೇನೆ. ನೀವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೀರಿ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ವಿಷಯದಲ್ಲಿ ಇನ್ನಷ್ಟು ಸಂಘಟಿತರಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಲೇಬೇಕಿದೆ. ವಿಧಾನಸಭೆ ಚುನಾವಣೆಯಲ್ಲಿ 150ಕ್ಕಿಂತ ಒಂದು ಸ್ಥಾನವೂ ಕಡಿಮೆಯಾಗಬಾರದು. ಅರ್ಹತೆ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಬೇಕು. ಅಧಿಕಾರಕ್ಕೆ ಬಂದ ನಂತ ರವೂ ಪಕ್ಷಕ್ಕೆ ರಕ್ತ ಬಸಿದವರಿಗೆ ಆದ್ಯತೆ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘20 ವರ್ಷಗಳ ಹಿಂದೆ ಕೆಲಸ ಮಾಡಿದ್ದಾರೆ ಎಂದು ಈಗ ಟಿಕೆಟ್ ನೀಡಲು ಸಾಧ್ಯವಿಲ್ಲ. ಪಕ್ಷಕ್ಕೆ ಈಗ ಯಾವ ರೀತಿ ಸೇವೆ ಮಾಡುತ್ತಿದ್ದಾರೆ ಎನ್ನುವುದು ಮುಖ್ಯವಾಗಬೇಕು. ಕಾರ್ಯಕರ್ತರು ಪಕ್ಷಕ್ಕೆ ಎಷ್ಟು ನಿಷ್ಠರಾಗಿದ್ದಾರೆ ಮತ್ತು ಸೇವೆ ಮಾಡಿದ್ದಾರೆ ಎನ್ನುವುದನ್ನು ಪರಿಗಣಿಸಿ ಟಿಕೆಟ್ ನೀಡಬೇಕು. ಯುವಕರು ಮತ್ತು ಮಹಿಳೆಯರಿಗೂ ಆದ್ಯತೆ ನೀಡಲಾಗುವುದು. ಈ ಮೂಲಕ ಸಂಪೂರ್ಣ ಶಕ್ತಿಯೊಂದಿಗೆ ಕರ್ನಾಟಕದಲ್ಲಿ ನವ ಕಾಂಗ್ರೆಸ್‌ ಹೊರಹೊಮ್ಮಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು