ಶುಕ್ರವಾರ, ಅಕ್ಟೋಬರ್ 7, 2022
24 °C

ಬಿಜೆಪಿಯಿಂದಾಗಿ ರಾಜ್ಯವು ಶಾಂತಿಯ ತೋಟವಾಗಿ ಉಳಿದಿಲ್ಲ: ಮೈಸೂರಲ್ಲಿ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕವು ಈಗ ಶಾಂತಿಯ ತೋಟವಾಗಿ ಉಳಿದಿಲ್ಲ. ರಾಷ್ಟ್ರಕವಿ ಕುವೆಂಪು ಆಶಯಕ್ಕೆ ಹಿನ್ನಡೆಯಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಕಾಂಗ್ರೆಸ್ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಜೋಡೋ’ ಪಾದಯಾತ್ರೆ ಪೂರ್ವ ಸಿದ್ಧತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು, ಮನುಷ್ಯರನ್ನು ಮನುಷ್ಯನ್ನಾಗಿ ನೋಡಬೇಕು ಎಂದು ಸಂವಿಧಾನ ಹೇಳಿದೆ. ಆದರೆ, ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ಪಾಸ್ ಮಾಡಿಕೊಂಡಿರುವುದು ಸಂವಿಧಾನ ಹಾಗೂ ಮೂಲಭೂತ ತತ್ವಗಳಿಗೆ ವಿರುದ್ಧವಾದುದು. ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಹುನ್ನಾರವಾಗಿದೆ’ ಎಂದು ದೂರಿದರು.

ಬಡವರು ಬದುಕಲಾಗದ ಸ್ಥಿತಿ

‘ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಹಾಗೂ ಬಡವರು ಬದುಕಲಾಗದಂತಹ ಸ್ಥಿತಿ ಬಂದಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದಲಿತರು,‌ ಹಿಂದುಳಿದವರು, ರೈತರು, ಅಲ್ಪಸಂಖ್ಯಾತರು,‌ ಬಡವರು ನೆಮ್ಮದಿಯಿಂದ ‌ಇಲ್ಲ. ಈ ವರ್ಗಗಳ‌ ಜನರು‌‌ ನಮಗೆ ರಕ್ಷಣೆ ಇಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ದೇಶವು ಒಂದು ಧರ್ಮದವರಿಗೆ ಸೇರಿದ್ದಲ್ಲ. ಬಹುತ್ವದಿಂದ ಕೂಡಿದ್ದಾಗಿದೆ. ಆದರೆ, ಧರ್ಮದ ಆಧಾರದ ಮೇಲೆ‌ ಜನರನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಆರೋಪಿಸಿದರು.

ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ

‘ಸ್ವಾತಂತ್ರ್ಯ ನಂತರ ಯಾವುದಾದರೂ ರಾಜಕೀಯ ‌ಪಕ್ಷ ಅಥವಾ ನಾಯಕ 150ಕ್ಕೂ ಹೆಚ್ಚು‌ ದಿನ 3,570 ಕಿ.ಮೀ. ಪಾದಯಾತ್ರೆ ಮಾಡಿದ ಉದಾಹರಣೆ ಇಲ್ಲ. ಅದನ್ನು ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ. ಸ್ವಾರ್ಥ-ಅಧಿಕಾರಕ್ಕಾಗಿ ಮಾಡುತ್ತಿರುವ ಪಾದಯಾತ್ರೆ ಇದಲ್ಲ. ದೇಶವನ್ನು ಒಗ್ಗೂಡಿಸಲು ನಡೆಸುತ್ತಿದ್ದಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ‘ಬೆಲೆ‌ ಏರಿಕೆ ಗಗನಕ್ಕೆ‌ ಹೋಗಿದ್ದರೆ, ಜನರ ಆದಾಯ ಪಾತಾಳಕ್ಕಿಳಿದಿದೆ. ಬಿಜೆಪಿಯವರು ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಎಲ್ಲಿ ಮತ್ತಷ್ಟು ಬಲಿಷ್ಠರಾಗಿ ಬಿಡುತ್ತಾರೋ ಎಂಬ ಭಯದಿಂದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಕೊಡಬಾರದ ಕಿರುಕುಳವನ್ನು ಬಿಜೆಪಿಯವರು ಕೊಡುತ್ತಿದ್ದಾರೆ. ಜೈಲಿಗೆ ಹೋಗಲು ಸಿದ್ಧವಿದ್ದೇನೆ, ಹೇಗಿತ್ತು ಜೈಲಿನ ಅನುಭವ ಎಂದು ರಾಹುಲ್‌ ನನ್ನನ್ನು ವಿಚಾರಿಸಿದರು. ಯಾವುದಕ್ಕೂ ಹೆದರುವವರು ಅವರಲ್ಲ’ ಎಂದರು.

ಮರ್ಯಾದೆ ಕಾಪಾಡಿ: ಡಿಕೆಶಿ

‘ನಡಿಗೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಮುಖಂಡರು ಶಕ್ತಿ ಪ್ರದರ್ಶಿಸಬೇಕು. ಸಿದ್ದರಾಮಯ್ಯ ಹುಟ್ಟು ಹಬ್ಬ, ಸ್ವಾತಂತ್ರ್ಯ ರ‍್ಯಾಲಿಯಲ್ಲಿ ನಡೆಯಲಿಲ್ಲವೇ? ಮುಖ‌ ತೋರಿಸಿ, ತಿಂಡಿ ತಿಂದು‌ ಹೋದರೆ ಆಗುವುದಿಲ್ಲ. ದಾವಣಗೆರೆಗೆ ಹಿಂದಿನ‌ ದಿನವೇ ಹೋಗಿರಲಿಲ್ಲವೇ? ಪ್ರತಿ ಶಾಸಕರು 10ರಿಂದ 15ಸಾವಿರ ಮಂದಿಯನ್ನು ಕರೆದುಕೊಂಡು ಬರಬೇಕು. ಮರ್ಯಾದೆ ಕಾಪಾಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ,‌ ನನ್ನ ಹಾಗೂ ಮುಖಂಡರ ಮರ್ಯಾದೆ ಹೋಗುತ್ತದೆ’ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ‘ಭಾರತ್‌ ಜೋಡೋ ಯಾತ್ರೆಯು ಅ.1ರಂದು ಜಿಲ್ಲೆ ಪ್ರವೇಶಿಸಲಿದೆ. ಅ.2ರಂದು ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಕಡಕೊಳದಿಂದ ಮೈಸೂರು ಅರಮನೆ ಆವರಣದವರೆಗೆ ನಡೆಯಲಿದೆ. ಅ.3ರಂದು ಬೆಳಿಗ್ಗೆ 7ರಿಂದ ಮಂಡ್ಯದತ್ತ ತೆರಳಲಿದೆ’ ಎಂದು ಮಾಹಿತಿ ನೀಡಿದರು.

ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ ಆರ್‌.ಜಾನ್ ಮಾತನಾಡಿದರು.

ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ‌.ಲಕ್ಷ್ಮಣ, ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಶಿವಣ್ಣ, ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಸುಧೀಂದ್ರ, ವಿನಯ್‌ಕುಮಾರ್‌ ಸೊರಕೆ ಇದ್ದರು. 

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಸ್ಚಾಗತಿಸಿದರು. ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು