ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಗೆ ಅವಕಾಶ ಕೊಡಿ: ಕಾಂಗ್ರೆಸ್‌ ಅಭಿಯಾನ

Last Updated 25 ಮೇ 2021, 21:18 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ದಿ ನಿಧಿ ಜತೆಗೆ ದೇಣಿಗೆ ಬಳಸಿಕೊಂಡು ₹ 100 ಕೋಟಿಯಲ್ಲಿ ಕೋವಿಡ್‌ ಲಸಿಕೆ ಖರೀದಿಸಿ, ಜನರಿಗೆ ನೀಡಲು ರಾಜ್ಯ ಸರ್ಕಾರ ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಆನ್‌ಲೈನ್‌ನಲ್ಲಿ ‘ಲಸಿಕೆಗೆ ಅವಕಾಶ ಕೊಡಿ’ ಎಂಬ ಅಭಿಯಾನವನ್ನು ಕಾಂಗ್ರೆಸ್‌ ಆರಂಭಿಸಿದೆ.

‘ಜನರಿಗೆ ಲಸಿಕೆ ನೀಡಲು ಸರ್ಕಾರ ವಿಫಲವಾಗಿದೆ. ಲಸಿಕೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಪಕ್ಷದ ಶಾಸಕರ ನಿಧಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು ಅಭಿಯಾನದ ಉದ್ದೇಶ’ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ಆರ್.ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಎನ್.ಎ. ಹ್ಯಾರಿಸ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಶಾಸಕ ಶರಣ್ ಪ್ರಕಾಶ್ ಪಾಟೀಲ ಅವರು ಈ ಅಭಿಯಾನಕ್ಕೆ ವಿಡಿಯೊ ಸಂದೇಶ ನೀಡಿದ್ದಾರೆ.

ಅಭಿಯಾನದ ಮೊದಲ ದಿನವೇ 20 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಬೆಂಬಲ ಸೂಚಿಸಿ, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಲಸಿಕೆ ಖರೀದಿಸಿ, ವಿತರಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಕೆಲವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

‘₹ 100 ಕೋಟಿಯಲ್ಲಿ ಲಸಿಕೆ ಖರೀದಿಸಿ, ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪದೇಪದೇ ಮನವಿ ಮಾಡಲಾಗಿದೆ. ಆದರೆ, ಸರ್ಕಾರ ಇನ್ನೂ ಅವಕಾಶ ಕೊಟ್ಟಿಲ್ಲ. ಕೆಪಿಸಿಸಿ ಸದುದ್ದೇಶದಿಂದ, ಜನರ ರಕ್ಷಣೆಗಾಗಿ ಈ ಪ್ರಯತ್ನ ನಡೆಸಿದೆ. ಅತ್ಯಂತ ಪಾರದರ್ಶಕವಾಗಿ ಈ ಕೆಲಸ ಮಾಡುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

‘ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಮಹಾಮಾರಿಯಿಂದ ಜನರನ್ನು ರಕ್ಷಣೆ ಮಾಡಲುಲಸಿಕೆ ಹಾಕುವುದು ಅನಿವಾರ್ಯ ಎಂಬುದು ಸರ್ವವಿಧಿತ. ಆದರೆ, ಕೇಂದ್ರ ಸರ್ಕಾರದ ಪಕ್ಷಪಾತ ಧೋರಣೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಲಸಿಕೆ ಪೂರೈಕೆಯಲ್ಲಿ ಕೊರತೆಯಾಗಿದೆ’ ಎಂದು ತಮ್ಮ ವಿಡಿಯೊ ಸಂದೇಶದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಲೂಟಿ ಮಾಡಲು ಪರವಾನಗಿ ನೀಡಿರುವ ಸರ್ಕಾರ’
‘ಕೋವಿಡ್‌ ಲಸಿಕೆ ದರ ನಿಯಂತ್ರಿಸುವುದು ಅಸಾಧ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಅವರ ಮಾತು ರಾಜ್ಯ ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಂತಿದೆ. ಲಸಿಕೆ ದರ ನಿಯಂತ್ರಣ ಮಾಡಲು ಆಗದಿದ್ದ ಮೇಲೆ ಸರ್ಕಾರ ಏಕಿರಬೇಕು’ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ಪ್ರಶ್ನಿಸಿದ್ದಾರೆ.

‘ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈಗ ಕೊರತೆಯ ನೆಪ ಮುಂದಿಟ್ಟು ಜನರನ್ನು ಖಾಸಗಿ ಆಸ್ಪತ್ರೆಗಳಲ್ಲಿನ ಪಾವತಿ ವ್ಯವಸ್ಥೆಗೆ ದೂಡಿದೆ. ಖಾಸಗಿ ಆಸ್ಪತ್ರೆಯವರು ಪ್ರತಿ ಡೋಸ್‌ಗೆ₹1,300 ಹಣ ಪಡೆಯುತ್ತಿದ್ದಾರೆ. ಇದನ್ನು ತಡೆಯೋದು ಕಷ್ಟ ಎಂದು ಸಚಿವರು ಹೇಳುತ್ತಿದ್ದಾರೆ. ಆ ಮೂಲಕ ಸರ್ಕಾರ ಲೂಟಿಗೆ ರಹದಾರಿ ಮಾಡಿಕೊಟ್ಟಿದೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯ ಸರ್ಕಾರಕ್ಕೆ ಲಭ್ಯವಾಗದ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ಎಲ್ಲಿಂದ ಬರುತ್ತಿದೆ. ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿಯದೆ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್‌.ಪ್ರತಾಪ ಸಿಂಹ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT