ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ: ಡಿಕೆಶಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Last Updated 27 ಡಿಸೆಂಬರ್ 2021, 0:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲಿಯೇ ನಂಬಿಕೆ ಇರಿಸಿದೆ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸಲಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಭಾನುವಾರ ಲೇಖಕ ಎಸ್‌.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಸಮಾರಂಭದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲಿದೆ ಎಂಬ ಅರ್ಥದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉಳಿದ ನಾಯಕರೂ ಪಕ್ಷದಲ್ಲಿ ಇದ್ದಾರೆ. ಆದ್ದರಿಂದ ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸುತ್ತೇವೆ’ ಎಂದರು.

ಇತ್ತೀಚೆಗೆ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮನ್ನು ಬಿಟ್ಟು ಜನಪ್ರತಿನಿಧಿಗಳ ಸಭೆ ನಡೆಸಬಾರದು. ಇದರಿಂದ ತಪ್ಪು ಸಂದೇಶ ಹೋಗುತ್ತದೆ ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದರು. ಇದೀಗ ಸಾಮೂಹಿಕ ನಾಯಕತ್ವದ ವಿಚಾರವನ್ನು ಪ್ರಸ್ತಾಪಿಸಿರುವ ಅವರು ಪಕ್ಷದ ಅಧ್ಯಕ್ಷರಿಗೆ ಮೂಗುದಾರ ಹಾಕಲು ಪ್ರಯತ್ನಿಸಿದ್ದಾರೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

‘ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲಿರುವ ಪಾದಯಾತ್ರೆಗೆ ಸಂಬಂಧಿಸಿದಂತೆ ಪಕ್ಷವು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.ವಿಧಾನಸಭೆ ಅಧಿವೇಶನ ಇದ್ದುದ್ದರಿಂದ ಆ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. 2022ರಜ.2 ಮತ್ತು 3 ರಂದು ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ’

‘ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್‌) ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ, ಕನ್ನಡಪರ ಸಂಘಟನೆಗಳು ಇದೇ 31ರಂದು ಕರೆ ನೀಡುವ ಬಂದ್‌ಗೆ ನೈತಿಕ ಬೆಂಬಲವಿದೆ. ಎಂಇಎಸ್‌ ಪುಂಡಾಟಿಕೆ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ. ಕರ್ನಾಟಕದ ಬಾವುಟವನ್ನು ಸುಟ್ಟಿರುವ ಅವರು, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ನವದೆಹಲಿಗೆ ತೆರಳಿ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದು ಸಿದ್ದರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT