ಮಂಗಳವಾರ, ಅಕ್ಟೋಬರ್ 20, 2020
22 °C
ಹೊಸದಾಗಿ 7,665 ಪ್ರಕರಣಗಳು ವರದಿ: 2.40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

Covid-19 Karnataka Update: ಒಂದೇ ದಿನ ಗರಿಷ್ಠ ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Covid-19

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಮಂಗಳವಾರ 8,387 ಮಂದಿ ಚೇತರಿಸಿಕೊಂಡಿದ್ದಾರೆ. ಒಂದು ದಿನದ ಅವಧಿಯಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿದವರ ಗರಿಷ್ಠ ಸಂಖ್ಯೆ ಇದಾಗಿದ್ದು, ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 1.56 ಲಕ್ಷ ದಾಟಿದೆ.

18 ದಿನಗಳಲ್ಲಿ 1.16 ಲಕ್ಷ ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ 1.07 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದರಿಂದಾಗಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಕೆಲದಿನಗಳಿಂದ ಪತ್ತೆಯಾಗುತ್ತಿವೆ.

ಒಂದೇ ದಿನ 28,867 ಆ್ಯಂಟಿಜೆನ್ ಸೇರಿದಂತೆ 59,088 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಒಂದು ದಿನದ ಅವಧಿಯಲ್ಲಿ ನಡೆಸಲಾದ ಗರಿಷ್ಠ ಪರೀಕ್ಷೆಗಳು ಇವಾಗಿದ್ದು, ಹೊಸದಾಗಿ 7,665 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪರಿಣಾಮ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.40 ಲಕ್ಷ ದಾಟಿದೆ.

ಕೊರೊನಾ ಸೋಂಕಿತರಲ್ಲಿ ಮತ್ತೆ 139 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌ಗೆ ಈವರೆಗೆ ಸಾವಿಗೀಡಾದವರ ಸಂಖ್ಯೆ 4,201ಕ್ಕೆ ತಲುಪಿದೆ. 48 ಗಂಟೆಗಳಲ್ಲಿ 254 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ. ಹೊಸದಾಗಿ ವರದಿಯಾದ ಮರಣ ಪ್ರಕರಣಗಳಲ್ಲಿ 25 ಮಂದಿ 50 ವರ್ಷದೊಳಗಿನವರಾಗಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ 2,242 ಮಂದಿ ಸೋಂಕಿತರಾಗಿದ್ದಾರೆ. ಬಳ್ಳಾರಿ(673), ಉಡುಪಿ (421), ಬೆಳಗಾವಿ (395) ಮೈಸೂರು (357), ದಾವಣಗೆರೆ (332), ಶಿವಮೊಗ್ಗ (318) ಜಿಲ್ಲೆಯಲ್ಲಿಯೂ ಹೆಚ್ಚಿನ ಪ್ರಕರಣಗಳು ದೃಢಪಟ್ಟಿವೆ.

ಮಂಗಳವಾರ ವರದಿಯಾದ ಮರಣ ಪ್ರಕರಣಗಳಲ್ಲಿ ಬೆಂಗಳೂರು (49), ಧಾರವಾಡ (10), ದಕ್ಷಿಣ ಕನ್ನಡ (9), ಬಳ್ಳಾರಿ (9), ಬೆಳಗಾವಿ (7) ಜಿಲ್ಲೆಯಲ್ಲಿ ಅಧಿಕ ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು