ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ’ಕ್ಕೆ ಲಂಚದ ‘ವೈರಸ್‌’: ನೇಮಕಾತಿ, ಬಡ್ತಿ, ಖರೀದಿ, ಕಾಮಗಾರಿಯಲ್ಲಿ ಅಕ್ರಮ

Last Updated 20 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ನೇಮಕಾತಿ, ಬಡ್ತಿ–ವರ್ಗಾವಣೆಯಿಂದ ಆರಂಭಿಸಿ ವೈದ್ಯಕೀಯ ಉಪಕರಣ, ಔಷಧ ಖರೀದಿವರೆಗೆ, ಕಟ್ಟಡಗಳ ನಿರ್ಮಾಣ ಕಾಮಗಾರಿಯಿಂದ ಮೂಲಸೌಕರ್ಯ ಕಲ್ಪಿಸುವವರೆಗಿನ ‘ಬ್ರಹ್ಮಾಂಡ ಭ್ರಷ್ಟಾಚಾರ’ ಅಂಗೈ ಮೇಲಿನ ಹುಣ್ಣಿನಂತೆ ಎದ್ದು ಕಾಣಿಸುತ್ತಿದೆ. ಇದನ್ನು ನೋಡಲು ತನಿಖೆಯಂತಹ ಕನ್ನಡಿಯೇ ಬೇಕೆಂದೇನಿಲ್ಲ.

ಇನ್ನು ವೈದ್ಯಕೀಯ ಮಹಾ ವಿದ್ಯಾಲಯ, ಜಿಲ್ಲಾ ಆಸ್ಪತ್ರೆ, ತಾಲ್ಲೂಕುಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ತಳಮಟ್ಟದ ನೌಕರರ ಕೈಗೆ ಲಂಚ ನೀಡದೆ ಯಾವ ಕೆಲಸವೂ ಸಾಧ್ಯವಿಲ್ಲ. ರೋಗಿಯಾಗಿ ಹೋದರೂ, ರೋಗಿಯನ್ನು ನೋಡಲು ಹೋಗುವುದಾದರೂ ಲಂಚ ಕೊಡಲೇಬೇಕು. ಅಷ್ಟೇಕೆ, ಆಸ್ಪತ್ರೆಯಿಂದ ಮೃತದೇಹ ಹೊರತರಬೇಕೆಂದರೂ ‘ಖುಷಿ’ (ಲಂಚ) ಹಂಚಲೇಬೇಕು.

ಆರೋಗ್ಯ– ವೈದ್ಯಕೀಯ ಇಲಾಖೆಯಲ್ಲಿ ನಡೆಯುತ್ತಿರುವ ಈ ಅಕ್ರಮ, ಅವ್ಯವಹಾರಕ್ಕೆ ಅಧಿಕಾರಿಗಳು, ಕೆಲವು ಮಧ್ಯವರ್ತಿಗಳು ನೇರ ಕಾರಣ. ಇಲಾಖೆಯ ಹೊಣೆ ಹೊತ್ತವರ ನೆರಳಿನಡಿಯಲ್ಲಿ ಈ ಎಲ್ಲ ‘ವ್ಯವಹಾರ’ಗಳು ನಡೆಯುತ್ತವೆ ಎಂಬ ಆರೋಪ ಇಲಾಖೆಯ ಒಳಗಿನಿಂದಲೇ ಕೇಳಿಬರುತ್ತಿದೆ. ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ, ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಯೂ ಆಗಿರುವ ಆಡಳಿತ ಪಕ್ಷವಾದ ಬಿಜೆಪಿಯ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಒಬ್ಬರೇ ಲೋಕಾಯುಕ್ತಕ್ಕೆ 40 ದೂರು ನೀಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದಲ್ಲೂ (ಎಸಿಬಿ) ಹಲವು ದೂರುಗಳು ದಾಖಲಾಗಿವೆ. ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಕೂಡಾ ಇಂಥ ಪ್ರಕರಣಗಳ ವಿಚಾರಣೆ ನಡೆಸಿದೆ. ಆದರೆ, ಯಾವುದೇ ತನಿಖೆ, ವಿಚಾರಣೆ ತಾರ್ಕಿಕ ಅಂತ್ಯ ಕಂಡಿಲ್ಲ.

ಕೋವಿಡ್‌ ಭೀಕರತೆಯ ದಿನಗಳಲ್ಲಿ ‘ತುರ್ತು ಅಗತ್ಯ’ದ ನೆಪದಲ್ಲಿ ₹ 30ರಿಂದ ₹ 40 ಬೆಲೆಯ ಎನ್95 ಮಾಸ್ಕ್‌ಗಳನ್ನು ₹ 150, ₹ 200, ₹ 300 ಬೆಲೆಗೆ, ₹ 600 ದರ ಇದ್ದ ಪಿಪಿಇ ಕಿಟ್‌ ₹ 1,500ರಿಂದ ₹ 2,000 ಹೀಗೆ ದುಪ್ಪಟ್ಟು ಬೆಲೆ ನೀಡಿ ಆರೋಗ್ಯ ಇಲಾಖೆ ಖರೀದಿಸಿರುವ ಆರೋಪ ಕೇಳಿಬಂದಿತ್ತು.

ಆರಂಭದಲ್ಲಿ ಕೆಲವು ಕಳಪೆ ಉಪಕರಣಗಳನ್ನೂ ಖರೀದಿ ಮಾಡಲಾಗಿತ್ತು. ವೈದ್ಯರಿಂದ ದೂರುಗಳು ಬಂದಿದ್ದರಿಂದ ನಂತರ ಉತ್ತಮ ಗುಣಮಟ್ಟದ ಉಪಕರಣಗಳನ್ನು ಖರೀದಿಸಲಾಗಿದೆ. ಹಾಗೆಂದು, ‘ಕಮಿಷನ್‌’ ಮೊತ್ತ ಕಡಿಮೆ ಆಗುತ್ತದೆ ಎಂದು ಅನಿಸಿದ್ದರೆ ಅದು ಸುಳ್ಳು. ಏಕೆಂದರೆ, ಹೆಚ್ಚಿನ ಕಮಿಷನ್ ಹೊಡೆಯಲು ಅದೇ ಪ್ರಮಾಣದಲ್ಲಿ ಖರೀದಿ ದರ ಏರಿಸಲಾಗಿತ್ತು.

‘ಗುತ್ತಿಗೆ ಸಿಗಬೇಕಾದರೆ ಮೊದಲೇ ‘ಕಮಿಟ್‌ಮೆಂಟ್ ಹಣ’ ಎಂದು ಶೇ 10 ಕೊಡಬೇಕು. ಎಲ್ಲ ಮುಗಿದ ಬಳಿಕ ‘ಒಪ್ಪಂದ’ ಮಾಡಿಕೊಂಡಷ್ಟು ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಲೇಬೇಕು. ಅದೂ ಇಲಾಖೆಯ ಹಿರಿಯ ಅಧಿಕಾರಿಯೇ ಇರಬಹುದು, ಖಾತೆ ವಹಿಸಿಕೊಂಡಿದ್ದ ಸಚಿವರಿಗೇ ಇರಬಹುದು’ ಎಂದು ಹೆಸರು ಹೇಳಲು ಬಯಸದ ಉಪಕರಣಗಳ ಸರಬರಾಜುದಾರರು ಹೇಳುತ್ತಾರೆ.

ಔಷಧ ಖರೀದಿಯಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್‌– ಹಿಂದಿನ ಕರ್ನಾಟಕ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಆ್ಯಂಡ್‌ ವೇರ್‌ಹೌಸಿಂಗ್‌ ಸೊಸೈಟಿ– ಕೆಡಿಎಲ್‌ಡಬ್ಲೂಎಸ್‌) ಅಧಿಕಾರಿಗಳು, ಮಧ್ಯವರ್ತಿಗಳು ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿ– ಕೋಟಿ ನಷ್ಟ ಉಂಟು ಮಾಡಿರುವ ಹಲವು ಪ್ರಕರಣಗಳು ಸಿಗುತ್ತವೆ. ವೈದ್ಯಕೀಯ ಉಪಕರಣಗಳು, ಔಷಧಗಳ ದರ ಪರಿಶೀಲಿಸದೆ ಕಂಪನಿಗಳು ನಮೂದಿಸಿದ ದುಪ್ಪಟ್ಟು ದರವನ್ನು ಕೆಎಸ್‌ಎಂಎಸ್‌ಸಿಎಲ್‌ ಅನುಮೋದಿಸಿ, ಖರೀದಿಸಿದೆ. ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌– ಹೀಗೆ ಎಲ್ಲ ಪರಿಕರಗಳ ಖರೀದಿಯಲ್ಲೂ ಈ ಕರಾಮತ್ತು ನಡೆದಿದೆ. ಉಪಕರಣಗಳನ್ನು ಸರಬರಾಜು ಮಾಡಿದ ಕಂಪನಿಗಳು ತನ್ನದೇ ಉತ್ಪನ್ನಕ್ಕೆ ಎರಡೆರಡು ದರ ನಮೂದಿಸಿಯೂ ಅಕ್ರಮ ನಡೆಸಿವೆ. ಇನ್ನೂ ಕೆಲವು ಕಂಪನಿಗಳು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಉಪಕರಣಗಳನ್ನು ಸರಬರಾಜು ಮಾಡಿವೆ.

ಕೋವಿಡ್ ಎದುರಿಸಲು ತರಾತುರಿಯಲ್ಲಿ ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ ಪಡೆದಿದ್ದ ಕೆಎಸ್‌ಎಂಎಸ್‌ಸಿಎಲ್‌, ಉಪಕರಣಗಳು ಮತ್ತು ಔಷಧ ಖರೀದಿಗೆ ಕಂಪನಿಗೆ ಕಾರ್ಯಾದೇಶ ನೀಡುವ ಮೊದಲು ಮಾರುಕಟ್ಟೆ ದರ ಮತ್ತು ಕಂಪನಿ ನಮೂದಿಸಿದ್ದ ದರವನ್ನು ಹೋಲಿಸಿ ನೋಡಬೇಕಿತ್ತು. ಆದರೆ, ಈ ಕೆಲಸ ಮಾಡದ ನಿಗಮದ ಕೆಲವು ಅಧಿಕಾರಿಗಳು, ನಿರ್ದಿಷ್ಟ ಕಂಪನಿಗಳಿಂದ ಮಾತ್ರ ಕೊಟೇಷನ್ ಪಡೆದು ಖರೀದಿಸಿದ ಆರೋಪವೂ ಇದೆ.

‘ಸಿರಿಂಜ್‌ ಪಂಪ್‌, ಟೇಬಲ್‌ ಟಾಪ್‌ ಪಲ್ಸ್‌ ಆಕ್ಸಿಮೀಟರ್‌, ಇಸಿಜಿ ಯಂತ್ರ, ಮಲ್ಟಿ ಪ್ಯಾರಾ ಪೇಷೆಂಟ್‌ ಮಾನಿಟರ್‌ ಉಪಕರಣ ಖರೀದಿಗೆ ಮುಂದಾಗುವ ಮೊದಲು ಕೊಟೇಷನ್‌ ಅನ್ನು ಎಲ್ಲ ಪೂರೈಕೆದಾರ ಕಂಪನಿಗಳಿಗೆ ತಲುಪಿಬೇಕಿತ್ತು. ಸಂಸ್ಥೆಯ ಇ– ಪೋರ್ಟಲ್‌ನಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಿತ್ತು. ಆದರೆ, ಅದನ್ನು ಮಾಡದೆ ನಿರ್ದಿಷ್ಟ ಕಂಪನಿಯಿಂದ ಖರೀದಿಸಿರುವುದರ ಹಿಂದೆ ಅಕ್ರಮದ ವಾಸನೆ ದಟ್ಟವಾಗಿದೆ. ಕೊಟೇಷನ್‌ ಕೊಟ್ಟಿದ್ದರೆ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲು ಅವಕಾಶ ಇತ್ತು. ಆದರೆ, ಕಮಿಷನ್‌ ಪಡೆಯುವ ಉದ್ದೇಶದಿಂದ ನಿರ್ದಿಷ್ಟ ಕಂಪನಿಗಳಿಂದ ಕೊಟೇಷನ್‌ ಪಡೆದು ದುಪ್ಪಟ್ಟು ದರದಲ್ಲಿ ಉಪಕರಣಗಳನ್ನು ಖರೀದಿಸಲಾಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳೇ ವಿವರಿಸುತ್ತಾರೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಕೆಎಸ್‌ಎಂಎಸ್‌ಸಿಎಲ್‌ ಭಾರಿ ಅಕ್ರಮ ನಡೆಸಿದೆ ಎಂದು ಆರೋಪಿಸಿ, ಕೆಲವು ದಾಖಲೆಗಳ ಸಹಿತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ‘ಈ ವ್ಯವಹಾರಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಎಸಿಬಿಗೆ ದೂರು ನೀಡಿತ್ತು. ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ನೆಪ ಹೇಳಿದ ಎಸಿಬಿ, ತನಿಖೆ ನಡೆಸುವ ಗೋಜಿಗೇ ಹೋಗಿಲ್ಲ.

ಇಲಾಖೆಯಲ್ಲಿ ₹ 50 ಲಕ್ಷಕ್ಕಿಂತ ಹೆಚ್ಚು ಮೊತ್ತದ ಔಷಧಿಗಳನ್ನು ಖರೀದಿಸಬೇಕಾದರೆ ಹಿರಿಯ ತಜ್ಞರನ್ನು ಒಳಗೊಂಡ ಪರಿಣತರ ತಂಡ ಪರಿಶೀಲನಾ ಸಭೆ ನಡೆಸಬೇಕು. ಯಾವ ಕಂಪನಿಗೆ ನೀಡಲಾಗುತ್ತಿದೆ, ಕಂಪನಿಯ ಹಿನ್ನೆಲೆ ಏನು, ಉತ್ಪಾದನಾ ಸಾಮರ್ಥ್ಯ, ಪಾರದರ್ಶಕತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕವೇ ಟೆಂಡರ್ ನೀಡಬೇಕಾಗುತ್ತದೆ. ಆದರೆ, ಈ ಎಲ್ಲ ಮಾನದಂಡಗಳು ಇತ್ತೀಚಿನ ದಿನಗಳಲ್ಲಿ ಕಾಗದದಲ್ಲಷ್ಟೆ ಉಳಿದಿವೆ.

‘ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸ್ವಾಯತ್ತ ಸಂಸ್ಥೆಗಳಾದ ಬಳಿಕ ವೈದ್ಯಕೀಯ ಪರಿಕರಗಳನ್ನು ಆಯಾ ಕಾಲೇಜುಗಳ ಹಂತದಲ್ಲೇ ಟೆಂಡರ್ ಕರೆದು, ಕೆಟಿಪಿಪಿ ನಿಯಮಾವಳಿ ಪಾಲಿಸಿ ಖರೀದಿಸಲಾಗುತ್ತಿತ್ತು. ಕಾಲೇಜುಗಳಲ್ಲಿ ಇರುವ ಖರೀದಿ ಸಮಿತಿ ಮತ್ತು ಆರ್ಥಿಕ ಸಮಿತಿಗಳಲ್ಲಿ ಅನುಮೋದನೆ ಪಡೆದು ಖರೀದಿ ಮಾಡಲಾಗುತ್ತಿತ್ತು. ನಿರ್ದೇಶಕರ ಮತ್ತು ಕಚೇರಿ ಹಂತದಲ್ಲಿ ಸ್ವಲ್ಪ ಮಟ್ಟಿನ ಲಂಚ ವ್ಯವಹಾರ ನಡೆದರೂ ಗುಣಮಟ್ಟದ ಉಪಕರಣಗಳನ್ನು ಖರೀದಿ ಮಾಡುತ್ತಿದ್ದರು. ಸಚಿವರ ಕಚೇರಿ ಅಷ್ಟಾಗಿ ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ, ಕೋವಿಡ್ ಸಮಯದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಬೇಕಾದ ಉಪಕರಣಗಳನ್ನು ರಾಜ್ಯಮಟ್ಟದಲ್ಲಿ ಕೇಂದ್ರೀಕೃತವಾಗಿ ಖರೀದಿಸಲಾಯಿತು. ಆ ಬಳಿಕ ‘ಪದ್ಧತಿ’ ಬದಲಾಗಿ, ಎಲ್ಲವೂ ಇಲಾಖೆಯ ‘ಪ್ರಭಾವಿ’ಗಳ ಮೇಲುಸ್ತುವಾರಿಗೆ ಸೀಮಿತವಾಯಿತು. ಟೆಂಡರ್ ಕರೆಯುವ ಅಧಿಕೃತ ವ್ಯವಹಾರ ವೈದ್ಯಕೀಯ ಶಿಕ್ಷಣ ನಿರ್ದೇಶಕರ (ಡಿಎಂಇ) ಮೂಲಕ ನಡೆಯಿತು.

ತುರ್ತು ಖರೀದಿ ನೆಪ ಒಡ್ಡಿ ಅನೇಕ ಉಪಕರಣಗಳ ಖರೀದಿಗೆ ಆರ್ಥಿಕ ಸಂಹಿತೆಯಿಂದ ವಿನಾಯಿತಿ ಪಡೆಯಲಾಯಿತು. ಇದರಿಂದ ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಿ ಭಾರಿ ಕಮಿಷನ್ ಹೊಡೆಯಲು ಅವಕಾಶ ಸೃಷ್ಟಿಸಿಕೊಳ್ಳಲಾಯಿತು. ಈ ‘ವ್ಯವಸ್ಥೆ’ ಅಳವಡಿಸಿಕೊಂಡಿದ್ದರಿಂದ, ಮುಂದೇನಾದರೂ ತನಿಖೆಯಾದರೆ ಅಧಿಕಾರಿ ಸಿಕ್ಕಿ ಹಾಕಿಕೊಳ್ಳುತ್ತಾರೆಯೇ ಹೊರತು, ‘ವ್ಯವಹಾರ’ದ ಮೂಲದಲ್ಲಿರುವವರು ತಪ್ಪಿಸಿಕೊಳ್ಳುತ್ತಾರೆ. ಇದೆಲ್ಲ ಡಿಎಂಇ ಅವರಿಗೆ ಗೊತ್ತಿದ್ದರೂ, ಮರ್ಜಿಗೆ ಬಿದ್ದು ಒಪ್ಪಿಕೊಳ್ಳಲೇಬೇಕಾಗಿ ಬಂದಿತ್ತು’ ಎನ್ನುತ್ತವೆ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು.

***

‘ಲಂಚಮುಕ್ತ, ಉತ್ತರದಾಯಿತ್ವವಾಗಿಸಲು ಕ್ರಮ’
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸಿ ಗುಣಮಟ್ಟದ ಸೇವೆ ನೀಡಲು ಸಾಕಷ್ಟು ಕ್ರಮಗಳನ್ನು ತೆಗೆದುಗೊಳ್ಳಲಾಗಿದೆ. ಮೊದಲ ಬಾರಿಗೆ ಎರಡೂವರೆ ಸಾವಿರಕ್ಕೂ ಹೆಚ್ಚಿನ ವೈದ್ಯರು ಮತ್ತು ತಜ್ಞರ ನೇಮಕ ಮಾಡಲಾಗಿದೆ. ಅಂಕ ಮತ್ತು ಮೀಸಲು ಆಧಾರದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಯಿತು. ಹಾಜರಾಗದವರ ಬದಲು ಕಾದಿರಿಸಿದ ಪಟ್ಟಿಯಿಂದ ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಲಾಗುತ್ತಿದೆ. ದೂರುಗಳ ಹಿನ್ನಲೆಯಲ್ಲಿ ಇಲಾಖಾ ನಿಯಮಗಳ ಅನ್ವಯ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಇಲಾಖಾ ಮುಂಬಡ್ತಿ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಬಡ್ತಿ ನೀಡಲಾಗುತ್ತಿದೆ. ಹೊಸ ವೈದ್ಯಕೀಯ ಕಾಲೇಜುಗಳ ನೇಮಕಕ್ಕೆ ಮಾರ್ಗಸೂಚಿ ಮತ್ತು ನಿಯಮಗಳ ಅನ್ವಯ ತಜ್ಞರ ಸಮಿತಿ ರಚಿಸಲಾಗಿದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಅದೇ ದಿನ ಪ್ರಕಟಿಸಲಾಗಿದೆ. ರೋಸ್ಟರ್‌ ಬಗ್ಗೆ ಡಿಪಿಎಆರ್‌ನಿಂದ ಸ್ಪಷ್ಟನೆ ಪಡೆದ ಬಳಿಕ ನೇಮಕ ಆದೇಶ ನೀಡಲಾಗುತ್ತಿದೆ.

ಖರೀದಿಯಲ್ಲಿ ಪಾರದರ್ಶಕತೆ ತಂದು, ಕೆಎಸ್‌ಎಂಎಸ್‌ಸಿಎಲ್‌ ಮೂಲಕ ಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್‌ ಮೂಲಕವೇ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗುತ್ತಿದೆ. ಕೋವಿಡ್‌ ಸಂದರ್ಭದ ಎಲ್ಲ ಖರೀದಿ ಪ್ರಕ್ರಿಯೆಗಳು ವಿಶೇಷ ಕಾರ್ಯಪಡೆ ಮತ್ತು ತಜ್ಞರ ಶಿಫಾರಸಿನ ಅನ್ವಯವೇ ನಡೆದಿವೆ. ವಿಧಾನಮಂಡಲದ ಉಭಯ ಸದನಗಳಲ್ಲಿ ಆ ವಿವರಗಳನ್ನು ನೀಡಲಾಗಿದೆ. ಎಲ್ಲ ಹಂತದ ಅಧಿಕಾರಿಗಳು ಪ್ರತಿ ಬುಧವಾರ ಆಸ್ಪತ್ರೆ, ಕಚೇರಿಗೆ ಭೇಟಿ ನೀಡಿ ಪರಿಶೀಲಿಸುವ ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸುವ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ.ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗೆ ಹೆಚ್ಚುವರಿಯಾಗಿ ಮುಖ್ಯ ವಿಚಕ್ಷಣಾ ದಳದ ಉಸ್ತುವಾರಿ ನೀಡಲಾಗಿದ್ದು, ಅವರಿಗೆ ದೂರು ಸಲ್ಲಿಸಿದರೆ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.

ಗುಣಮಟ್ಟದ ಆಡಳಿತಕ್ಕಾಗಿ ಇ- ಆಡಳಿತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಆಯುಕ್ತರ ಹಂತದಿಂದ ಪಿಎಚ್‌ಸಿವರೆಗೆ ಎಲ್ಲ ಕಚೇರಿಗಳನ್ನು ಆನ್‌ಲೈನ್‌ ಮೂಲಕ ಸಂಪರ್ಕಗೊಳಿಸಲಾಗುತ್ತಿದೆ. ವೈದ್ಯಾಧಿಕಾರಿಗಳಿಗೆ ಆಡಳಿತದ ತರಬೇತಿ ನೀಡಲು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ

-ಡಾ.ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ**
‘ಸಂಧಾನ ಸಮಿತಿ’ ಸಭೆಯಲ್ಲಿ ‘ಮ್ಯಾಚ್ ಫಿಕ್ಸಿಂಗ್’
ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕರು ತಮಗೆ ಬೇಕಾದ ಜಿಲ್ಲೆಗೆ ವರ್ಗಾವಣೆ ಬಯಸಿದರೆ, ಆರೋಗ್ಯ ಸಚಿವರಿಗೆ ₹ 25 ಲಕ್ಷ ಲಂಚ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಗ್ಯ ಸಚಿವರ ಕಾರ್ಯಾಲಯದಿಂದಲೇ ಆರಂಭವಾಗುತ್ತದೆ. ಉಪಕರಣ ಖರೀದಿಗಾಗಿ ಕೆಎಸ್‌ಎಂಎಸ್‌ಸಿಎಲ್‌ ಟೆಂಡರ್‌ ಆಹ್ವಾನಿಸುತ್ತದೆ. ಲಂಚ ನೀಡಲು ಸಾಧ್ಯವಾಗದ ಬಿಡ್ಡರ್‌ಗಳನ್ನು ತೆಗೆದುಹಾಕಲು ಮಾತ್ರ ಡೆಮೋ (ಪ್ರದರ್ಶನ) ಮಾಡಲಾಗುತ್ತದೆ. ಡೆಮೋ ಹಂತದಲ್ಲಿ ಸಾಕಷ್ಟು ಲಂಚ ಪಡೆಯಲಾಗುತ್ತದೆ. ಟೆಂಡರ್ ಆಹ್ವಾನಿಸಿ, ಕಾರ್ಯಾದೇಶ ನೀಡುವಾಗ ಲಂಚ ಪಡೆದು ಅಂತಿಮಗೊಳಿಸಲಾಗುತ್ತದೆ. ಔಷಧ, ಉಪಕರಣಗಳ ಖರೀದಿಗೆ ಸಂಧಾನ ಸಮಿತಿ ಸಭೆಯಲ್ಲಿ ‘ಮ್ಯಾಚ್ ಫಿಕ್ಸಿಂಗ್’ ನಡೆಯುತ್ತದೆ. ಮರು ಮಾತುಕತೆಯ ವೇಳೆ, ಲಂಚ ಎಷ್ಟು, ಎಲ್ಲಿ, ಹೇಗೆ ನೀಡಬೇಕು ಎನ್ನುವುದು ನಿಗದಿಯಾದ ಬಳಿಕ, ಟೆಂಡರ್‌ ಅನುಮೋದಿಸಲಾಗುತ್ತದೆ. ಇಲಾಖೆಗೆ ಪೂರೈಕೆ ಮಾಡಿದ ಔಷಧ ಮತ್ತು ಉಪಕರಣಗಳ ಬಿಲ್ ಪಾವತಿ ಮಾಡುವಾಗಲೂ ದೊಡ್ಡ ಭ್ರಷ್ಟಾಚಾರ ನಡೆಯುತ್ತದೆ. ಇಎಂಡಿ ಮತ್ತು ಭದ್ರತಾ ಠೇವಣಿಯನ್ನು ಪೂರೈಕೆದಾರರಿಗೆ ಮರಳಿ ನೀಡುವಾಗಲೂ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಯಾವುದೇ ಖರೀದಿಗೆ ಜೆಮ್ ಪೋರ್ಟಲ್ ಬಳಸಬೇಕು. ಆದರೆ, ಅದನ್ನು ಉಪಯೋಗಿಸುವುದಿಲ್ಲ.

-ಡಾ. ಸಾರ್ವಭೌಮ ಬಗಲಿ, ಬಿಜೆಪಿ ಮಾಜಿ ಶಾಸಕ
-ಡಾ. ಸಾರ್ವಭೌಮ ಬಗಲಿ, ಬಿಜೆಪಿ ಮಾಜಿ ಶಾಸಕ


**
ಹುದ್ದೆಗೆ ಲಕ್ಷ, ಲಕ್ಷದ ಲೆಕ್ಕ!
‘ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆಯುವ ನೇಮಕಾತಿಗಳಲ್ಲಿ ಆಯಾ ಹುದ್ದೆಗೆ, ಈ ಹಿಂದೆ 10 ತಿಂಗಳ ವೇತನ ಲಂಚವಾಗಿ ನೀಡಬೇಕಿತ್ತು. ಈಗ ಆ ಪದ್ಧತಿ ಬದಲಾಗಿದೆ. ನೇಮಕಾತಿ ಆದೇಶ ಪತ್ರ ಕೈಗೆ ಸಿಗಬೇಕಿದ್ದರೆ 20 ತಿಂಗಳ ವೇತನ ನೀಡಲೇಬೇಕು’ ಎಂದು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

‘ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಈಗ ಅಟಲ್‌ ಬಿಹಾರಿ ವಾಜಪೇಯಿ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ) ಸಹಾಯಕ ಪ್ರಾಧ್ಯಾಪಕ ಹುದ್ದೆ ಬೇಕಿದ್ದರೆ ₹ 80 ಲಕ್ಷ ಲಂಚ ನೀಡಬೇಕಿದೆ. ಇತರ ವೈದ್ಯಕೀಯ ಕಾಲೇಜುಗಳಲ್ಲಿ ಈ ಮೊತ್ತ ₹ 25 ಲಕ್ಷದಿಂದ 35 ಲಕ್ಷವಿದೆ. ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ 60 ಬೋಧಕ ಸಿಬ್ಬಂದಿಯ ನೇಮಕಕ್ಕೆ ಸಂದರ್ಶನ ನಡೆದು ವರ್ಷ ಕಳೆದಿದೆ. ಹಣ ಕೊಟ್ಟವರಿಗೆ ಮಾತ್ರ ನೇಮಕಾತಿ ಆದೇಶ ನೀಡಲಾಗಿದೆ. ಲಂಚ ನೀಡದ ಇನ್ನೂ 20 ಮಂದಿಗೆ ನೇಮಕಾತಿ ಆದೇಶ ಪತ್ರವನ್ನೇ ನೀಡಿಲ್ಲ’ ಎಂದೂ ಅವರು ದೂರಿದರು.

‘ಇನ್ನೂ ಹೊಸದಾಗಿ ಆರಂಭವಾಗುವ ವೈದ್ಯಕೀಯ ಕಾಲೇಜುಗಳಲ್ಲಿ ಪೀಠೋಪಕರಣ, ಗ್ರಂಥಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ₹ 50 ಕೋಟಿಯಿಂದ ₹ 60 ಕೋಟಿ ಲಂಚವಾಗಿ ಹೋಗುತ್ತದೆ. ಚಿಕ್ಕಮಗಳೂರು, ಹಾವೇರಿ, ಚಿತ್ರದುರ್ಗ, ಯಾದಗಿರಿ ವೈದ್ಯಕೀಯ ಕಾಲೇಜುಗಳು ನಿರ್ಮಾಣ ಹಂತದಲ್ಲಿವೆ. ಈ ಪೈಕಿ, ಚಿಕ್ಕಮಗಳೂರು, ಹಾವೇರಿ ವೈದ್ಯಕೀಯ ಕಾಲೇಜುಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ’ ಎಂದರು.

**

ಭ್ರಷ್ಟರಾಗಲು ‘ವ್ಯವಸ್ಥೆ’ಯೂ ಕಾರಣ
‘ನೇಮಕಾತಿಗಳಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರೇ ದಲ್ಲಾಳಿಗಳಾಗಿದ್ದಾರೆ. ಅಭ್ಯರ್ಥಿಯಿಂದ ಕಿತ್ತು ಕೊಡುವುದು ಅವರ ಕೆಲಸ. ಗುತ್ತಿಗೆದಾರರಿಂದ, ವಿತರಕರಿಂದ, ವೈದ್ಯರಿಂದ, ಸಿಬ್ಬಂದಿಯಿಂದ ವಸೂಲಿ ಮಾಡಿ ತಲುಪಿಸಬೇಕಾದಲ್ಲಿಗೆ ನಿಯಮಿತವಾಗಿ ಹಣ ತಲುಪಿಸುತ್ತಾರೆ. ಜ್ಯೇಷ್ಠತೆ ಪರಿಗಣಿಸದೆ ಯಾರನ್ನು ಬೇಕಾದರೂ ನೇಮಕ ಮಾಡಬಹುದು, ಯಾವಾಗ ಬೇಕಾದರೂ ತೆಗೆದು ಹಾಕಬಹುದೆಂಬ ಭಯದಿಂದಾಗಿ ಹೇಳಿದಂತೆ ಕೇಳುತ್ತಾರೆಂಬ ಕಾರಣಕ್ಕೆಬಹಳಷ್ಟು ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶಕರನ್ನು ಪ್ರಭಾರಿಯಾಗಿ ನೇಮಿಸಲಾಗುತ್ತಿದೆ. ಈ ನಿರ್ದೇಶಕರು ಆಗಾಗ ಮಾಮೂಲಿ ನೀಡಲೇಬೇಕು. ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೆ, ಹೆಚ್ಚು ಹೆಚ್ಚು ಉಪಕರಣ ಖರೀದಿ ಮಾಡಿದರೆ ಹೆಚ್ಚಿನ ಮೊತ್ತ ನೀಡಬೇಕು. ವಾಕ್ ಇನ್ ಸಂದರ್ಶನ ನಡೆಸಿ ನೇಮಕಾತಿ ಮಾಡಿದರೆ ನಿರೀಕ್ಷೆಗೂ ಮೀರಿ ಹಣ ತಲುಪಿಸಬೇಕು. ಈ ‘ವ್ಯವಸ್ಥೆ’ಯಿಂದಲೇ ಕೆಲವು ನಿರ್ದೇಶಕರು ಭ್ರಷ್ಟರಾಗಿ ಬದಲಾಗಿದ್ದಾರೆ. ಕೆಲವರು ಹಣ ಮಾಡುವ ಉದ್ದೇಶದಿಂದಲೇ ಅಧಿಕಾರ ಹಿಡಿದಿದ್ದಾರೆ’ ಎನ್ನುತ್ತಾರೆ ಅವರು.

**
ಟೆಂಡರ್‌ ದಾಖಲೆ ಸೋರಿಕೆ!
ಪ್ರತಿ ವರ್ಷ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ವೈದ್ಯಕೀಯ ಮಹಾವಿಶ್ವವಿದ್ಯಾಲಯ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ಯಾಂಡೇಜ್‌ ಬಟ್ಟೆ, ಹತ್ತಿ, ಗ್ಲೂಕೋಸ್‌ ಬಾಟಲ್‌, ಚುಚ್ಚುಮದ್ದು ಸೇರಿ ಕೆಲವು ಕೋಟಿ ಮೊತ್ತದ ಔಷಧಗಳ ಖರೀದಿಗೆ ಟೆಂಡರ್‌ ಕರೆಯಲಾಗುತ್ತದೆ. ಆದರೆ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಬಿಡ್‌ದಾರರು ಸಲ್ಲಿಕೆ ಮಾಡಿರುವ ರಹಸ್ಯ ದಾಖಲೆಗಳು ಹಿಂದಿನ ಕೆಡಿಎಲ್‌ಡಬ್ಲೂಎಸ್‌ ಅಧಿಕಾರಿಗಳಿಂದಲೇ ಅಕ್ರಮವಾಗಿ ಸೋರಿಕೆಯಾದ ಪ್ರಕರಣ ನಡೆದಿವೆ. 2018-19ನೇ ಸಾಲಿನಲ್ಲಿ ಔಷಧಗಳ ಖರೀದಿಗೆ ಕರೆದಿದ್ದ ಸುಮಾರು ₹ 300 ಕೋಟಿ ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಈ ರೀತಿಯ ಅಕ್ರಮ ನಡೆದಿತ್ತು. ನಾಲ್ವರು ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ಕೂಡಾ ಜಾರಿ ಮಾಡಲಾಗಿತ್ತು.

ಟೆಂಡರ್‌ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾರಾಟ ತೆರಿಗೆ, ಆದಾಯ ತೆರಿಗೆ ದಾಖಲೆ ಸಲ್ಲಿಸದವರು, ಅರ್ಹರಲ್ಲದ ಬಿಡ್‌ದಾರರ ಹೆಸರು ಬಹಿರಂಗಗೊಂಡರೂ ಬಾಹ್ಯ ಒತ್ತಡಗಳ ಕಾರಣಕ್ಕೆ ಅಂಥ ಲೋಪಗಳು ಗೌಣ ಆಗುತ್ತವೆ ಎನ್ನುವುದು ಖರೀದಿಯ ಒಳ–ಹೊರಗು ಗೊತ್ತಿರುವವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT