ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್: ಶೇ 40ರ ವರೆಗೆ ಲಂಚದ ಆರೋಪ- ಪ್ರಧಾನಿಗೆ ದೂರಿತ್ತ ಗುತ್ತಿಗೆದಾರರು

Last Updated 18 ನವೆಂಬರ್ 2021, 22:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡ 40ರಷ್ಟು ಲಂಚದ ರೂಪದಲ್ಲೇ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನಗರಾಭಿವೃದ್ಧಿ, ಆರೋಗ್ಯ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಂಜೂರಾದ ಅನುದಾನದ ಅರ್ಧದಷ್ಟು ಮೊತ್ತ ಲಂಚದ ರೂಪದಲ್ಲೇ ಕೊಳ್ಳೆಯಾಗುತ್ತಿದೆ ಎಂದು ಸಂಘಟನೆ ದೂರಿನಲ್ಲಿ ಆರೋಪಿಸಿದೆ. ಅನುದಾನ ಮಂಜೂರಾತಿಯಿಂದ ಬಿಲ್‌ ಪಾವತಿಯವರೆಗೆ ‘ಕಾಂಚಾಣ ಕುಣಿತ’ವೇ ಎಲ್ಲವನ್ನೂ ನಿರ್ಧರಿಸುತ್ತಿದ್ದು, ‘ಗುತ್ತಿಗೆದಾರರ ಬಳಿ ಹಣ ಸೃಷ್ಟಿಸುವ ಮಂತ್ರದಂಡವಿದೆ ಎಂದು ಭಾವಿಸಿ ಸುಲಿಗೆ ಮಾಡಲಾಗುತ್ತಿದೆ’ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.

ರಾಜ್ಯದಲ್ಲಿ ಸಿವಿಲ್‌, ಎಲೆಕ್ಟ್ರಿಕ್‌ ಸೇರಿದಂತೆ ವಿವಿಧ ಬಗೆಯ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಸದಸ್ಯರಾಗಿರುವ 52 ಅಸೋಸಿಯೇಷನ್‌ಗಳು ರಾಜ್ಯ ಗುತ್ತಿಗೆದಾರರ ಸಂಘದ ಸದಸ್ಯತ್ವ ಹೊಂದಿವೆ. ಒಟ್ಟು ಒಂದು ಲಕ್ಷಕ್ಕೂ ಅಧಿಕ ಗುತ್ತಿಗೆದಾರರು ಸದಸ್ಯರಾಗಿರುವ ಈ ಸಂಘ ಸರ್ಕಾರದ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ದನಿ ಎತ್ತಿದ್ದು, ಸ್ವಯಂಪ್ರೇರಿತವಾಗಿ ತನಿಖೆಗೆ ಆದೇಶಿಸುವಂತೆ ಪ್ರಧಾನಿಯವರನ್ನು ಆಗ್ರಹಿಸಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಜುಲೈ 7ರಂದು ಪ್ರಧಾನಿ ಕಚೇರಿಗೆ ನೋಂದಾಯಿತ ಅಂಚೆ ಮೂಲಕ ದೂರು ರವಾನಿಸಿದ್ದರು. ಜುಲೈ 13ರಂದು ದೂರು ಪ್ರಧಾನಿ ಕಚೇರಿಯನ್ನು ತಲುಪಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರಿಗೂ ದೂರು ಕಳುಹಿಸಿದ್ದರು. ಮುಖ್ಯಮಂತ್ರಿ, ಗುತ್ತಿಗೆ ಕಾಮಗಾರಿಗಳು ನಡೆಯುತ್ತಿರುವ ಇಲಾಖೆಯ ನೇತೃತ್ವ ವಹಿಸಿರುವ ಸಚಿವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ರಾಜ್ಯದ ಎಲ್ಲ ಶಾಸಕರಿಗೂ ಸಂಘದಿಂದಲೇ ಪತ್ರ ಬರೆದು, ಲಂಚದ ಹಾವಳಿ ತಡೆಗೆ ಒತ್ತಾಯಿಸಲಾಗಿತ್ತು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಗುರುವಾರ ಭೇಟಿಮಾಡಿದ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆಯಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದಾರೆ. ‘ಗುತ್ತಿಗೆದಾರರು ಶೇ 40ರಷ್ಟು ಮೊತ್ತವನ್ನು ಲಂಚದ ರೂಪದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನೀಡಬೇಕಾಗಿರುವುದರಿಂದಲೇ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಂಚಕ್ಕೆ ಕಡಿವಾಣ ಹಾಕಿದರೆ ಭವಿಷ್ಯದ ದಿನಗಳಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರೀಕ್ಷಿಸಬಹುದು’ ಎಂದು ಮನವಿಯಲ್ಲಿ ಉಲ್ಲೆಖಿಸಲಾಗಿದೆ.

ಅಡಿಯಿಂದ ಮುಡಿವರೆಗೆ ಲಂಚ: ‘ಕೆಲವು ಸಚಿವರು ಟೆಂಡರ್‌ ಅನುಮೋದನೆಗೂ ಮೊದಲು ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ. ಕಾಮಗಾರಿ ಆರಂಭಿಸುವ ಮುನ್ನವೇ ಒಟ್ಟು ಮೊತ್ತದ ಶೇ 2ರಷ್ಟನ್ನು ತಮಗೆ ನೀಡುವಂತೆ ರಾಜ್ಯದ ಕೆಲವು ಸಂಸದರು ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕಟ್ಟಡ ಕಾಮಗಾರಿಗಳಲ್ಲಿ ಶೇ 5ರಷ್ಟು ಮತ್ತು ರಸ್ತೆ ಕಾಮಗಾರಿಗಳಲ್ಲಿ ಶೇ 10ರಷ್ಟು ಲಂಚವನ್ನು ಮುಂಗಡವಾಗಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ’ ಎಂಬ ಆರೋಪ ಪ್ರಧಾನಿಗೆ ನೀಡಿದ ದೂರಿನಲ್ಲಿದೆ.

‘ರಾಜ್ಯದ ಒಬ್ಬ ಹಿರಿಯ ಸಚಿವರು ಟೆಂಡರ್‌ ಅನುಮೋದನೆಗೂ ಮೊದಲು ಶೇ 15ರಷ್ಟು ಲಂಚ ನೀಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಇನ್ನೊಬ್ಬ ಸಚಿವರು ಶೇ 10ರಷ್ಟು ನಿಗದಿಪಡಿಸಿದ್ದು, ತಾವೇ ನೇರವಾಗಿ ಗುತ್ತಿಗೆದಾರರಿಗೆ ಕರೆಮಾಡಿ ಕರೆಸಿಕೊಳ್ಳುತ್ತಾರೆ. ಗುತ್ತಿಗೆದಾರರಿಂದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲಂಚ ಪಡೆಯುವುದು ಹೊಸದೇನೂ ಅಲ್ಲ. ಆದರೆ, 2019ರಿಂದ ಲಂಚದ ಪ್ರಮಾಣ ದುಪ್ಪಟ್ಟಾಗಿದೆ. ಕೆಲವು ಪ್ರಕರಣಗಳಲ್ಲಿ ಶೇ 52ರಷ್ಟು ಮೊತ್ತ ಲಂಚಕ್ಕೇ ಬಳಕೆಯಾದ ಉದಾಹರಣೆಗಳೂ ಇವೆ’ ಎಂದು ಕೆಂಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಲ್‌ ಪಾವತಿಯಲ್ಲೂ ಅಕ್ರಮ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸುವಲ್ಲೂ ಅಕ್ರಮ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.

‘ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ ಶೇ 80ರಷ್ಟನ್ನು ಜ್ಯೇಷ್ಠತೆ ಆಧಾರದಲ್ಲಿ ಮತ್ತು ಶೇ 20ರಷ್ಟನ್ನು ಕಾಮಗಾರಿ ಮುಕ್ತಾಯಗೊಳಿಸುವ ತುರ್ತು, ನ್ಯಾಯಾಲಯದ ಆದೇಶ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಗುತ್ತಿಗೆದಾರರಿಗೆ ಪಾವತಿಸಬೇಕು ಎಂದು 2001ರಲ್ಲಿ ಆದೇಶ ಹೊರಡಿಸಲಾಗಿತ್ತು. ಅದನ್ನು ಯಾವ ಇಲಾಖೆಗಳೂ ಪಾಲಿಸುತ್ತಿಲ್ಲ’ ಎಂದು ಸಂಘದ ಅಧ್ಯಕ್ಷ ಕೆಂಪಣ್ಣ ದೂರುತ್ತಾರೆ.

‘ಇಲಾಖೆಗಳಿಗೆ ಬಿಲ್‌ ಪಾವತಿಗೆ ಹಣ ಬಿಡುಗಡೆಯ ಹಂತದಲ್ಲೇ ಶೇ 6ರಿಂದ ಶೇ 8ರಷ್ಟು ಲಂಚಕ್ಕೆ ಬೇಡಿಕೆ ಇದೆ. ಹಣ ಕೊಟ್ಟವರಿಗೆ ಬಿಲ್‌ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇತ್ತೀಚೆಗೆ ಪೂರ್ಣಗೊಂಡ ಕಾಮಗಾರಿಗಳ ಬಿಲ್‌ ಪಾವತಿಸಿ, ನಾಲ್ಕು ವರ್ಷದ ಹಳೆಯ ಪ್ರಕರಣಗಳನ್ನು ಬಾಕಿ ಇರಿಸಿರುವುದೇ ಅಕ್ರಮಕ್ಕೆ ಸಾಕ್ಷ್ಯ ನೀಡುತ್ತದೆ’ ಎನ್ನುತ್ತಾರೆ ಅವರು.

ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ?

ಗುತ್ತಿಗೆದಾರರ ಸಂಘದ ದೂರಿನ ಕುರಿತು ಉನ್ನತಮಟ್ಟದ ಸಭೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೂರಿನಲ್ಲಿರುವ ಆರೋಪಗಳ ಕುರಿತು ಮುಖ್ಯಮಂತ್ರಿಯವರ ಸಚಿವಾಲಯ ವಿವಿಧ ಇಲಾಖೆಗಳಿಂದ ಮಾಹಿತಿ ಕೋರಿದೆ. ಪ್ರಾಥಮಿಕ ಹಂತದಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಸಭೆ ನಡೆಸಲಿದ್ದಾರೆ. ನಂತರ ಮುಖ್ಯಮಂತ್ರಿಯವರು ಸಭೆ ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ.

***

ಕಳಪೆ ಕಾಮಗಾರಿ ನಡೆದರೆ ಎಲ್ಲರೂ ಗುತ್ತಿಗೆದಾರರತ್ತ ಬೆರಳು ತೋರಿಸುತ್ತಾರೆ. ಮಂಜೂರಾದ ಮೊತ್ತದಲ್ಲಿ ಅರ್ಧದಷ್ಟನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಕೊಡಬೇಕಾದರೆ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯ?

-ಡಿ. ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ

***

ಕಾಮಗಾರಿಗಳ ಗುತ್ತಿಗೆಯಲ್ಲಿನ ಭ್ರಷ್ಟಾಚಾರದ ಕುರಿತು ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿ, ಪ್ರತಿಕ್ರಿಯಿಸುತ್ತೇನೆ.

-ಪಿ. ರವಿಕುಮಾರ್‌, ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT