ಭಾನುವಾರ, ಫೆಬ್ರವರಿ 28, 2021
21 °C

ದೇಶದೇ ಸಂಸ್ಕೃತಿ, ನಾಗರಿಕತೆಯೇ ರಾಷ್ಟ್ರೀಯತೆ: ರಾಮ್‌ ಮಾಧವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯರ ಸಂಸ್ಕೃತಿ, ನಾಗರಿಕತೆಯೇ ದೇಶದ ರಾಷ್ಟ್ರೀಯತೆ. ಈ ವಿಚಾರದಲ್ಲಿ ಯಾವುದೇ ಭಾರತೀಯನಿಗೂ ಗೊಂದಲವಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ರಾಮ್‌ ಮಾಧವ್‌ ಹೇಳಿದರು.

ತಮ್ಮ ಕೃತಿ ‘ಬಿಕಾಸ್ ಇಂಡಿಯಾ ಕಮ್ಸ್ ಫಸ್ಟ್’ ಕುರಿತು ಬಲಿಷ್ಠ ಭಾರತದ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಬೈಬಲ್‌ ಮೇಲೆ ಪ್ರಮಾಣ ಮಾಡುವುದನ್ನು ಒಪ್ಪುವ ಕೆಲವು ಜನರು, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಣೆಗೆ ತಿಲಕವಿಟ್ಟು ದೇಶಕ್ಕಾಗಿ ದೇವರ ಎದುರು ಪ್ರಾರ್ಥಿಸುವುದನ್ನು ಒಪ್ಪುವುದಿಲ್ಲ. ಅಂತಹ ಜನರಿಗೆ ಮಾತ್ರ ರಾಷ್ಟ್ರೀಯತೆಯ ಕುರಿತು ಗೊಂದಲಗಳು ಇರಬಹುದು’ ಎಂದರು.

ಮೊಘಲರು ಕ್ಷಾತ್ರ ಶಕ್ತಿಯ ಮೂಲಕ ದೇಶವನ್ನು ಆಳಿದರು. ಬ್ರಿಟಿಷರು ಭಾರತೀಯರ ಬುದ್ಧಿಶಕ್ತಿಯ ಮೇಲೆ ಹಿಡಿತ ಸಾಧಿಸಿ, ಆಳ್ವಿಕೆ ನಡೆಸಿದರು. ಭಾರತದಲ್ಲಿರುವ ಅನಕ್ಷರಸ್ಥರು ಕೂಡ ಗಂಗಾ ಪೂಜೆ, ಗೋ ಪೂಜೆ, ತುಳಸಿ ಪೂಜೆಯೊಂದಿಗೆ ದಿನ ಆರಂಭಿಸಿ, ‘ಸರ್ವೇ ಜನಾ ಸುಖಿನೋ ಭವಂತು’ ಎನ್ನುವ ಮೂಲಕ ಲೋಕ ಕಲ್ಯಾಣವನ್ನು ಬಯಸುತ್ತಾರೆ. ಇದೇ ಭಾರತದ ರಾಷ್ಟ್ರೀಯತೆ, ನಾಗರಿಕತೆ, ಸಂಸ್ಕೃತಿ ಎಲ್ಲವೂ ಆಗಿದೆ ಎಂದು ಹೇಳಿದರು.

‘ಜಗತ್ತಿನ ಎಲ್ಲರೂ ಸುಖವಾಗಿರಲಿ ಎಂಬ ಆಶಯವನ್ನು ಮೂಲಭೂತವಾದ ಎನ್ನುವುದಾದರೆ ನಾನೂ ಮೂಲಭೂತವಾದಿ. ಹಿಂದೂ ಧರ್ಮ ಕೇವಲ ಪವಿತ್ರತೆಯ ಸಂಕೇತವಲ್ಲ. ಪೂರ್ವಿಕರು ನೀಡಿರುವ ವ್ಯವಸ್ಥೆ. ಮಹಾತ್ಮ ಗಾಂಧಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು. ರಾಮ ದೇಶದ ಅಸ್ಮಿತೆ. ಈ ಕಾರಣದಿಂದಾಗಿಯೇ ಎಲ್ಲರೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.

ನೋಟುಗಳ ಅಮಾನ್ಯೀಕರಣ, ಸಂವಿಧಾನದ 370ನೇ ವಿಧಿಯ ರದ್ಧತಿ, ತ್ರಿವಳಿ ತಲಾಖ್‌ ನಿಷೇಧವನ್ನು ಮೋದಿ ನೇತೃತ್ವದ ಸರ್ಕಾರ ಸ್ವಾರ್ಥಕ್ಕಾಗಿ ಮಾಡಿಲ್ಲ. ದೇಶ ಮೊದಲು ಎಂಬ ಪರಿಕಲ್ಪನೆಯ ಭಾಗವಾಗಿ ಈ ಕ್ರಮಗಳನ್ನು ಕೈಗೊಂಡಿದೆ. ದೇಶದ ನಾಗರಿಕರು ಪಕ್ಷ ಮತ್ತು ನಾಯಕರನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಯಾವತ್ತೂ ದೇಶ ಸುರಕ್ಷಿತವಾದ ಕೈಗಳಲ್ಲಿ ಇರಬೇಕು. ಈಗ ಹಾಗೆಯೇ ಇದೆ ಎಂದರು.

ಮಣಿಪಾಲ್ ಗ್ಲೋಬಲ್‌ ಎಜುಕೇಷನ್‌ ಅಧ್ಯಕ್ಷ ಟಿ.ವಿ. ಮೋಹನ್ ದಾಸ್ ಪೈ ಮತ್ತು ಸಾಮಾಜಿಕ ಜಾಲತಾಣ ವಿಶ್ಲೇಷಕ ಎಸ್ ಕಿರಣ್‌ ಕುಮಾರ್‌ ಸಂವಾದ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.