ಸೋಮವಾರ, ಜೂನ್ 27, 2022
28 °C

ತಡವಾಗಿ ಹಣ ಕೊಟ್ಟರೂ ಪರವಾಗಿಲ್ಲ ಸರ್ಕಾರವೇ ರೈತರ ಬೆಳೆ ಖರೀದಿಸಲಿ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿಗಳನ್ನು ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸಬೇಕು. ಒಂದು ತಿಂಗಳು ತಡವಾಗಿ ಹಣ ಕೊಟ್ಟರೂ ಪರವಾಗಿಲ್ಲ. ಆದರೆ, ಬೇಗ ಕೊಳೆಯುವ ಈ ಬೆಳೆಗಳನ್ನು ಮೊದಲು ಖರೀದಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕಿಲೋಗೆ ₹ 40ರಿಂದ ₹ 50ಕ್ಕೆ ಮಾರುತ್ತಿದ್ದ ಹಸಿ ಮೆಣಸಿನಕಾಯಿಯನ್ನು ರೈತರು ಒಂದೆರಡು ರೂಪಾಯಿಗೆ ಮಾರುತ್ತಿದ್ದಾರೆ. ಕೆಲವರು ಹೊಲದಲ್ಲೇ ಗೊಬ್ಬರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ 2 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಹೂವು, ಹಣ್ಣು, ತರಕಾರಿ ಬೆಳೆಯುವ ಎಲ್ಲ ರೈತರ ಪರಿಸ್ಥಿತಿ ದಯನೀಯವಾಗಿದೆ’ ಎಂದರು.

‘ಸರ್ಕಾರ ಘೋಷಿಸಿರುವ ಅಲ್ಪ ಮೊತ್ತದ ಪ್ಯಾಕೇಜ್‌ಗಾಗಿ ಸಣ್ಣ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಕೊಂಡು ಕುಳಿತುಕೊಳ್ಳಲ್ಲ. ಹೀಗಾಗಿ, ಒಂದು ತಂಡ ರಚಿಸಿ ಸರ್ಕಾರವೇ ಬೆಳೆ ಖರೀದಿಸಲಿ. ಮಾರುವ ಬೆಲೆಯಲ್ಲಿ ಅರ್ಧದಷ್ಟನ್ನು ರೈತರಿಗೆ ಕೊಡಲಿ’ ಎಂದ ಅವರು, ‘ಸರ್ಕಾರ ಘೋಷಿಸಿದ ಪ್ಯಾಕೇಜ್ ರಿಯಲ್‌ ಅಲ್ಲ, ರೀಲ್. 25 ಲಕ್ಷ ಚಾಲಕ ವೃತ್ತಿ ಅವಲಂಬಿಸಿದ್ದಾರೆ. ಸವಿತಾ ಸಮಾಜ, ನೇಕಾರರು ಹೀಗೆ ಅಸಂಘಟಿತ ಕಾರ್ಮಿಕರಲ್ಲಿ ಎಷ್ಟು ಜನ ಅರ್ಜಿ ಹಾಕಿದ್ದಾರೆ’ ಎಂದು ಪ್ರಶ್ನಿಸಿದರು.

‘ಸರ್ಕಾರ ನಿಜವಾಗಿ ನೊಂದವರ ರಕ್ಷಣೆ ಮಾಡುತ್ತಿಲ್ಲ. ಮೊದಲು ಈ ವರ್ಗದ ರಕ್ಷಣೆಗೆ ಕಾರ್ಯಕ್ರಮ ರೂಪಿಸಿ. ವರ್ತಕರಿಗೆ ಒಂದು ವರ್ಷದಿಂದ ಸರಿಯಾಗಿ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಆದರೆ, ಪಾಲಿಕೆ ಮಾತ್ರ ತೆರಿಗೆ ಪಾವತಿಸುವಂತೆ ಪೀಡಿಸುತ್ತಿದೆ. ಚಿತ್ರಮಂದಿರಗಳ ಮಾಲೀಕರು ಎಲ್ಲಿಂದ ತೆರಿಗೆ ಕಟ್ಟುತ್ತಾರೆ. ಮದ್ಯದಂಗಡಿಗೆ 10 ಗಂಟೆವರೆಗೂ ಅವಕಾಶ ಕೊಟ್ಟರೆ, ರೈತನಿಗೆ ಬೆಳಿಗ್ಗೆ  8 ಗಂಟೆವರೆಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಸಮಯ ಅಂಗಡಿ ಬಾಗಿಲು ತೆಗೆದು, ಮುಚ್ಚಲು ಸಾಕಾಗುತ್ತದೆ. ಇನ್ನು ವ್ಯಾಪಾರ ಮಾಡುವುದು ಹೇಗೆ’ ಎಂದೂ ಪ್ರಶ್ನಿಸಿದರು.

‘ಬಡವರಿಗೆ ನೆರವಾಗಲು ಆಹಾರ ಕಿಟ್ ನೀಡುವಂತೆ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಅದರಂತೆ ಎಲ್ಲ ಕಡೆಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಪಕ್ಷದ ವತಿಯಿಂದ ಸುಮಾರು 200ಕ್ಕೂ ಹೆಚ್ಚು ಆಂಬುಲೆನ್‌ಗಳು ಸೇವೆ ನೀಡುತ್ತಿವೆ’ ಎಂದರು.

ಗಾಂಧಿ ತತ್ವ ಪಾಲನೆ: ‘ಬಿಜೆಪಿ ಸಂಸದರು ಗಾಂಧಿ ತತ್ವ ಅನುಸರಿಸುತ್ತಿದ್ದಾರೆ. ಕಣ್ಣು, ಕಿವಿ, ಬಾಯಿ ಬಂದ್ ಮಾಡಿಕೊಂಡಿದ್ದಾರೆ. ರಾಜ್ಯದ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ’ ಎಂದು ದೂರಿದರು.

ನಮ್ಮೆಲ್ಲರಿಗೂ ಹೆಮ್ಮೆ: ‘ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಆಗಿದೆ. ಇದು ರಾಜ್ಯಕ್ಕೆ ದೊಡ್ಡ ಗೌರವ. ಯಾರಿಗೂ ಇಂಥ ದೊಡ್ಡ ಅವಕಾಶ ಸಿಕ್ಕಿಲ್ಲ. ತಮಗೆ ಸಿಕ್ಕಿದ ಅವಕಾಶವನ್ನು ಅವರು ಪ್ರಾಮಾಣಿಕವಾಗಿ ಬಳಸಿಕೊಂಡು ಕೆಲಸ ಮಾಡಿದ್ದಾರೆ’ ಎಂದರು.

‘ಉತ್ತರ ಭಾರತೀಯರು ದಕ್ಷಿಣ ಭಾರತೀಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ದೇವೇಗೌಡರು ತಮ್ಮ ಹೋರಾಟದಿಂದ ಆ ಎತ್ತರದ ಸ್ಥಾನ ತಲುಪಿದ್ದಾರೆ. ಅವರು ಈ ಸ್ಥಾನ ಅಲಂಕರಿಸಿದಾಗ ನಾವೆಲ್ಲ ಪಕ್ಷಬೇಧ ಮರೆತು ಸಂತೋಷಪಟ್ಟೆವು. ಅವರಿಗೆ ಒಳ್ಳೆಯದಾಗಲಿ, ಅವರ ಮಾರ್ಗದರ್ಶನ ರಾಜ್ಯಕ್ಕೆ ಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು