ಬುಧವಾರ, ಮಾರ್ಚ್ 29, 2023
30 °C

ಲಾಕ್‌ಡೌನ್‌: ನಾಳೆಯಿಂದ ಇನ್ನಷ್ಟು ಸಡಿಲ; ದೇವಸ್ಥಾನ, ಮಾಲ್‌ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಡಗು ಜಿಲ್ಲೆ ಬಿಟ್ಟು ರಾಜ್ಯದಾದ್ಯಂತ ಸೋಮವಾರದಿಂದ (ಜು.5) ದೇವಸ್ಥಾನಗಳು, ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ರಾತ್ರಿ 9 ಗಂಟೆಯವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದ್ದು, ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸಲಾಗಿದೆ. ಆದರೆ, ಪ್ರತಿದಿನ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿವಾಸದಲ್ಲಿ ಶನಿವಾರ ಸಂಜೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ನೂ ಹೊರಡಿಸಲಾಗಿದೆ. ಜುಲೈ 19ರವರೆಗೂ ಈ ನಿಯಮ ಜಾರಿಯಲ್ಲಿರಲಿದೆ.

‘ಸೋಮವಾರದಿಂದ ಎಲ್ಲ ಸರ್ಕಾರಿ, ಖಾಸಗಿ ಕಚೇರಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಶೇಕಡ 100ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಮಾಲ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಮೆಟ್ರೊ ರೈಲು ಮತ್ತು ಬಸ್‌ಗಳಲ್ಲಿ ಸಾಮರ್ಥ್ಯದ ಶೇ 100ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕ್ರೀಡಾ ಸಂಕೀರ್ಣಗಳು ಮತ್ತು ಈಜು ಕೊಳಗಳಲ್ಲಿ ಕ್ರೀಡಾಪಟುಗಳ ತರಬೇತಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ದರ್ಶನಕ್ಕಷ್ಟೆ ಅವಕಾಶ: ‘ದೇವಸ್ಥಾನಗಳನ್ನು ತೆರೆಯಲಿದ್ದರೂ ದರ್ಶನಕ್ಕಷ್ಟೇ ಅವಕಾಶ. ಯಾವುದೇ ರೀತಿಯ ಸೇವೆಗಳು ಇರುವುದಿಲ್ಲ. ಚಿತ್ರಮಂದಿರಗಳನ್ನು ತೆರೆಯುವಂತಿಲ್ಲ. ಶಾಲಾ, ಕಾಲೇಜುಗಳ ಪುನರಾರಂಭದ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮದ್ಯ ಸೇವನೆಗೆ ಅನುಮತಿ: ಬಾರ್‌ಗಳಲ್ಲಿ ಮದ್ಯ ಸೇವಿಸಲು ಅನುಮತಿ ಇದೆ. ಪಬ್‌ಗಳಿಗೆ ಅವಕಾಶ ನೀಡಿಲ್ಲ. ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ.

ಮದುವೆ ಮತ್ತಿತರ ಕೌಟುಂಬಿಕ ಸಮಾರಂಭಗಳಿಗೆ 100 ಜನರು ಹಾಗೂ ಅಂತ್ಯಸಂಸ್ಕಾರದಲ್ಲಿ 20 ಜನ ಪಾಲ್ಗೊಳ್ಳಬಹುದು. ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳು, ಪ್ರತಿಭಟನೆಗಳು ಮತ್ತು ಇತರ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು