ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 243 ಕೇಂದ್ರಗಳಲ್ಲಿ ಲಸಿಕೆ ವಿತರಣೆ: ಮೊದಲ ದಿನ 13 ಸಾವಿರ ಮಂದಿಗೆ ಲಸಿಕೆ

ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದ ವಿಳಂಬ
Last Updated 16 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಂತದ ಕೋವಿಡ್‌ ಲಸಿಕೆ ಅಭಿಯಾನಕ್ಕೆ ರಾಜ್ಯದ 243 ಕೇಂದ್ರಗಳಲ್ಲಿ ಶನಿವಾರ ಚಾಲನೆ ದೊರೆಯಿತು. ಆಸ್ಪತ್ರೆಗಳಲ್ಲಿನ ಸಹಾಯಕ ಸಿಬ್ಬಂದಿ, ವೈದ್ಯರು, ಪೌರಕಾರ್ಮಿಕರು ಸೇರಿದಂತೆ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ 13,408 ಮಂದಿ ಲಸಿಕೆ ಪಡೆದು ಸಂಭ್ರಮಿಸಿದರು.

ಅಭಿಯಾನದ ಮೊದಲ ದಿನ 21,658 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ಶೇ 62ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಕೊಡಗು (ಶೇ 84ರಷ್ಟು), ಉತ್ತರ ಕನ್ನಡ (ಶೇ 80ರಷ್ಟು) ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಲಸಿಕೆ ಪಡೆದರೇ, ದಕ್ಷಿಣ ಕನ್ನಡದಲ್ಲಿ (ಶೇ 37ರಷ್ಟು) ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂವಾದದ ಮೂಲಕ ಚಾಲನೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಮ್ಮುಖದಲ್ಲಿ ಆಸ್ಪತ್ರೆಯ ವಾರ್ಡ್‌ ಅಟೆಂಡರ್ ನಾಗರತ್ನಾ ಕೆ. ಅವರು ಮೊದಲಿಗರಾಗಿ ‘ಕೋವಿಶೀಲ್ಡ್‌’ ಲಸಿಕೆ ಪಡೆದುಕೊಂಡರು. ಬಳಿಕ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್‌ ಬಲ್ಲಾಳ್, ನಿಮ್ಹಾನ್ಸ್‌ನ ವೈರಾಣು ತಜ್ಞ ವಿ. ರವಿ ಸೇರಿದಂತೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದುಕೊಂಡರು.

ಕಾರ್ಯನಿರ್ವಹಿಸದ ಆ್ಯಪ್: ‘ಕೋವಿಶೀಲ್ಡ್‌’ ಲಸಿಕೆಯನ್ನು ರಾಜ್ಯದ 237 ಕೇಂದ್ರಗಳಲ್ಲಿ ನೀಡಲಾಯಿತು. ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಯ ಕೆಲ ಕೇಂದ್ರಗಳಲ್ಲಿ ‘ಕೋವ್ಯಾಕ್ಸಿನ್’ ಲಸಿಕೆ ವಿತರಿಸಲಾಯಿತು. ಪ್ರತಿ ಕೇಂದ್ರದಲ್ಲಿ 100 ಮಂದಿಯನ್ನು ಗುರುತಿಸಲಾಗಿತ್ತು. ‘ಕೋವಿನ್ ಆ್ಯಪ್’ ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಲಸಿಕೆ ವಿತರಣೆ ಪ್ರಕ್ರಿಯೆಯಲ್ಲಿ ಕೆಲವೆಡೆ ವಿಳಂಬವಾಯಿತು. ಸಿಬ್ಬಂದಿ ದಾಖಲಾತಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು, ಲಸಿಕೆ ನೀಡಿದರು.

ತಾಂತ್ರಿಕ ಸಮಸ್ಯೆಯಿಂದ ನಿಗದಿತ ವ್ಯಕ್ತಿಗಳ ಮೊಬೈಲ್ ಸಂಖ್ಯೆಗೆ ಸ್ಥಳ, ಸಮಯ ಸೇರಿದಂತೆ ವಿವಿಧ ವಿವರಗಳನ್ನು ಒಳಗೊಂಡ ದೂರವಾಣಿ ಸಂದೇಶ ರವಾನೆಯಾಗಿರಲಿಲ್ಲ. ಕೇಂದ್ರದ ಸಿಬ್ಬಂದಿಯು ಫಲಾನುಭವಿಗಳಿಗೆ ಶುಕ್ರವಾರ ಸಂಜೆಯೇ ದೂರವಾಣಿ ಕರೆ ಮಾಡಿ, ಹಾಜರಾಗಲು ಸೂಚಿಸಿದ್ದರು. ಲಸಿಕೆ ಪಡೆದ ಬಳಿಕ ಕೂಡ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿಲ್ಲ. ಲಸಿಕೆ ಪಡೆದ ಬಳಿಕ ಅರ್ಧ ಗಂಟೆ ಆರೋಗ್ಯ ಕಾರ್ಯಕರ್ತರನ್ನು ನಿಗಾ ಕೊಠಡಿಯಲ್ಲಿ ಇರಿಸಲಾಯಿತು. ಒಂದು ಗಂಟೆ ಅವಧಿ ವಿಶ್ರಾಂತಿ ಪಡೆದ ಬಳಿಕ ಕೆಲವೆಡೆ ಸಿಬ್ಬಂದಿ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾದರು.

‘8 ಲಕ್ಷ ಡೋಸ್‌ಗೆ ಮನವಿ’

‘ರಾಜ್ಯದಲ್ಲಿ ಮೊದಲ ಹಂತದಲ್ಲಿ 7,17,439 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 8,14,500 ಡೋಸ್‌ ಲಸಿಕೆ ಲಭ್ಯವಿದ್ದು, ಒಂದು ವಾರದೊಳಗೆ ಮೊದಲ ಹಂತದ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದೆ. ಇನ್ನೂ 8 ಲಕ್ಷ ಡೋಸ್‌ ಲಸಿಕೆ ನೀಡುವಂತೆಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

‘ವಿರೋಧ ಪಕ್ಷಗಳು ಲಸಿಕೆಯನ್ನು ರಾಜಕೀಯ ವಿಚಾರವನ್ನಾಗಿ ಮಾಡಿರುವುದು ವಿಷಾದನೀಯ. ಪ್ರತಿಪಕ್ಷಗಳು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದು. ಈ ಲಸಿಕೆ ಪಡೆಯುವುದು ಕಡ್ಡಾಯವಲ್ಲ. ಈಗಾಗಲೇ ಲಸಿಕೆ ಪಡೆದವರಲ್ಲಿ ಯಾರಲ್ಲಿಯೂ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಸೋಮವಾರದಿಂದ ಲಸಿಕೆ ವಿತರಣೆ ಪ್ರಕ್ರಿಯೆ ವೇಗ ಪಡೆಯಲಿದೆ’ ಎಂದು ವಿವರಿಸಿದರು.

***

ಅನೇಕ ಹಿರಿಯ ವೈದ್ಯರು ಕೂಡ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಯಾರೂ ಹೆದರಬೇಕಿಲ್ಲ. ದೇಶದಲ್ಲಿ ತಯಾರಾದ ಲಸಿಕೆ ಇಡೀ ವಿಶ್ವದ ಗಮನ ಸೆಳೆಯುತ್ತಿದೆ.

– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿದ್ದು, ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ರೋಗದಿಂದ ರಕ್ಷಣೆಗೆ ಈ ಲಸಿಕೆ ಸಹಾಯಕ.

– ಡಾ.ಎಂ.ಕೆ. ಸುದರ್ಶನ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ಮುಖ್ಯಮಂತ್ರಿ ಸಮ್ಮುಖದಲ್ಲಿ ಲಸಿಕೆ ಪಡೆದುಕೊಂಡಿರುವುದು ಖಷಿಯಾಯಿತು. ಲಸಿಕೆ ಪಡೆದ ಬಳಿಕ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಎಲ್ಲರಿಗೂ ಸಿಗುವಂತಾಗಲಿ.

– ನಾಗರತ್ನಾ ಕೆ., ಮೊದಲು ಲಸಿಕೆ ಪಡೆದ ಮಹಿಳೆ

ಇದು ಐತಿಹಾಸಿಕ ದಿನ, ದಾಖಲೆಯಂತಿದೆ. ಬೇರೆ ರೋಗಗಳಿಗೆ ಲಸಿಕೆ ಪಡೆಯಲು ವರ್ಷಗಳು ತಗುಲಿವೆ. 10 ತಿಂಗಳಲ್ಲಿಯೇ ಕೋವಿಡ್‌ಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

– ಡಾ.ಕೆ. ಸುಧಾಕರ್, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT