ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಟೆಂಡರ್‌, 24ಕ್ಕೆ ಕಡೆ ದಿನ: 2 ಕೋಟಿ ವಯಲ್ಸ್‌ಗೆ ಖರೀದಿ ಪ್ರಕ್ರಿಯೆ ಆರಂಭ

ಉತ್ಪಾದಕ – ವಿತರಕರಿಗೆ ಅವಕಾಶ
Last Updated 20 ಮೇ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆಗೆ ಬೇಡಿಕೆ ಹೆಚ್ಚಿದ ಬೆನ್ನಲ್ಲೇ, ಬಹು ಡೋಸ್‌ಗಳಿರುವ2 ಕೋಟಿ ವಯಲ್ಸ್‌ ಕೋವಿಡ್‌ ಲಸಿಕೆ ಪೂರೈಕೆಗಾಗಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ‘ಮುಕ್ತ ಅಂತರರಾಷ್ಟ್ರೀಯ ಟೆಂಡರ್‌’ (ಒಐಟಿ) ಆಹ್ವಾನಿಸಿದೆ.

ಜಾಗತಿಕ ಮಟ್ಟದಲ್ಲಿ ಟೆಂಡರ್‌ ಆಹ್ವಾನಿಸಿ ಲಸಿಕೆ ಖರೀದಿಸಲು ರಾಜ್ಯ ಸರ್ಕಾರ ಈಗಾಗಲೇ ₹ 843 ಕೋಟಿ ಮೀಸಲಿಟ್ಟಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್‌) ಇದೇ 14ರಂದು ಟೆಂಡರ್‌ ಆಹ್ವಾನಿಸಿದೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ಲಸಿಕೆ ಉತ್ಪಾದಕ ಕಂಪನಿಗಳು ಅಥವಾ ವಿತರಕರು ಭಾಗವಹಿಸಲು ಅವಕಾಶ ಇದೆ. ಹೀಗೆ ಪೂರೈಸುವ ಲಸಿಕೆಯ ಬಳಕೆಯ ಅವಧಿ, ಪೂರೈಸಿದ ದಿನದಿಂದ ಕನಿಷ್ಠ ಆರು ತಿಂಗಳು ಇರಬೇಕು ಎಂದು ಷರತ್ತು ವಿಧಿಸಲಾಗಿದೆ.

44 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ. 18ರಿಂದ 44 ವರ್ಷ ವಯೋಮಾನದವರಿಗೆ ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಈ ವಯೋಮಾನದವರಿಗೆ ನೀಡುವುದಕ್ಕಾಗಿ, ಉತ್ಪಾದಕ ಕಂಪನಿಗಳಿಂದ ನೇರವಾಗಿ ಖರೀದಿಸಲು ರಾಜ್ಯ ಸರ್ಕಾರ ಹಣ ಪಾವತಿಸಿದೆ. ಕೇಂದ್ರ ಅಥವಾ ಉತ್ಪಾದಕ ಕಂಪನಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗುತ್ತಿಲ್ಲ. ಹೀಗಾಗಿ, ಜಾಗತಿಕ ಮಟ್ಟದ ಲಸಿಕೆ ಉತ್ಪಾದಕ ಕಂಪನಿ ಅಥವಾ ವಿತರಕರ ಮೂಲಕ ಲಸಿಕೆ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಟೆಂಡರ್‌ ಆಹ್ವಾನಿಸುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರುಕೆಎಸ್‌ಎಂಎಸ್‌ಸಿಎಲ್‌ಗೆ ಸೂಚಿಸಿದ್ದರು.

‘ರಾಷ್ಟ್ರೀಯ ಆರೋಗ್ಯ ಅಭಿಯಾನದ ಬೇಡಿಕೆಯಂತೆ, ಷರತ್ತು ನಮೂದಿಸಿ ಟೆಂಡರ್‌ ಆಹ್ವಾನಿಸುವುದಷ್ಟೆ ನಮ್ಮ ಕೆಲಸ. ತಿಂಗಳಿಗೆ ಕನಿಷ್ಠ 1 ಕೋಟಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇರುವ ಕಂಪನಿಗಳು ಮಾತ್ರ ಈ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಈ ಬಗ್ಗೆ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸಬೇಕು. ಟೆಂಡರ್‌ನಲ್ಲಿ ಭಾಗವಹಿಸುವ ವಿತರಕರು, ತಿಂಗಳಿಗೆ ಕನಿಷ್ಠ 1 ಕೋಟಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯವಿರುವ ಕಂಪನಿಯಿಂದ ಪಡೆದ ದೃಢೀಕರಣ ಪತ್ರವನ್ನು ಬಿಡ್‌ ಜೊತೆ ಸಲ್ಲಿಸಬೇಕು’ ಎಂದುಕೆಎಸ್‌ಎಂಎಸ್‌ಸಿಎಲ್‌ ಮೂಲಗಳು ತಿಳಿಸಿವೆ.

‘ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಯಿಂದ (ಉತ್ಪಾದಕ ಅಥವಾ ವಿತರಕ) 2 ಕೋಟಿ ವಯಲ್ಸ್‌ ಖರೀದಿಸಬೇಕೆಂದೇನೂ ಇಲ್ಲ. ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ಖರೀದಿಸುವ ಅವಕಾಶವನ್ನು ಮುಕ್ತವಾಗಿರಿಸಿ ಟೆಂಡರ್‌ ನಿಯಮ ರೂಪಿಸಲಾಗಿದೆ. ಬಿಡ್‌ ಸಲ್ಲಿಸಲು ಇದೇ 24 ಕೊನೆಯ ದಿನ. 25ರಂದು ಬೆಳಿಗ್ಗೆ 11.30ಕ್ಕೆ ಬಿಡ್‌ಗಳನ್ನು ತೆರೆಯಲಾಗುವುದು. ಯಾವೆಲ್ಲ ಕಂಪನಿಗಳು ಮತ್ತು ವಿತರಕರು ಭಾಗವಹಿಸಿದ್ದಾರೆಂಬ ಮಾಹಿತಿ ಅಂದು ಗೊತ್ತಾಗಲಿದೆ’ ಎಂದು ಮೂಲಗಳು ಹೇಳಿವೆ.

‘ಬಿಡ್‌ ತೆರೆದ ಬಳಿಕ ತಾಂತ್ರಿಕ ಸಮಿತಿ ಅವುಗಳ ಮೌಲ್ಯಮಾಪನ ನಡೆಸಲಿದೆ. 2 ಕೋಟಿ ವೈಯಲ್ಸ್‌ಗಳನ್ನು ಒಂದೇ ಬಾರಿಗೆ ಖರೀದಿಸಬೇಕೇ, ಹಂತ ಹಂತವಾಗಿ ಖರೀದಿಸಬೇಕೇ ಎಂದು ತಜ್ಞರ ಸಮಿತಿ ತೀರ್ಮಾನ ಕೈಕೊಳ್ಳಲಿದೆ. ಈ ಪ್ರಕ್ರಿಯೆ ಇದೇ 26 ಅಥವಾ 27ರಂದು ನಡೆಯಬಹುದು’ ಎಂದು ಹೆಸರು ಹೇಳಲು ಬಯಸದ ಕೆಎಸ್‌ಎಂಎಸ್‌ಸಿಎಲ್‌ ಅಧಿಕಾರಿಯೊಬ್ಬರು ಹೇಳಿದರು.

‘ಇಡೀ ದೇಶದಲ್ಲಿ ಲಸಿಕೆ ಉತ್ಪಾದನೆ ಪ್ರಮಾಣ ಕಡಿಮೆ ಇರುವುದರಿಂದ ಸಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಲ್ಲ ರಾಜ್ಯಗಳಿಗೆ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಲಸಿಕೆ ಪೂರೈಕೆಗೆ ಈಗಾಗಲೇ ಜಾಗತಿಕ ಟೆಂಡರ್‌ ಆಹ್ವಾನಿಸಿವೆ’ ಎಂದೂ ಅವರು ಹೇಳಿದರು.

‘ಬ್ರ್ಯಾಂಡ್‌’ ಷರತ್ತು ಇಲ್ಲ

‘ಇಂಥದ್ದೇ ಕಂಪನಿಯ ಅಥವಾ ಇಂಥದ್ದೇ ಲಸಿಕೆಯನ್ನು ಪೂರೈಕೆ ಮಾಡಬೇಕೆಂಬ ‘ಬ್ರ್ಯಾಂಡ್‌’ಅನ್ನು ಷರತ್ತಿನಲ್ಲಿ ಉಲ್ಲೇಖಿಸಿಲ್ಲ. ಕೋವಿಡ್‌ಗೆ ‘ಸಂಜೀವಿನಿ’ ಎಂದು ಪರಿಗಣಿಸಿ ವಿಶ್ವದಾದ್ಯಂತ ಬಳಸುವ ಯಾವುದೇ (ಕೋವಿಶೀಲ್ಡ್‌, ಕೋವ್ಯಾಕ್ಸಿನ್‌, ಸ್ಪುಟ್ನಿಕ್‌... ಹೀಗೆ) ಲಸಿಕೆಯನ್ನು ಪೂರೈಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಒಂದು ವಯಲ್ಸ್‌ನಲ್ಲಿ ಕನಿಷ್ಠ ಡೋಸ್ ಬಗ್ಗೆಯೂ ಮಿತಿ ನಿಗದಿಪಡಿಸಿಲ್ಲ. ಆ ಪ್ರಮಾಣವನ್ನು ಉತ್ಪಾದಕ ಕಂಪನಿಗಳು ತೀರ್ಮಾನಿಸುತ್ತವೆ. ಆದರೆ, ಪೂರ್ತಿ ಪೂರೈಸಲು ಸಾಧ್ಯವೇ, ಎಷ್ಟು ದಿನದಲ್ಲಿ ಸಾಧ್ಯ ಎಂದು ನಮೂದಿಸುವಂತೆ ಕಂಪನಿ ಅಥವಾ ವಿತರಕರಿಗೆ ಕೋರಿದ್ದೇವೆ’ ಎಂದು ಕೆಎಸ್‌ಎಂಎಸ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT