ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್‌ ನಿಯಮ ಸಡಿಲ

ಸೋಂಕು ಲಕ್ಷಣ ಇರದವರಿಗೆ ಮನೆ ಕ್ವಾರಂಟೈನ್ * ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
Last Updated 7 ಆಗಸ್ಟ್ 2020, 15:31 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್‌ ನಿಯಮಗಳನ್ನು ಸಡಿಲಿಸಲಾಗಿದ್ದು, ಸೋಂಕು ಲಕ್ಷಣಗಳು ಇಲ್ಲದವರಿಗೆ 14 ದಿನಗಳ ಮನೆ ಕ್ವಾರಂಟೈನ್‌ಗೆ ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ವಿಮಾನ ನಿಲ್ದಾಣಗಳಲ್ಲಿಯೇ ತಪಾಸಣೆ ನಡೆಸಿ, ಲಕ್ಷಣ ಹೊಂದಿರುವವರು ಹಾಗೂ ಲಕ್ಷಣ ರಹಿತರನ್ನು ವರ್ಗೀಕರಿಸಲಾಗುತ್ತದೆ. ಯಾವುದೇ ಲಕ್ಷಣ ಇಲ್ಲದಿದ್ದಲ್ಲಿ ಮನೆ ಕ್ವಾರಂಟೈನ್‌ಗೆ ಅವಕಾಶ ಮಾಡಿಕೊಡಲಾಗುತ್ತದೆ. ಜ್ವರ, ಕೆಮ್ಮು ಸೇರಿದಂತೆ ವಿವಿಧ ಸೋಂಕಿನ ಲಕ್ಷಣಗಳು ಹಾಗೂ ಅಸ್ವಸ್ಥರಾದವರನ್ನು ಕೋವಿಡ್ ಪರೀಕ್ಷೆಗೆ ನಿಗದಿತ ಕೋವಿಡ್ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ವಿದೇಶದಿಂದ ಬಂದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು.

ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಸೋಂಕು ಲಕ್ಷಣ ಹೊಂದಿರುವವರಿಗೆ ರ್‍ಯಾಪಿಡ್ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ವರದಿಯಲ್ಲಿ ಸೋಂಕು ದೃಢ‍ಪಟ್ಟಲ್ಲಿ ಮನೆ ಆರೈಕೆ ಅಥವಾ ನಿಗದಿತ ಆಸ್ಪತ್ರೆಗೆ ದಾಖಲಾಗಲು ಅವಕಾಶ ನೀಡಲಾಗುತ್ತದೆ.ಒಂದು ವೇಳೆ ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯ ಫಲಿತಾಂಶ ವ್ಯಕ್ತಿ ಸೋಂಕಿತರಾಗಿಲ್ಲ ಎಂದು ಬಂದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ, ಖಚಿತಪಡಿಸಿಕೊಳ್ಳಬೇಕು. ಎರಡನೇ ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ವ್ಯಕ್ತಿಗೆ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಲ್ಲಿ 14 ದಿನಗಳ ಮನೆ ಕ್ವಾರಂಟೈನ್‌ಗೆ ಸೂಚಿಸಬೇಕು ಎಂದು ಸ್ಷಪ್ಟಪಡಿಸಿಲಾಗಿದೆ.

ವಿದೇಶದಿಂದ ರಾಜ್ಯಕ್ಕೆ ಬರುವ ಎಲ್ಲ ಪ್ರಯಾಣಿಕರು ‘ಯಾತ್ರಿ ಕರ್ನಾಟಕ’ ಆನ್‌ಲೈನ್ ಪೋರ್ಟಲ್‌ನಲ್ಲಿ ಮೂರು ದಿನಗಳ ಮೊದಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ವಾವಧಿಗೆ ವ್ಯಾಪಾರ ವ್ಯವಹಾರ ಉದ್ದೇಶದಿಂದ ಬರುವವರು ಸೋಂಕಿತರಾಗಿಲ್ಲ ಎಂಬುದರ ಬಗ್ಗೆ ಆರ್‌ಟಿಪಿಸಿಆರ್ ವರದಿಯನ್ನು ಕೂಡ ತರಬೇಕು. ಆಗ ಮಾತ್ರಎಲ್ಲ ವಿಧದ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT