ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ತಜ್ಞರ ಜತೆ ಸಿಎಂ ಚರ್ಚೆ, ನಿರ್ಬಂಧ ಕುರಿತು ಇಂದು ನಿರ್ಧಾರ?

ಇದೇ 6ಕ್ಕೆ ಸಚಿವ ಸಂಪುಟ ಸಭೆ
Last Updated 3 ಜನವರಿ 2022, 19:19 IST
ಅಕ್ಷರ ಗಾತ್ರ

ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ಹಾಗೂ ಕರ್ನಾಟಕದಲ್ಲಿ ದಿನೇ ದಿನೇ ಏರುಗತಿ ಕಾಣುತ್ತಿರುವ ಬೆನ್ನಲ್ಲೇ, ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಮಹತ್ವದ ಸಭೆ ಮಂಗಳವಾರ (ಜ. 4) ಸಂಜೆ ನಡೆಯಲಿದೆ.

ಡಿಸೆಂಬರ್ 3ರಂದು 413ರಷ್ಟಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಜನವರಿ ಮೊದಲ ವಾರ 1,290ಕ್ಕೆ ಏರಿದೆ. ಕೋವಿಡ್ ಪತ್ತೆಗೆ ನಡೆಸುವ ಪರೀಕ್ಷೆಗಳ ಸಂಖ್ಯೆಯೂ ಅದೇ ಮಟ್ಟದಲ್ಲಿ ಏರಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಬರ್ ಮೊದಲ ವಾರ ಪ್ರಕರಣಗಳ ಸಂಖ್ಯೆ 150ರ ಆಸುಪಾಸಿನಲ್ಲಿದ್ದು, ದೃಢ ಪ್ರಮಾಣ ಶೇ 0.47ರಷ್ಟಿತ್ತು. ಜನವರಿ ಮೊದಲ ವಾರ ಪ್ರಕರಣ ಸಂಖ್ಯೆ 1,041ಕ್ಕೆ, ದೃಢಪ್ರಮಾಣ ಶೇ 1.43ಕ್ಕೆ ಹೆಚ್ಚಳವಾಗಿದೆ.

‘ಕೋವಿಡ್ ದೃಢ ಪ್ರಮಾಣ ಶೇ 5ರಷ್ಟು ಮೀರಿದ ಪ್ರದೇಶಗಳಲ್ಲಿ ಲಾಕ್‌ಡೌನ್ ಸೇರಿದಂತೆ ಕಠಿಣ ಕ್ರಮಕೈಗೊಳ್ಳಬೇಕು, ದೃಢ ಪ್ರಮಾಣ ದರ ಆಧರಿಸಿ ವಲಯಗಳನ್ನು ವಿಂಗಡಿಸಿ, ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸುಗಳ ಜತೆಗೆ, ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಮಂಗಳವಾರದ ಸಭೆಯಲ್ಲಿ ಪರಿಶೀಲನೆ ನಡೆಸಲಾಗುವುದು’ ಎಂದು ಮೂಲಗಳು ಹೇಳಿವೆ.

ಸೋಮವಾರ ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,‘ಇಡೀ ದೇಶದಲ್ಲಿ ಕೋವಿಡ್ ಮತ್ತು ಒಮೈಕ್ರಾನ್ ವೈರಾಣು ವೇಗವಾಗಿ ಹರಡುತ್ತಿದೆ. ಈ ಬಗ್ಗೆ ತಜ್ಞರ ಜೊತೆ ಸಭೆ ನಡೆಸಲಾಗುವುದು. ಬಳಿಕ, ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ, ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ಎಂದರು.

‘ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ತಜ್ಞರು ನೀಡಲಿರುವ ಸಲಹೆ–ಶಿಫಾರಸುಗಳನ್ನು ಗುರುವಾರ (ಜ.6) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರಾಜ್ಯದಲ್ಲಿ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಬೇಕೆಂದು ನಿರ್ಧರಿಸುತ್ತೇವೆ’ ಎಂದರು.

‘ಕೋವಿಡ್‌ ಮೊದಲ ಮತ್ತು ಎರಡನೇ ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ, ಜನಜೀವನಕ್ಕೆ ತೊಂದರೆ ಆಗದಂತೆ ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಸಲಹೆ ನೀಡುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ’ ಎಂದರು.

ಒಂದೇ ದಿನ 4.03 ಲಕ್ಷ ಮಕ್ಕಳಿಗೆ ಲಸಿಕೆ:ಮಕ್ಕಳಿಗೆ ಲಸಿಕೆ ನೀಡುವುದನ್ನು ಆರಂಭಿಸಿದ ಮೊದಲ ದಿನವೇ ರಾಜ್ಯದಲ್ಲಿ 15 ರಿಂದ 18 ವರ್ಷದ ಒಳಗಿನ 4.03 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಈ ವಯೋಮಾನದ 31.75 ಲಕ್ಷ ಮಕ್ಕಳನ್ನು ಗುರುತಿಸಲಾಗಿದೆ. ಮೊದಲ ದಿನವಾದ ಸೋಮವಾರ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು.

ಮೊದಲ ದಿನ 6.38 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇತ್ತು. ಸಂಜೆ 7.30ರವರೆಗಿನ ಮಾಹಿತಿಯಂತೆ 4,03,928 ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ 63ರಷ್ಟು ಗುರಿ ಸಾಧಿಸಲಾಗಿದೆ. ನಾಲ್ಕು ಸಾವಿರಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು. ಮೊದಲ ಡೋಸ್‌ ಪಡೆದವರಿಗೆ 28 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ 5 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, 14,064 ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ 281ರಷ್ಟು ಸಾಧನೆ ಮಾಡಲಾಗಿದೆ. ಯಾದಗಿರಿಯಲ್ಲಿ 20 ಸಾವಿರ ವಿದ್ಯಾರ್ಥಿಗಳಲ್ಲಿ ಕೇವಲ 4,871 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದ್ದು, ಶೇಕಡ 24ರಷ್ಟು ಪ್ರಗತಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT