ಭಾನುವಾರ, ಜುಲೈ 3, 2022
24 °C
ಮನೆಯಲ್ಲೇ ಕೋವಿಡ್‌ ಪರೀಕ್ಷೆ– ಐಎಂಸಿಆರ್‌ ಅನುಮೋದನೆ ಬಾಕಿ

ಮನೆಯಲ್ಲೇ ಕೋವಿಡ್‌ ಪರೀಕ್ಷೆ ಮಾಡಿಕೊಳ್ಳಬಹುದಾದ ಕಿಟ್‌: ಮೈಸೂರು ವಿವಿ ಸಂಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮನೆಯಲ್ಲೇ ಕೋವಿಡ್‌–19 ಪರೀಕ್ಷೆ ಮಾಡಿಕೊಳ್ಳಲು ಸಹಾಯವಾಗುವ ರೀತಿಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದಲ್ಲಿ ರ‍್ಯಾಪಿಡ್ ಡಿಟೆಕ್ಷನ್‌ ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಲಾಗಿದೆ.

‘ಈಗಾಗಲೇ ನೂರಾರು ಮಂದಿ ಮೇಲೆ ಪ್ರಯೋಗ ನಡೆಸಿದ್ದು, ಕೊರೊನಾ ಸೋಂಕು ಪತ್ತೆ ಹಚ್ಚುವಲ್ಲಿ ಶೇ 90ರಷ್ಟು ಯಶಸ್ಸು ಲಭಿಸಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ಕಳುಹಿಸುತ್ತಿದ್ದು, ಅನುಮೋದನೆ ಸಿಕ್ಕಿದ ತಕ್ಷಣ ಮಾರುಕಟ್ಟೆಗೆ ಬಿಡಲಾಗುವುದು. ಇದು ₹ 100 ದರದಲ್ಲಿ ಸಿಗುವಂತೆ ನೋಡಿಕೊಳ್ಳಲಾಗುವುದು’ ಎಂದು ಪ್ರೊ.ರಂಗಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೈದರಾಬಾದ್‌ನ ಲಾರ್ವೆನ್ ಬಯೋಲಾಜಿಕ್ಸ್ ಕಂಪನಿ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಮೂವರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದೇವೆ. ವಿಜ್ಞಾನ ಭವನದ ಸಂಚಾಲಕ ಪ್ರೊ.ಎಸ್.ಚಂದ್ರ ನಾಯಕ್ ಹಾಗೂ ಅಣುಜೀವ

ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ.ಮೋಹನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಗೆ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು ಹಣಕಾಸು ನೆರವು ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ’ ಎಂದರು.

'ವರ್ಷದಿಂದ ಈ ಸಂಶೋಧನೆ ನಡೆಸಿದ್ದೇವೆ. ಈ ಕಿಟ್ ಬಳಕೆ ಮೂಲಕ ಕೊರೊನಾ ರೂಪಾಂತರಿ ವೈರಸ್‌ಗಳನ್ನು ಸುಲಭ ಹಾಗೂ ನಿಖರವಾಗಿ ಪತ್ತೆ ಹಚ್ಚಬಹುದು. ಸದ್ಯ ಆರ್‌ಟಿಪಿಸಿಆರ್‌, ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌ ಸೇರಿದಂತೆ ಕೋವಿಡ್ ಪರೀಕ್ಷೆಗೆ ಬಳಸುತ್ತಿರುವ ಸಾಧನಗಳ ಮೂಲಕ ಶೇ 40 ರಿಂದ 60 ರಷ್ಟು ಮಾತ್ರ ಖಚಿತ ಫಲಿತಾಂಶ ದೊರಕುತ್ತಿದೆ' ಎಂದು ಹೇಳಿದರು.

'ನಾವು ವಿನ್ಯಾಸಗೊಳಿಸಿರುವ ಸಾಧನ ಬಳಸಿ ಗಂಟಲು ಹಾಗೂ ಮೂಗಿನ ದ್ರವವನ್ನು ತೆಗೆದು ಮನೆಯಲ್ಲೇ ಪರೀಕ್ಷೆ ಮಾಡಬಹುದಾಗಿದೆ. 10 ನಿಮಿಷಗಳಲ್ಲಿ ಫಲಿತಾಂಶ ಬರಲಿದೆ’ ಎಂದು ಮಾಹಿತಿ ನೀಡಿದರು.

ಕುಲಪತಿ ಪ್ರೊ.ಹೇಮಂತಕುಮಾರ್‌ ಮಾತನಾಡಿ, ‘ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಮೈಸೂರು ವಿಶ್ವವಿದ್ಯಾಲಯ ಕೂಡ ಕೈಜೋಡಿಸಿದೆ. ಕಿಟ್‌ ಅಭಿವೃದ್ಧಿಪಡಿಸಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಚಾರ’ ಎಂದರು.

ಔಷಧಿ ಅಭಿವೃದ್ಧಿ:

‘ಹೈದರಾಬಾದ್‌ನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ಹಾಗೂ ಲಖನೌದ ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯ ಜೊತೆಗೂಡಿ ಕೋವಿಡ್‌ಗೆ ಔಷಧಿ ಕೂಡ ಅಭಿವೃದ್ಧಿ‍ಪಡಿಸುತ್ತಿದ್ದೇವೆ. ಕ್ಲಿನಿಕಲ್‌ ಟ್ರಯಲ್‌ ನಡೆಯಬೇಕಿದೆ. ಹಣ ನೀಡಿದರೆ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಲೂ ಸಿದ್ಧ’ ಎಂದು ಪ್ರೊ.ರಂಗಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು