ಬುಧವಾರ, ಜೂನ್ 16, 2021
22 °C

ಕಾಲಮಿತಿಯಲ್ಲಿ ಲಸಿಕೆ ಕೊಡಿ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರ ಮಾರ್ಪಾಟು ಮಾಡಿ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಕಾಲಮಿತಿಯೊಳಗೆ ಎರಡೂ ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯತಂತ್ರವನ್ನು ನಿಖರವಾಗಿ ಪುನರ್ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. 

‘ರಾಜ್ಯದಲ್ಲಿ ಲಸಿಕೆ ಕೊರತೆ ಪರಿಸ್ಥಿತಿ ಮುಂದುವರಿದಿದೆ. ಮೊದಲ ಡೋಸ್ ಪಡೆದುಕೊಂಡು ಎರಡನೇ ಡೋಸ್‌ ಕಾದಿದ್ದಾರೆ. ಆ ಅವಧಿ ಮುಗಿಯುತ್ತಿದೆ. ಹೀಗಾಗಿ, ಎರಡನೇ ಡೋಸ್‌ ಕೂಡಲೇ ನೀಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರನ್ನು ಒಳಗೊಂಡ ವಿಶೇಷ ಪೀಠ ಸೂಚಿಸಿತು.

‘ಕೋವಿಶೀಲ್ಡ್ ಪಡೆದು 12 ವಾರ ಆಗಿದ್ದವರು, ಕೋವಾಕ್ಸಿನ್ ಪಡೆದು 6 ವಾರ ಪೂರೈಸಿದ ಫಲಾನುಭವಿಗಳ ಪಟ್ಟಿಯನ್ನು ದಿನಾಂಕವಾರು ರಾಜ್ಯ ಸರ್ಕಾರ ರೂಪಿಸಬೇಕು. ಹೀಗೆ ಮಾಡದಿದ್ದರೆ ಎರಡನೇ ಡೋಸ್‌ಗಾಗಿ ಕಾದಿರುವ ಜನರಿಗೆ ಪರಿಣಾಮಕಾರಿಯಾಗಿ ಲಸಿಕೆ ನೀಡಲು ಆಗುವುದಿಲ್ಲ’ ಎಂದು ಪೀಠ ಹೇಳಿತು.

‘7.17 ಲಕ್ಷ ಕೋವಿಶೀಲ್ಡ್ ಮತ್ತು 97,400 ಕೋವ್ಯಾಕ್ಸಿನ್ ಡೋಸ್ ಮಾತ್ರ ಲಭ್ಯವಿದೆ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಿವರಿಸಿದರು.

‘ಮೇ ಕೊನೆಯ ಎರಡು ವಾರಗಳಲ್ಲಿ ಒಟ್ಟು 9.17 ಲಕ್ಷ ಕೋವಿಶೀಲ್ಡ್, 1.64 ಲಕ್ಷ ಕೋವ್ಯಾಕ್ಸಿನ್ ಅನ್ನು ಕೇಂದ್ರ ಸರ್ಕಾರ ಪೂರೈಸಲಿದೆ. 7.04 ಲಕ್ಷ ಕೋವಿಶೀಲ್ಡ್‌ ಮತ್ತು 2.44 ಲಕ್ಷ ಕೋವ್ಯಾಕ್ಸಿನ್ ಅನ್ನು ರಾಜ್ಯ ಸರ್ಕಾರ ನೇರವಾಗಿ ಖರೀದಿಸಬಹುದು’ ಎಂದು ಕೇಂದ್ರ ಸರ್ಕಾರದ ಸಾಲಿಟಿಟರ್ ಜನರಲ್ ವಿವರಿಸಿದರು.

ಕೋವ್ಯಾಕ್ಸಿನ್ ಕೊರತೆಯ ಗಂಭೀರ ಸಮಸ್ಯೆಯನ್ನು ಜಂಟಿಯಾಗಿ ಪರಿಹರಿಸಿಕೊಳ್ಳುವಂತೆ ಎರಡೂ ಸರ್ಕಾರಗಳಿಗೆ ಪೀಠ ನಿರ್ದೇಶನ ನೀಡಿತು. ಎರಡನೇ ಡೋಸ್‌ ನೀಡಲು ಖಾಸಗಿ ಏಜನ್ಸಿಗಳಿಗೆ ಅವಕಾಶ ಇದೆಯೇ ಎಂಬುದನ್ನು ತಿಳಿಸುವಂತೆ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು