ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: 2ನೇ ಡೋಸ್‌ಗೆ ನಿರಾಸಕ್ತಿ

ಶೇ 83 ಮಂದಿಗೆ ಮೊದಲ ಡೋಸ್‌ ಲಸಿಕೆ l ಶೇ 38ರಷ್ಟು ಮಂದಿಗೆ ಮಾತ್ರ ಎರಡೂ ಡೋಸ್ ಪೂರ್ಣ
Last Updated 13 ಅಕ್ಟೋಬರ್ 2021, 20:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಲಸಿಕೆಯ ಎರಡನೇ ಡೋಸ್ ಪಡೆಯಲು ಹಲವರು ನಿರಾಸಕ್ತಿ ತೋರುತ್ತಿದ್ದಾರೆ. ಮೊದಲ ಡೋಸ್ ಪಡೆದವರ ಪ್ರಮಾಣ ಶೇ 83ಕ್ಕೆ ಏರಿಕೆ ಕಂಡಿದ್ದರೂ,ಶೇ 38 ರಷ್ಟು ಮಂದಿ ಮಾತ್ರ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ.

ಈ ವರ್ಷಾಂತ್ಯಕ್ಕೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡು ಡೋಸ್‌ ಲಸಿಕೆ ವಿತರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಲಸಿಕೆ ವಿತರಣಾ ಅಭಿಯಾನ‍ಪ್ರಾರಂಭವಾಗಿ 9 ತಿಂಗಳಾಗುತ್ತಾ ಬಂದರೂ ಮೊದಲ ಡೋಸ್ ಪಡೆದವರಲ್ಲಿ ಅರ್ಧದಷ್ಟು ಮಂದಿಯೂ ಎರಡನೇ ಡೋಸ್ ಪಡೆದಿಲ್ಲ.

ಕಳೆದ ಜ.16ರಿಂದ ರಾಜ್ಯದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿದೆ. ಪ್ರಾರಂಭಿಕ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ಮುಂಚೂಣಿ ಯೋಧರಿಗೆ ಆದ್ಯತೆ ನೀಡಿ, ಲಸಿಕೆ ಒದಗಿಸಲಾಗಿತ್ತು. ಬಳಿಕ ವಯೋಮಿತಿ ಅನುಸಾರ 18 ವರ್ಷಗಳು ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಣೆಯನ್ನು ಪ್ರಾರಂಭಿಸಲಾಗಿತ್ತು. ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದಂತೆ ದಿನವೊಂದಕ್ಕೆ ವಿತರಿಸಲಾಗುತ್ತಿದ್ದ ಡೋಸ್‌ಗಳ ಸಂಖ್ಯೆಯನ್ನು 2.5 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಂಭಾವ್ಯ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದರಿಂದ ಸರ್ಕಾರವು ಲಸಿಕಾ ಮೇಳಗಳನ್ನು ರಾಜ್ಯದ ವಿವಿಧೆಡೆ ನಡೆಸಿ, ಲಸಿಕೆಯನ್ನು ವಿತರಿಸಿತ್ತು. ಕೆಲ ದಿನಗಳಿಂದ ದಿನವೊಂದಕ್ಕೆ 4 ಲಕ್ಷದಿಂದ 5 ಲಕ್ಷ ಡೋಸ್‌ಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಇದರಿಂದಾಗಿ ಜುಲೈ ಅಂತ್ಯಕ್ಕೆ36.5ರಷ್ಟಿದ್ದ ಮೊದಲ ಡೋಸ್‌ ಲಸಿಕೆ ಪಡೆದವರ ಪ್ರಮಾಣ, ಈಗ ಶೇ 83ಕ್ಕೆ ತಲುಪಿದೆ.

ಕೆಲ ದಿನಗಳಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ, ಲಸಿಕೆ ಪಡೆದುಕೊಂಡ ಬಳಿಕ ಕಾಣಿಸಿಕೊಳ್ಳುವ ಜ್ವರದಂತಹ ಸಾಮಾನ್ಯ ಲಕ್ಷಣಗಳಿಂದಾಗಿ ಮೊದಲ ಡೋಸ್‌ ಪಡೆದವರಲ್ಲಿ ಕೆಲವರು ಅವಧಿ ಮುಗಿದರೂ ಎರಡನೇ ಡೋಸ್ ಹಾಕಿಸಿಕೊಳ್ಳುತ್ತಿಲ್ಲ.

15 ಜಿಲ್ಲೆಗಳು ಹಿಂದೆ:ಈವರೆಗೆ ಲಸಿಕೆ ವಿತರಣೆಯನ್ನು ಆಧರಿಸಿ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆ ಮಾಡಿದ್ದು, 15 ಜಿಲ್ಲೆಗಳುಲಸಿಕೆ ವಿತರಣೆಯಲ್ಲಿ ರಾಜ್ಯದ ಸರಾಸರಿಗಿಂತ ಹಿಂದೆ ಉಳಿದಿವೆ. ಬೆಂಗಳೂರು, ಉಡುಪಿ, ಕೊಡಗು, ಹಾಸನ ಸೇರಿದಂತೆ 10 ಜಿಲ್ಲೆಗಳಲ್ಲಿ ಗುರುತಿಸಲಾದ ಫಲಾನುಭವಿಗಳಲ್ಲಿ ಶೇ 90ಕ್ಕೂ ಅಧಿಕ ಮಂದಿಗೆ ಮೊದಲ ಡೋಸ್ ಹಾಗೂ ಶೇ 40ಕ್ಕೂ ಅಧಿಕ ಮಂದಿಗೆ ಎರಡನೇ ಡೋಸ್ ವಿತರಿಸಲಾಗಿದೆ.

ಯಾದಗಿರಿ, ಕಲಬುರಗಿ, ರಾಯಚೂರು, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆ ಲಸಿಕೆ ವಿತರಣೆಯಲ್ಲಿ ಹಿಂದೆ ಬಿದ್ದಿವೆ. ಈ ಜಿಲ್ಲೆಗಳಲ್ಲಿ ಮೊದಲ ಡೋಸ್ ಪಡೆದವರ ಪ್ರಮಾಣ ಶೇ 70ಕ್ಕಿಂತ ಕಡಿಮೆಯಿದೆ. ಎರಡನೇ ಡೋಸ್ ವಿತರಣೆಯಲ್ಲಿ ಹಾವೇರಿ ಜಿಲ್ಲೆಯು ಕಡೆಯ ಸ್ಥಾನದಲ್ಲಿದೆ. ಶೇ 80ರಷ್ಟು ಮೊದಲ ಡೋಸ್ ವಿತರಿಸಿದ್ದರೂ, ಶೇ 22ರಷ್ಟು ಮಂದಿ ಮಾತ್ರ ಎರಡನೇ ಡೋಸ್ಪಡೆದಿದ್ದಾರೆ.

ಕೋವಿಡ್ ಲಸಿಕೆಯ ವಿವರ

4.89 ಕೋಟಿ-ರಾಜ್ಯದಲ್ಲಿ ಗುರುತಿಸಲಾದ 18 ವರ್ಷ ಮೇಲ್ಪಟ್ಟವರು

6.03 ಕೋಟಿ-ರಾಜ್ಯದಲ್ಲಿ ವಿತರಿಸಲಾದ ಒಟ್ಟು ಡೋಸ್‌ಗಳು

4.06 ಕೋಟಿ-ಮೊದಲ ಡೋಸ್ ಲಸಿಕೆ ಪಡೆದವರು

1.97 ಕೋಟಿ-ಎರಡನೇ ಡೋಸ್ ಲಸಿಕೆ ಪಡೆದವರು

ಲಸಿಕೆ ವಿತರಣೆಯಲ್ಲಿ ಹಿಂದಿರುವ 5 ಜಿಲ್ಲೆಗಳು

ಜಿಲ್ಲೆ; ಫಲಾನುಭವಿಗಳು; ಮೊದಲ ಡೋಸ್ (%); ಎರಡನೇ ಡೋಸ್ (%)

ಯಾದಗಿರಿ; 9,82,594; 58; 29

ಕಲಬುರಗಿ; 20,59,956; 58; 24

ರಾಯಚೂರು; 15,15,004; 61; 23

ದಾವಣಗೆರೆ; 14,39,856; 65; 26

ಬೀದರ್; 13,16,103; 67; 30

ಲಸಿಕೆ: ಪರ್ಯಾಯ ದಿನಕ್ಕೆ ಮನವಿ

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಲಸಿಕಾ ಕಾರ್ಯಕ್ರಮಕ್ಕೆ ಐದು ದಿನಗಳು ಬಿಡುವು ನೀಡಿ, ಪರ್ಯಾಯ ದಿನಗಳನ್ನು ಗುರುತಿಸಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘವು ಸರ್ಕಾರಕ್ಕೆ ಆಗ್ರಹಿಸಿದೆ.

ಈ ಬಗ್ಗೆ ಸಂಘವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಪತ್ರ ಬರೆದಿದೆ. ‘ಕೋವಿಡ್ ನಿಯಂತ್ರಣ ಸಂಬಂಧ ಇದೇ 10 ರಿಂದ 15ರವರೆಗೆ ಲಸಿಕಾ ಕಾರ್ಯಕ್ರಮ ನಡೆಸಲು ಆದೇಶಿಸಲಾಗಿದೆ. ದಸರಾ ಹಬ್ಬ ಇರುವುದರಿಂದ ಸತತ ಐದು ದಿನಗಳು ಬಿಡುವಿಲ್ಲದೇ ಲಸಿಕಾ ಕಾರ್ಯಕ್ರಮ ನಡೆಸುವುದು ಸಮಸ್ಯೆಯಾಗುತ್ತದೆ. ಹಾಗಾಗಿ, ಪರ್ಯಾಯ ದಿನಗಳನ್ನು ನಿಗದಿಪಡಿಸುವಂತೆ ಇಲಾಖೆಯ ವಿವಿಧ ವೃಂದದ ಸಂಘದವರು ಮನವಿ ಮಾಡಿದ್ದಾರೆ’ ಎಂದು ಪತ್ರದಲ್ಲಿ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್ ತಿಳಿಸಿದ್ದಾರೆ.

‘ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಇತರೆ ಕರ್ತವ್ಯದ ದಿನಗಳಂದು ಲಸಿಕಾ ಕಾರ್ಯಕ್ರಮ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

***

ಕೊರೊನಾ ಸೋಂಕಿನಿಂದ ಸಂಪೂರ್ಣ ಸುರಕ್ಷತೆ ಪಡೆಯಲು ಲಸಿಕೆಯ ಎರಡೂ ಡೋಸ್ ಪಡೆಯುವುದು ಅವಶ್ಯಕ. ಕೋವಿಡ್ ಇನ್ನೂ ಪೂರ್ಣವಾಗಿ ನಿವಾರಣೆ ಆಗಿಲ್ಲ

-ಡಾ. ಅಪ್ಪಾಸಾಹೇಬ್ ಎಸ್. ನರಟ್ಟಿ, ಆರೋಗ್ಯ ಇಲಾಖೆ ನಿರ್ದೇಶಕ

***

ಲಸಿಕೆಯು ಪರಿಣಾಮಕಾರಿ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಆದಷ್ಟು ಬೇಗ ಎರಡೂ ಡೋಸ್ ಲಸಿಕೆ ಪಡೆದುಕೊಳ್ಳಬೇಕು

- ಡಾ.ಸಿ.ಎನ್. ಮಂಜುನಾಥ್,ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT