ಗುರುವಾರ , ಮೇ 26, 2022
24 °C
ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸುವ ಮುನಿಯಪ್ಪಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

‘ಮಸಣದ ಹೂವಿ’ಗೆ ಕನ್ನಡದ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹುಟ್ಟಿದಂದಿನಿಂದ ಇಂದಿನವರೆಗೂ ಸ್ಮಶಾನದಲ್ಲೇ ಬದುಕು ಸವೆಸಿದ ಜೀವವದು. ಇಹಲೋಕ ಯಾತ್ರೆ ಮುಗಿಸಿದವರನ್ನು ಗೌರವಯುತವಾಗಿ ಕಳುಹಿಸಿಕೊಡುವ ಕಾರ್ಯದಲ್ಲೇ ಬದುಕಿನ ಸಾರ್ಥಕತೆಯನ್ನು ಕಂಡ ಈ ಕಾಯಕ ಜೀವಿಗೆ ಇಳಿವಯಸ್ಸಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಅರಸಿಬಂದಿದೆ.

ದಿಕ್ಕಿಲ್ಲದ ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಬದುಕಿನುದ್ದಕ್ಕೂ ಶ್ರದ್ಧೆಯಿಂದ ನಡೆಸುತ್ತಾ ಬಂದಿರುವ ದೊಮ್ಮಲೂರಿನ ಸ್ಮಶಾನ ನೌಕರ ಮುನಿಯಪ್ಪ ಅವರ ಕಾಯಕಶ್ರದ್ಧೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ. ಯಾರೂ ಗಮನಿಸದ ‘ಮಸಣದ ಹೂವಿ’ನ ಕಂಪನ್ನು ಸರ್ಕಾರ ಗುರುತಿಸಿರುವುದು ಸ್ಮಶಾನದಲ್ಲಿ ಕಾಯಕ ನಿರತ ಕಾರ್ಮಿಕರಲ್ಲೂ ಸಾರ್ಥಕತೆಯ ಭಾವವನ್ನು ಮೂಡಿಸಿದೆ.

‘ನನ್ನ ತಂದೆ ತಾಯಿಯವರೂ ಸ್ಮಶಾನದ ಕಾರ್ಮಿಕರಾಗಿದ್ದವರು. ಹುಟ್ಟಿನಿಂದ ಇಲ್ಲಿವರೆಗೂ ನಾನೂ ಸ್ಮಶಾನದಲ್ಲೇ ಬದುಕನ್ನು ಕಳೆದಿದ್ದೇನೆ. 10 ವರ್ಷದವನಿದ್ದಾಗಲೇ ಶವಗಳ ಅಂತ್ಯಸಂಸ್ಕಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಸರ್ಕಾರವು ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದು ಸಂಜೆ ತಿಳಿಯಿತು. ಕೆಲವರು ಮನೆಗೆ ಬಂದು ಶಾಲು ಹೊದಿಸಿ ಸನ್ಮಾಸಿದರು’ ಎಂದು ಮುನಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ದೊಮ್ಮಲೂರು ಪರಿಸರದ ಅನಾಥ ಶವಗಳ ಅಂತ್ಯಕ್ರಿಯೆ ನೆರವೇರಿಸುವ ಪುಣ್ಯ ಕಾರ್ಯದಲ್ಲಿ ತೃಪ್ತಿ ಕಾಣುತ್ತಿರುವ ಮುನಿಯಪ್ಪ ಇಳಿವಯಸ್ಸಿನಲ್ಲೂ ಹುಮ್ಮಸ್ಸಿನಿಂದ ಈ ಕೆಲಸ ಮುಂದುವರಿಸಿದ್ದಾರೆ. ಆರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು ಒಳಗೊಂಡ ತುಂಬು ಸಂಸಾರ ಅವರದು. ಅವರ ಕುಟುಂಬ ಈಗಲೂ ಸ್ಮಶಾನದಲ್ಲೇ ನೆಲೆಸಿದೆ. ಕುಟುಂಬದ ಸದಸ್ಯರೂ ಇದೇ ಕಾಯಕದಲ್ಲಿ ತೊಡಗಿದ್ದಾರೆ.

‘ನನ್ನ ಆಯಸ್ಸು ಹೇಗೋ ಕಳೆಯಿತು. ಕುಟುಂಬದವರಾದರೂ ಉತ್ತಮ ಬದುಕು ಕಟ್ಟಿಕೊಳ್ಳುವಂತಾದರೆ ನನ್ನ ಜೀವನ ಸಾರ್ಥಕವಾದಂತೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು