ಸೋಮವಾರ, ಏಪ್ರಿಲ್ 19, 2021
23 °C

ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನಾಡೋಜ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಜಮಖಂಡಿಯ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಎಸ್. ಗುಡಗುಂಟಿ ಅವರನ್ನು ಆಯ್ಕೆ ಮಾಡಿರುವ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

‘ಪ್ರಜಾವಾಣಿ’ ವೆಬ್‌ಸೈಟಿನಲ್ಲಿ ಪ್ರಕಟಗೊಂಡ ಸುದ್ದಿಯನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ದಾದಾ ಕಲಂದರ್‌ ಎಂಬುವವರು, ‘ಬಿಜೆಪಿಯವರ ಆಡಳಿತದಲ್ಲಿ ಏನೆಲ್ಲಾ ನೋಡಬೇಕಿದೆಯೋ? ಅಲ್ಲಾ ಈ ನಾಡೋಜ ಪ್ರಶಸ್ತಿ ನೀಡಲು ಇರುವ ಮಾನದಂಡಗಳಲ್ಲಿ ಹಣವಂತರು ಎಂಬ ಮಾನದಂಡ ಯಾವಾಗ ಸೇರಿಸಲಾಯಿತು? ನಿಜ ನಾಡೋಜರಾದ ರೈತರು, ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಂದಾಯ ಮಾಡಲಾಗದವರನ್ನೆಲ್ಲ ನಾಡೋಜ ಕೊಟ್ಟು ಗೌರವಿಸುವ ದಾರಿದ್ರ್ಯಕ್ಕೆ ಸಾಕ್ಷಿಯಾಗಬೇಕಾಗಿ ಬಂದದ್ದು ಕನ್ನಡಿಗರ ದೌರ್ಭಾಗ್ಯವೇ ಹೌದು’ ಎಂದು ಬರೆದುಕೊಂಡಿದ್ದಾರೆ.

ಜಗದೀಶ ಅವರಿಗೆ ಸೇರಿದ ‘ಪ್ರಭುಲಿಂಗೇಶ್ವರ ಶುಗರ್ಸ್‌’ಗೆ ಕಬ್ಬು ಪೂರೈಸಿದ ರೈತರ ಎಷ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ವಿವರ ಒಳಗೊಂಡ ಸ್ಕ್ರೀನ್‌ ಶಾಟ್‌ ಕೂಡ ಪೋಸ್ಟ್‌ ಮಾಡಿದ್ದಾರೆ. ಅವರ ಪೋಸ್ಟ್‌ಗೆ ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

‘ಇದು ಪಕ್ಕಾ ಮಾರ್ವಾಡಿಗಳ ಸಂಘದಿಂದ ಹುಟ್ಟಿದೆಯಲ್ಲ’ ಎಂದು ಪ್ರಕಾಶ ಮಂತೆವಾಡ ಎನ್ನುವವರು ಪ್ರತಿಕ್ರಿಯಿಸಿದರೆ, ‘ದೇಣಿಗೆ ತಂದ ಪ್ರಶಸ್ತಿ ನೀವೂ ಪೀಕಿಕೊಳ್ಳಬಹುದು’ ಎಂದು ಸಿರಾಜುನ್ನಿಸಾ ಪಾಷಾ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ... ಉದ್ಯಮಿ ಜಗದೀಶ, ನೇತ್ರ ತಜ್ಞ ಕೃಷ್ಣಪ್ರಸಾದ್‌ಗೆ ನಾಡೋಜ ಗೌರವ

‘ಬಹಳಷ್ಟು ಸಿಹಿ ಹಂಚಿರಬೇಕು’ ಎಂದು ವಿಶ್ವನಾಥ ಮಾಳಗಿ ಎಂಬುವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ‘ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಮತ್ತು ಸಮಾಜಮುಖಿ ಕಾರ್ಯ ಮಾಡುವ ಸಜ್ಜನ್‌ ಜಿಂದಾಲ್‌ ಅವರಿಗೆ ನೀಡಬಹುದು ಅಲ್ಲವೇ’ ಎಂದು ಎ.ಕೆ. ಉದೇದಪ್ಪ ಪ್ರಶ್ನಿಸಿದ್ದಾರೆ.

‘ಪಕ್ಷ ನಿಷ್ಠೆ ಇರುವವರು ಯಾರಾದರೂ ನಾಡೋಜ ಆಗಬಹುದು. ಇನ್ನೂ ಮುಂದೆ... ವಿಶ್ವವಿದ್ಯಾಲಯದ ಸ್ವಾಯತ್ತತೆ ಗಾಳಿಗೆ ತೂರಿ’ ಎಂದು ಎಚ್‌. ಯರ‍್ರಿಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

‘ನಾಡೋಜ ಗೌರವ ಹಾಳಾಗಿ ತುಂಬ ವರ್ಷವೇ ಆಯಿತು’ ಎಂದು ಸತೀಶ ಜವರೇಗೌಡ ವಿಷಾದಿಸಿದ್ದಾರೆ.


ಫೇಸ್‌ಬುಕ್‌ ಪೋಸ್ಟ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು