ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ರಾಜ್ಯದಲ್ಲಿ ಎರಡು ತಿಂಗಳಲ್ಲಿ 1,777 ಪ್ರಕರಣ

Last Updated 23 ಸೆಪ್ಟೆಂಬರ್ 2021, 21:33 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಕಳೆದ ವರ್ಷ ನಿಯಂತ್ರಣಕ್ಕೆ ಬಂದಿದ್ದ ಡೆಂಗಿ ‍ಪ್ರಕರಣಗಳು ಈ ವರ್ಷ ಏರುಗತಿ ಪಡೆದಿದ್ದು, ಎರಡು ತಿಂಗಳಲ್ಲಿ 1,777 ಪ್ರಕರಣಗಳು ದೃಢಪಟ್ಟಿವೆ.‌

‘ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಹೊಸ ಮಾದರಿಯ ಸೆರೋಟೈಪ್–2 ವೈರಾಣುವಿಂದ ಅಪಾಯಕಾರಿ ಡೆಂಗಿ ಜ್ವರ ಕಾಣಸಿಕೊಳ್ಳುತ್ತಿದೆ’ ಎಂದು ಕಳೆದ ವಾರವಷ್ಟೇಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು.

ಈ ವರ್ಷ ಮೊದಲ ಏಳು ತಿಂಗಳ ಅವಧಿಯಲ್ಲಿಡೆಂಗಿಪ್ರಕರಣಗಳ ಸಂಖ್ಯೆ 1,500ರ ಗಡಿಯ ಆಸುಪಾಸಿನಲ್ಲಿತ್ತು. ಮಳೆ ಚುರುಕುಗೊಂಡ ಬಳಿಕ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯ ಹಾದಿ ಹಿಡಿದಿದೆ. ಈವರೆಗೆ ಒಟ್ಟು 3,279 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರಿನಲ್ಲಿ 575 ಪ್ರಕರಣಗಳು ದೃಢಪಟ್ಟಿವೆ. ಕಲಬುರ್ಗಿಯಲ್ಲಿ 313, ಉಡುಪಿಯಲ್ಲಿ 312, ಶಿವಮೊಗ್ಗದಲ್ಲಿ 235, ದಕ್ಷಿಣ ಕನ್ನಡದಲ್ಲಿ 190, ಕೊಪ್ಪಳದಲ್ಲಿ 160, ಬಳ್ಳಾರಿಯಲ್ಲಿ 145, ದಾವಣಗೆರೆಯಲ್ಲಿ 138, ಹಾವೇರಿಯಲ್ಲಿ 125, ಗದಗದಲ್ಲಿ 116 ಹಾಗೂ ವಿಜಯಪುರದಲ್ಲಿ 114 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿಈ ಸಂಖ್ಯೆ 100ರ ಗಡಿಯೊಳಗೆ ಇವೆ.

ಸೋಂಕಿತ ಈಡಿಸ್ ಈಜಿಫ್ಟೈ ಸೊಳ್ಳೆಗಳ ಕಡಿತದಿಂದ ಹರಡುವ ಈ ಜ್ವರಕ್ಕೆ 2019ರಲ್ಲಿ 18 ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದರು. ಅವರಲ್ಲಿ 17 ಮಂದಿ ಮೃತಪಟ್ಟಿದ್ದರು. 10 ಸಾವಿರಕ್ಕೂ ಅಧಿಕ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದ್ದವು. ದಶಕದಲ್ಲೇ ಅತಿ ಹೆಚ್ಚು ಮಂದಿ ಈ ಜ್ವರಕ್ಕೆ ಒಳಪಟ್ಟಿದ್ದರು. ಕಳೆದ ವರ್ಷ 3,823 ಮಂದಿಯಲ್ಲಿಡೆಂಗಿಜ್ವರ ಕಾಣಿಸಿಕೊಂಡಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು.

ಮರಣ ಸಂಭವಿಸಿಲ್ಲ:ಆರೋಗ್ಯ ಇಲಾಖೆಯ ದೈನಂದಿನಡೆಂಗಿ ವರದಿಯಲ್ಲಿ ಈ ವರ್ಷ ಯಾವುದೇ ಮರಣ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಈವರೆಗೆ 1,042 ಚಿಕೂನ್‌ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಉತ್ತರ ಕನ್ನಡ, ರಾಯಚೂರು ಹಾಗೂ ದಕ್ಷಿಣ ಕನ್ನಡ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಕರಣಗಳು ಖಚಿತಪಟ್ಟಿವೆ. ಎರಡು ತಿಂಗಳಲ್ಲಿ 534 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಕಲಬುರ್ಗಿ (143), ಕೋಲಾರ (108) ಹಾಗೂ ಶಿವಮೊಗ್ಗದಲ್ಲಿ (106) ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗಡೆ ಇವೆ.

ಮುಂಜಾಗ್ರತಾ ಕ್ರಮಕ್ಕೆ ಸೂಚನೆ
‘ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆ, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಹಾಗಾಗಿ, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

‘ನೀರಿನ ತೊಟ್ಟಿಗಳು, ಟ್ಯಾಂಕ್‌ಗಳು ಮತ್ತು ಬ್ಯಾರಲ್‌ಗಳನ್ನು ಕನಿಷ್ಠ ಒಂದು ವಾರಗಳಿಗೊಮ್ಮೆ ಸ್ವಚ್ಛಗೊಳಿಸಿ, ಮುಚ್ಚಿಡಬೇಕು. ಮಳೆ ನೀರು ಸಂಗ್ರಹವಾಗುವ ವಾಹನಗಳ ಚಕ್ರಗಳು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕು. ಹವಾನಿಯಂತ್ರಿತ ಯಂತ್ರಗಳು, ಹೂವಿನಕುಂಡಗಳಲ್ಲಿ ಪ್ರತಿ ವಾರ ನೀರನ್ನು ಖಾಲಿ ಮಾಡಬೇಕು’ ಎಂದು ಇಲಾಖೆ ಹೇಳಿದೆ.

ಡೆಂಗಿ,ಚಿಕೂನ್‌ಗುನ್ಯಾ ಜ್ವರದ ಲಕ್ಷಣಗಳು
* ತೀವ್ರ ಜ್ವರ
* ಮೈ–ಕೈ ನೋವು ಮತ್ತು ಕೀಲು ನೋವು
* ತೀವ್ರತರ ತಲೆನೋವು
* ಕಣ್ಣುಗಳಿಗೆ ಆಯಾಸದ ಅನುಭವ
* ವಾಕರಿಕೆ ಮತ್ತು ವಾಂತಿ
* ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು
* ಬಾಯಿ, ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT