ಶುಕ್ರವಾರ, ಜನವರಿ 22, 2021
27 °C
ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಕಾರ್ಯಕ್ರಮ

ದತ್ತು ಪಡೆದ ಶಾಲೆಗಳ ಶಿಕ್ಷಕರು, ಮಕ್ಕಳ ಜೊತೆ ಚರ್ಚಿಸಿ: ಬಿ.ಎಸ್‌. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BS Yediyurappa

ಬೆಂಗಳೂರು: ‘ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಜೊತೆ 3–4 ತಿಂಗಳಿಗೆ ಒಮ್ಮೆಯಾದರೂ ಆ ಶಾಲೆಗೆ ತೆರಳಿ ಅಲ್ಲಿನ ಶಿಕ್ಷಕರು, ಮಕ್ಕಳ ಜೊತೆ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಷ್ಟೇ ಅಲ್ಲದೆ, ಒಂದು ದಿನ ಮಕ್ಕಳ ಪೋಷಕರನ್ನು ಕರೆಸಿ ಅವರಿಗೆ ಉಪದೇಶ ನೀಡುವ ಕೆಲಸವನ್ನೂ ಮಾಡಬೇಕಿದೆ. ಮಕ್ಕಳು ಸಮಾಜಕ್ಕೆ, ಕುಟುಂಬಕ್ಕೆ ಹೊರೆ ಆಗದಂತೆ ಜೀವಿಸುವ ಮತ್ತು ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುವಂತೆ ಪ್ರೇರೇಪಿಸಬೇಕು. ಆಗ ಮಾತ್ರ ಶಾಲೆಗಳನ್ನು ದತ್ತು ಪಡೆದ ಆ ಕೆಲಸ ಸಾರ್ಥಕವಾಗುತ್ತದೆ’ ಎಂದರು.

‘ದತ್ತು ಸ್ವೀಕಾರ ಯೋಜನೆಗೆ ವಿಶೇಷ ಪ್ರಯತ್ನ ಮಾಡಿದ ಪ್ರೊ. ಎಂ.ಆರ್‌.  ದೊರೆಸ್ವಾಮಿ ಅವರ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿ, ‘ಇದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಜನಪ್ರತಿನಿಧಿಗಳು ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸಲು ಕಂಕಣಬದ್ಧರಾಗುವುದು ವಿಶೇಷ’ ಎಂದರು.

‘ಅನೇಕರು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ. ಮಾಧ್ಯಮಗಳ ಮೂಲಕ ನಾಡಿನ ಉದ್ದಗಲಕ್ಕೂ ಈ ವಿಷಯ ಗೊತ್ತಾಗಿ, ಇತರರಿಗೂ ಕೂಡಾ ದತ್ತು ಪಡೆಯಲು ಪ್ರೇರೇಪಣೆಯಾಗಲಿದೆ. ದೊರೆಸ್ವಾಮಿಯವರ ಪ್ರಯತ್ನ ಸಂತೋಷದ ಸಂಗತಿ. ದೇಶದ ಬೇರೆ ಬೇರೆ ರಾಜ್ಯಗಳು ಕೂಡಾ ಇದನ್ನೇ ಅನುಸರಿಸಲಿವೆ’ ಎಂದೂ ಮುಖ್ಯಮಂತ್ರಿ ಹೇಳಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ಇದೊಂದು ವಿನೂತನ ಕಾರ್ಯಕ್ರಮ. ಸರ್ಕಾರಿ ಶಾಲೆ ದತ್ತು ಪಡೆಯುವ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಬಂದ ಕಾಲದಿಂದ ಯಾವ ಸರ್ಕಾರವೂ ಮಾಡಿರಲಿಲ್ಲ. ಈ ರೀತಿ ಅರ್ಥಪೂರ್ಣ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಮಾಡಿದೆ. ಇದರ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲಬೇಕು’ ಎಂದರು.

‘ನಾನು ನನ್ನ ಕ್ಷೇತ್ರದಲ್ಲಿ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದೇನೆ. ನನ್ನಂತೆ ಅನೇಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರು ಉತ್ತಮ ರೀತಿಯಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕು. ಪಠ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು’ ಎಂದು ಸಲಹೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಮಾತನಾಡಿ, ‘ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವವರ ಸಂಖ್ಯೆ ಇನ್ನೂ ಜಾಸ್ತಿ ಆಗಬೇಕು’ ಎಂದರು.

‘ದೆಹಲಿ ಥರ ಶಾಲೆಗಳನ್ನು ಮಾಡಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ಅಲ್ಲಿನ ಸ್ಥಿತಿ ಭಿನ್ನವಿದೆ. ದೆಹಲಿಯಲ್ಲಿ ನಾಲ್ಕು ಸಾವಿರ ಶಾಲೆಗಳಿವೆ. ಅಲ್ಲಿ ನೀರಾವರಿಗೆ ಖರ್ಚು ಮಾಡುವ ಅಗತ್ಯ ಇಲ್ಲ. ನಾವು ಕೂಡಾ ಅಲ್ಲಿನ ವಿಶೇಷ ಸಂಗತಿಗಳನ್ನು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ತರುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಶಾಲೆಗಳ ದತ್ತು ಸ್ವೀಕಾರ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಶಿಕಾರಿಪುರ ತಾಲ್ಲೂಕಿನ 10 ಶಾಲೆಗಳನ್ನು ದತ್ತು ಪಡೆದ ಮುಖ್ಯಮಂತ್ರಿಗೆ ಸಚಿವ ಸುರೇಶ್‌ ಕುಮಾರ್‌ ಪ್ರಮಾಣ ಪತ್ರ ಸಲ್ಲಿಸಿದರು. ಮುಧೋಳ ಕ್ಷೇತ್ರದ 5 ಶಾಲೆಗಳನ್ನು ದತ್ತು ಪಡೆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮೊಳಕಾಲ್ಮೂರು ಕ್ಷೇತ್ರದಲ್ಲಿ  5 ಶಾಲೆಗಳನ್ನು ದತ್ತು ಸ್ವೀಕರಿಸಿದ ಸಚಿವ ಶ್ರೀರಾಮುಲು, ಮದ್ದೂರಿನ 5 ಶಾಲೆಗಳನ್ನು ದತ್ತು ಪಡೆದ ವಿಧಾನಪರಿಷತ್‌ ಸದಸ್ಯ ಶ್ರೀಕಂಠಯ್ಯ ಅವರಿಗೆ ಮುಖ್ಯಮಂತ್ರಿ ಪ್ರಮಾಣ ಪತ್ರಗಳನ್ನು ನೀಡಿದರು.

ಶಾಲೆಗಳನ್ನು ದತ್ತು ಪಡೆದ ಬೆಂಗಳೂರು ವಿಶ್ವವಿದ್ಯಾಲಯ, ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ, ಮಂಗಳೂರು, ಮೈಸೂರು, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಆದಿಚುಂಚನಗಿರಿ, ಸಿಎಂಆರ್‌, ಗಾರ್ಡನ್‌ ಸಿಟಿ, ಪಿಇಎಸ್‌ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ, ರೇವಾ, ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ, ಕ್ರೈಸ್ತ್‌ ವಿಶ್ವವಿದ್ಯಾಲಯಗಳಿಗೂ ದತ್ತು ಸ್ವೀಕಾರ ಪ್ರಮಾಣ ಪತ್ರ ವಿತರಿಸಲಾಯಿತು.

ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು