ಮಂಗಳವಾರ, ಜೂನ್ 22, 2021
24 °C

ಆತ ಅಮಾವಾಸ್ಯೆ ಗಿರಾಕಿ –ತೇಜಸ್ವಿ ಸೂರ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಡ್ ಬ್ಲಾಕ್‌ ದಂಧೆ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಪ್ರಕರಣ ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ, ಒಂದು ಕೋಮಿನ 17 ಜನರನ್ನು ಮಾತ್ರ ಉಲ್ಲೇಖಿಸಿರುವುದು ಹಾಗೂ ಪ್ರಕರಣದಲ್ಲಿ ಬಿಜೆಪಿ ಶಾಸಕರ ಕೈವಾಡದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ತೇಜಸ್ವಿ ಸೂರ್ಯ ಓದಿಕೊಂಡಿರುವವನು. ಒಳ್ಳೆಯ ಕೆಲಸ ಮಾಡಿದ್ದಾನೆ ಎಂದುಕೊಂಡಿದ್ದೆ. ಆತ ಅಮಾವಾಸ್ಯೆ ಗಿರಾಕಿ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಳೆಸನ್ನು ಕರೆದುಕೊಂಡು ಬಂದು ಇಟ್ಟುಕೊಂಡಿದ್ದಾರೆ’ ಎಂದು ವ್ಯಂಗ್ಯ ಮಾಡಿದರು.

‘ಈ ಪ್ರಕರಣಕ್ಕೆ ಕೋಮು ಆಯಾಮ ಕೊಡುವವರನ್ನು ಬಂಧಿಸಬೇಕು. ಸಚಿವ ಆರ್. ಅಶೋಕ ಉತ್ತರ ಕೊಡದೆ ಓಡಿ ಹೋಗುತ್ತಿದ್ದಾರೆ. ಉಳಿದ ಸಚಿವರು ಏನು ಮಾಡುತ್ತಿದ್ದಾರೆ. ತೇಜಸ್ವಿ ಸೂರ್ಯ ಕೇವಲ ಮುಸ್ಲಿಂ ಹೆಸರುಗಳನ್ನು ಓದುತ್ತಾನೆ. ಮುಸ್ಲಿಮರು ನನ್ನ ಸಹೋದರರು, ಅವರ ಜೊತೆ ನಾವು ಜೀವಿಸುತ್ತೇವೆ, ಸಾಯುತ್ತೇವೆ’ ಎಂದರು.

‘ಮುಸ್ಲಿಮರು ಮಾಂಸ ಕಡಿಯಲಿಲ್ಲ ಅಂದರೆ ನಾವು ಮಾಂಸ ತಿನ್ನಲ್ಲ. ಅವರು ಪಂಚರ್ ಹಾಕಿಲ್ಲ ಅಂದರೆ ಗಾಡಿ ಮುಂದಕ್ಕೆ ಹೋಗಲ್ಲ. ತೇಜಸ್ವಿ ಸೂರ್ಯ ಅವರ ಮನೆಯವರು ಗಾಡಿ ರಿಪೇರಿ‌ ಮಾಡಿಸಲ್ವ’ ಎಂದು ಪ್ರಶ್ನಿಸಿದರು.

‘ಈಗ ಪ್ರಕರಣವನ್ನು ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲಗೆ ನೀಡಿದ್ದಾರೆ. ನನಗೆ ಸಂದೀಪ್ ಪಾಟೀಲ ಸೇರಿ ಯಾವ ಅಧಿಕಾರಿಯ ಮೇಲೂ ನಂಬಿಕೆ ಇಲ್ಲ. ಮುಖರ್ಜಿ ಮೇಲೂ ಇಲ್ಲ, ಅನುಚೇತ್ ಮೇಲೂ ಇಲ್ಲ. ರಮೇಶ ಜಾರಕಿಹೊಳಿ ಕೇಸ್ ಆಗಿ ಒಂದೂವರೆ ತಿಂಗಳಾಯಿತು. ಏನು ಮಾಡುತ್ತಿದ್ದೀರಿ’  ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿಗಳೆ, ಈ ಕಡೆ ನೋಡಿ. ನಿಮ್ಮ ಶಾಸಕರು ಮಂತ್ರಿಗಳು ಕೋಮುವಾದಕ್ಕೆ ಪ್ರೇರಣೆ ನೀಡುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ. ಕೂಡಲೇ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಈ ಹಗರಣದಲ್ಲಿ ಯಾರಿದ್ದರೂ ಅವರೆಲ್ಲರನ್ನೂ ಬಂಧಿಸಿ. ಅವರು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಬಂಧಿಸಿ. 205 ಜನರನ್ನು ಬಂಧಿಸಿ ನೋಡೋಣ’ ಎಂದು ಸವಾಲು ಹಾಕಿದರು.

‘ಬಿಜೆಪಿಯ ಶಾಸಕರೇ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಮೊದಲು ಬಂಧಿಸಬೇಕು. ಯಡಿಯೂರಪ್ಪ ಅವರಿಗೆ ಒಳ್ಳೆಯ ಅವಕಾಶ. ಕೊನೆ ಸಂದರ್ಭದಲ್ಲಿ ಕೆಟ್ಟು ಹೆಸರು ತೆಗೆದುಕೊಳ್ಳ ಬೇಕಾ’ ಎಂದರು.

‘ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಹೋದವರು ವಾಪಸು ಬರುತ್ತಿದ್ದಾರೆ. ಮುಖ್ಯಮಂತ್ರಿ ಮೂರು ದಿನಕ್ಕೆ ಕೊರೊನಾದಿಂದ ಮುಕ್ತರಾಗಿ ಬರುತ್ತಾರೆ. ನಾನು ಕೊರೊನಾದಿಂದ ಮುಕ್ತವಾಗಿ ಬಂದಿದ್ದೇನೆ. ಆದರೆ, ಸರ್ಕಾರಿ ಅಸ್ಪತ್ರೆಗೆ ಹೋದವರು ಸಾಯುತ್ತಿದ್ದಾರೆ’ ಎಂದು ಸರ್ಕಾರಿ ಆಸ್ಪತ್ರೆಗಳ ಮೇಲೆ ಗಂಭೀರ ಆರೋಪ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು