ಭಾನುವಾರ, ಜನವರಿ 16, 2022
28 °C

ಟೆಂಡರ್‌ಗಳಲ್ಲಿ 40 ಪರ್ಸೆಂಟೇಜ್ ಆರೋಪ: ಸರ್ಕಾರ ಸದನ ಸಮಿತಿ ರಚಿಸಲಿ ಎಂದ ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟೆಂಡರ್‌ಗಳಲ್ಲಿ 40 ಪರ್ಸೆಂಟೇಜ್ ಕಮಿಷನ್‌ ಆರೋಪವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಜಂಟಿ ಸದನ ಸಮಿತಿಯಿಂದ ವಿಚಾರಣೆ ನಡೆಸುವಂತೆ ಪಟ್ಟು ಹಿಡಿಯಲು ವಿರೋಧ ಪಕ್ಷ ಕಾಂಗ್ರೆಸ್‌ ಮುಂದಾಗಿದೆ.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈ ಸುಳಿವು ನೀಡಿದರು.

‘ಈ ಆರೋಪದ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸುವುದಿಲ್ಲ ಎಂಬುದು ಗೊತ್ತಿದೆ. ಹಾಗೆಂದು, ಈ ವಿಷಯವನ್ನು ಸುಮ್ಮನೆ ಬಿಡಲು ಆಗುತ್ತದೆಯೇ. ಕಮಿಷನ್‌ ಆರೋಪದ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಿ, ಅದರ ವಿರುದ್ಧ ಹೋರಾಟ ನಡೆಸುತ್ತೇವೆ. ಸರ್ಕಾರ ಸದನ ಸಮಿತಿ ರಚಿಸಲಿ. ಹೇಗಿದ್ದರೂ ಅವರೇ (ಸರ್ಕಾರದವರು) ಅದರ ಅಧ್ಯಕ್ಷರಾಗಿರುತ್ತಾರೆ’ ಎಂದರು.

ಓದಿ: 

‘ಶೇ 40ರಷ್ಟು ಕಮಿಷನ್ ಆರೋಪದ ಕುರಿತು ತನಿಖೆಗೆ ಸರ್ಕಾರ ಆದೇಶ ನೀಡಿದೆ. ಆದರೆ, ಇತ್ತೀಚಿನ ಅವಧಿಯ ತನಿಖೆಯಷ್ಟೇ ಯಾಕೆ? ಹತ್ತು ವರ್ಷಗಳ ಅವಧಿಯ ತನಿಖೆ ನಡೆಸಲಿ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರೇ ತಪ್ಪು ಮಾಡಿರಲಿ. ಮೊದಲು ಎಲ್ಲರ ಅವಧಿಯ ತನಿಖೆ ನಡೆಸಲಿ. ಸಾರ್ವಜನಿಕರ ಹಣ ವ್ಯರ್ಥ ಆಗಬಾರದು’ ಎಂದರು.

‘ಕಮಿಷನ್‌ ಆರೋಪದ ವಿಚಾರದಲ್ಲಿ ನೀರಾವರಿ ಕಾರ್ಯದರ್ಶಿ ಏನು ತನಿಖೆ ನಡೆಸುತ್ತಾರೆ ಹೇಳಿ’ ಎಂದು ಪ್ರಶ್ನಿಸಿದ ಶಿವಕುಮಾರ್‌, ‘ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ನಡೆಸಲಿ. ರಾಜ್ಯ ಸರ್ಕಾರ ವಜಾ ಮಾಡುವಂತೆ ಈಗಾಗಲೇ ರಾಜ್ಯಪಾಲರಿಗೆ ನಾವು ಒತ್ತಾಯ ಮಾಡಿದ್ದೇವೆ. ನಾವೇನು ಸುಮ್ಮನೆ ವಜಾ ಮಾಡುವಂತೆ ಹೇಳಿದ್ದೇವಾ. ಲೆಕ್ಕಾಚಾರ ಇಲ್ಲದೇ ರಾಜ್ಯಪಾಲರಿಗೆ ದೂರು ನೀಡಿದ್ದೇವಾ’ ಎಂದು ಪ್ರಶ್ನಿಸಿದರು.

‘ಕೋವಿಡ್ ಸಂದರ್ಭದಲ್ಲಿ ಎಷ್ಟೆಷ್ಟು ಕಮಿಷನ್ ಪಡೆದಿದ್ದಾರೆ ಎನ್ನುವುದೂ ಗೊತ್ತಿದೆ. ಕೇಂದ್ರ ಒಂದು ಮೊತ್ತದಲ್ಲಿ, ರಾಜ್ಯ ಸರ್ಕಾರ ಇನ್ನೊಂದು ಮೊತ್ತದಲ್ಲಿ ವೈದ್ಯಕೀಯ ಪರಿಕರಗಳನ್ನು ಖರೀದಿಸಿದೆ’ ಎಂದು ಆರೋಪಿಸಿದ ಅವರು, ‘ಹಿಂದೆ ನಮ್ಮ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ 10 ಪರ್ಸೇಟೇಜ್‌ ಸರ್ಕಾರ ಆರೋಪ ಮಾಡಿದ್ದರು. ಅವರಿಗೇನು ವಸ್ತುಸ್ಥಿತಿ ಗೊತ್ತಿರುತ್ತದೆ. ರಾಜ್ಯದ ಬಿಜೆಪಿ ನಾಯಕರ ಮಾತು ಕೇಳಿಕೊಂಡು ಆರೋಪ ಮಾಡಿದ್ದಾರೆ. ಆದರೆ, ಈಗಿನ ಆರೋಪದ ಬಗ್ಗೆ ಮೋದಿ ಏನು ಹೇಳುತ್ತಾರೆ?’ ಎಂದರು.

ಓದಿ: 

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ನಾಯಕರು ಜೆಡಿಎಸ್ ಬೆಂಬಲ ಕೋರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಅದು ಜೆಡಿಎಸ್ ಪಕ್ಷದ ವಿಚಾರ. ಈ ಹಿಂದೆಯೂ ಇದೆಲ್ಲ ನಡೆದಿತ್ತು. ನಾವು ಎಲ್ಲ 25 ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಆದರೂ ಅತಿ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ಇದೆ’ ಎಂದರು.

‘ಜೆಡಿಎಸ್ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಯಾರಿಗೆ ಮತ ಹಾಕಬೇಕು, ಯಾರಿಂದ ಮತ ಹಾಕಿಸಿಕೊಳ್ಳಬೇಕು ಎಂಬುದು ಅವರ ಪಕ್ಷಕ್ಕೆ ಬಿಟ್ಟಿದ್ದು. ಅರುಣ್ ಸಿಂಗ್ (ಬಿಜೆಪಿ ರಾಜ್ಯ ಉಸ್ತುವಾರಿ) ಜೆಡಿಎಸ್ ಬಗ್ಗೆ ಹೇಳಿದ್ದನ್ನೂ ನೋಡಿದ್ದೇನೆ. ಬಿಜೆಪಿ ನಾಯಕರು ಜೆಡಿಎಸ್ ಬಗ್ಗೆ ಏನು ಹೇಳಿದ್ದಾರೆ ಎನ್ನುವುದೂ ಗೊತ್ತಿದೆ. ನಾವು ನಮ್ಮ ಬಲದ ಮೇಲೆ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು