ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾರ್ಚ್ ಅಂತ್ಯಕ್ಕೆ ಎಲ್ಲ ಶಾಲೆಗಳಿಗೆ ನೀರು, ಶೌಚಾಲಯ

ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌
Last Updated 15 ಫೆಬ್ರುವರಿ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲ 42,015 ಸರ್ಕಾರಿ ಶಾಲೆಗಳಿಗೆ ಮಾರ್ಚ್‌ ಅಂತ್ಯದ ವೇಳೆಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲು ಈಗಾಗಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ (ಆರ್‌ಡಿಪಿಆರ್‌) ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಎರಡು ವರ್ಷಗಳಿಂದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಪ್ರತಿ ಶಾಲೆಯಲ್ಲಿ ಆವರಣ ಗೋಡೆ, ಶೌಚಾಲಯ ನಿರ್ಮಾಣ ಸೇರಿದಂತೆ ಮೂಲಸೌಲಭ್ಯ ಒದಗಿಸಲಾಗುತ್ತಿದೆ. ಇದೀಗ, ಕೊಳವೆ ಮೂಲಕ ಶಾಲೆಗಳು, ಅಂಗನವಾಡಿಗಳು ಮತ್ತು ಆಶ್ರಮ ಶಾಲೆಗಳಿಗೆ ನೀರು ಒದಗಿಸುವ 100 ದಿನಗಳ ಅಭಿಯಾನದಡಿ ತ್ವರಿತಗರಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಗ್ರಾಮೀಣ ಭಾಗದ ಒಟ್ಟು ಶಾಲೆಗಳ ಪೈಕಿ, 24,040 ಶಾಲೆಗಳಲ್ಲಿ ಅಡುಗೆಕೋಣೆ ಮತ್ತು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇದೆ. 17,374 ಶಾಲೆಗಳಲ್ಲಿ ಈ ವ್ಯವಸ್ಥೆ ಒದಗಿಸಬೇಕಿದೆ. ಅದರಲ್ಲಿ 17,051 ಶಾಲೆಗಳಿಗೆ ₹ 42.48 ಕೋಟಿ ವೆಚ್ಚದಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, 16,433 ಶಾಲೆಗಳ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಷ್ಟೇ ಅಲ್ಲದೆ,16,106‌ ಕಾಮಗಾರಿಗೆ ಕಾರ್ಯಾದೇಶ ಕೂಡಾ ನೀಡಲಾಗಿದೆ. 8,878 ಶಾಲೆಗಳಲ್ಲಿ ಕಾಮಗಾರಿಪೂರ್ಣಗೊಂಡಿದೆ. ಉಳಿದ ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

‘ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 53,901 ಅಂಗನವಾಡಿಗಳಿವೆ. ಈ ಪೈಕಿ, 20,491 ಅಂಗನವಾಡಿಗಳಲ್ಲಿ ನೀರಿನ ವ್ಯವಸ್ಥೆ ಇದೆ. ಉಳಿದ 32,779 ವ್ಯವಸ್ಥೆ ಮಾಡಬೇಕಿದೆ. ಆ ಪೈಕಿ 31,057ಕ್ಕೆ ₹ 56.51 ಕೋಟಿ ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಿದ್ದು, 30,550ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 29,265ಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಅವುಗಳಲ್ಲಿ 17, 640ರ ಕೆಲಸ ಮಗಿದಿದೆ. ಉಳಿದ ಅಂಗನವಾಡಿಗಳಲ್ಲಿಯೂ ಶೀಘ್ರ ಕಾಮಗಾರಿ ಮುಗಿಯಲಿದೆ’ ಎಂದೂ ಅವರು ಹೇಳಿದರು.

‘ಪ್ರತಿ ಶಾಲೆಗಳಿಗೆ ತಲಾ ₹ 16 ಸಾವಿರ ವೆಚ್ಚದಲ್ಲಿ ಮೂರು ಕಡೆಗಳಲ್ಲಿ, ಅಂದರೆ ಅಡುಗೆಕೋಣೆ, ಕೈತೊಳೆಯಲು ಮತ್ತು ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ನೀರು ಪೂರೈಕೆ ವ್ಯವಸ್ಥೆ ಇರುವ ಶಾಲೆಗಳಲ್ಲಿ ಈ ಸಂಪರ್ಕ ಒದಗಿಸಲಾಗುತ್ತಿದೆ. ಕೊಳವೆ ಬಾವಿ ಕೊರೆದು ನೀರು ಪೂರೈಸಲು ಇಲಾಖೆಯಡಿ ಅವಕಾಶ ಇಲ್ಲ. ಹೀಗಾಗಿ, ನೀರು ಪೂರೈಕೆ ಇಲ್ಲದ ಕಡೆಗಳಲ್ಲಿ ಸ್ಥಳೀಯವಾಗಿ ಲಭ್ಯ ಯೋಜನೆಗಳಲ್ಲಿ ಸಂಪರ್ಕ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದೇವೆ’ ಎಂದರು.

‘ನಮ್ಮ ಮಾಹಿತಿ ಪ್ರಕಾರ ಸುಮಾರು 2,500 ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಆದರೆ, ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು 16 ಸಾವಿರ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಶೌಚಾಲಯ ಇಲ್ಲದ ಕಡೆ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದೂ ಅವರು ಹೇಳಿದರು.

‘ಶಿಕ್ಷಣ ಸಚಿವರಿಗೆ ಈ ಎಲ್ಲ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ’ ಎಂದು ಅವರು, ‘ಶೌಚಾಲಯಗಳನ್ನು ಸ್ವಚ್ಛ ಮಾಡುವ ಜೊತೆಗೆ, ನಿರ್ವಹಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು’ ಎಂದೂ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT