ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಡಲ್‌ವುಡ್‌ನಿಂದ ಉದ್ಯಮ, ರಾಜಕಾರಣಕ್ಕೂ ವ್ಯಾಪಿಸಿಕೊಂಡ ’ಡ್ರಗ್ಸ್‌’ ಜಾಲ

* ಡ್ರಗ್ ಮಾಫಿಯಾ; ಮತ್ತಷ್ಟು ಮಂದಿಗೆ ನೋಟಿಸ್ ಸಾಧ್ಯತೆ
Last Updated 3 ಸೆಪ್ಟೆಂಬರ್ 2020, 19:52 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಡ್ರಗ್ ಮಾಫಿಯಾ, ಇದೀಗ ಉದ್ಯಮ, ರಾಜಕಾರಣ ಹಾಗೂ ಗಣ್ಯ ವ್ಯಕ್ತಿಗಳತ್ತ ಮುಖ ಮಾಡುತ್ತಿದೆ. ಮಾಫಿಯಾ ಬಗ್ಗೆ ಚುರುಕಿನ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.

ಐಷಾರಾಮಿ ಜೀವನದ ಆಸೆಯಿಂದ ಬಹುಬೇಗನೇ ಹಣ ಸಂಪಾದಿಸುವ ಉದ್ದೇಶದಿಂದ ಕೆಲ ಯುವಕರು, ಡಾರ್ಕ್‌ನೆಟ್ ಹಾಗೂ ಇತರೆ ಆಧುನಿಕ ವ್ಯವಸ್ಥೆ ಮೂಲಕ ಹೊರ ರಾಜ್ಯ–ಹೊರ ದೇಶಗಳ ಡ್ರಗ್ ಪೆಡ್ಲರ್‌ ಜೊತೆ ಒಡನಾಟವಿಟ್ಟುಕೊಂಡಿದ್ದಾರೆ. ಅವರ ಮೂಲಕ ಡ್ರಗ್ ಆಮದು ಮಾಡಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಂಥವರ ಪಟ್ಟಿಯನ್ನು ಸಿಸಿಬಿ ಸಿದ್ಧಪಡಿಸುತ್ತಿರುವುದಾಗಿ ಗೊತ್ತಾಗಿದೆ.

ಸ್ಯಾಂಡಲ್‌ವುಡ್‌ನ ಕೆಲ ನಟ– ನಟಿಯರು, ಸಂಗೀತ ನಿರ್ದೇಶಕರು ಹಾಗೂ ಕಲಾವಿದರು ಡ್ರಗ್ ಖರೀದಿಸುತ್ತಿದ್ದಾರೆ. ರಾಜಕಾರಣದಲ್ಲಿರುವ ಹಾಗೂ ಉದ್ಯಮ ನಡೆಸುತ್ತಿರುವ ಕೆಲ ಯುವಕರು, ಡ್ರಗ್ ಗ್ರಾಹಕರಾಗಿದ್ದಾರೆ. ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳ ಮಕ್ಕಳು ಸಹ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂಥ ಗ್ರಾಹಕರೆಲ್ಲರೂ ಮಾಫಿಯಾದೊಳಗೆ ಇದ್ದು, ಅವರ ಬಗ್ಗೆ ಸಿಸಿಬಿ ತನಿಖೆ ಮುಂದುವರಿಸಿದೆ.

ಸಹವಾಸದಿಂದ ಡ್ರಗ್ ಸೇವನೆ; ಐಷಾರಾಮಿ ಜೀವನ ನಡೆಸುತ್ತಿರುವ ಕೆಲ ಯುವಕರು, ಸಹವಾಸದಿಂದಲೇ ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಡ್ರಗ್ ಪೆಡ್ಲರ್‌ ಹಾಗೂ ಉಪ ಪೆಡ್ಲರ್‌ಗಳೇ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ನಟ–ನಟಿಯರು ಹಾಗೂ ಗಣ್ಯ ವ್ಯಕ್ತಿಗಳ ಮಕ್ಕಳನ್ನು ಪಾರ್ಟಿಗೆ ಆಹ್ವಾನಿಸಿ ಅವರಿಗೆ ಡ್ರಗ್ ನೀಡಲಾಗುತ್ತಿತ್ತು. ಬಳಿಕ ಅದುವೇ ವ್ಯಸನವಾಗಿ ಮಾರ್ಪಡುತ್ತಿದೆ. ಇಂಥ ವ್ಯಸನಿಗಳಾದ ಹಲವರು ಮಾನಸಿಕ ತಜ್ಞರಿಂದ ಚಿಕಿತ್ಸೆಯನ್ನೂ ಪಡೆದಿದ್ದಾರೆ. ಆ ಪೈಕಿ ಕೆಲವರು ಸಿಸಿಬಿ ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೊಂಡಿರುವುದಾಗಿ ಗೊತ್ತಾಗಿದೆ.

ಎರಡನೇ ಬಾರಿ ಸಿಸಿಬಿ ಕಚೇರಿಗೆ ಇಂದ್ರಜಿತ್; ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಗೆ ಗುರುವಾರ ಹಾಜರಾಗಿ ಮಾಹಿತಿ ಹಂಚಿಕೊಂಡರು. ಸೋಮವಾರವಷ್ಟೇ ಇಂದ್ರಜಿತ್ ಕಚೇರಿಗೆ ಬಂದು ಹೇಳಿಕೆ ಕೊಟ್ಟು ಹೋಗಿದ್ದರು. ಪುರಾವೆಗಳ ಕೊರತೆ ಇದ್ದಿದ್ದರಿಂದ ಪುನಃ ಕಚೇರಿಗೆ ಬರುವಂತೆ ಅಧಿಕಾರಿಗಳು ತಿಳಿಸಿದ್ದರು.

‘ಬೆಳಿಗ್ಗೆ 11.30ಕ್ಕೆ ಕಚೇರಿಗೆ ಬಂದಿದ್ದ ಇಂದ್ರಜಿತ್ ಮಾಹಿತಿ ನೀಡಿ ಹೋಗಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಖ್ಯಾತ ನಟರೂ ಭಾಗಿ?

‘ವೀಕೆಂಡ್‌, ಹುಟ್ಟುಹಬ್ಬ ಹಾಗೂ ಹಲವು ರೀತಿಯ ಪಾರ್ಟಿಗಳಿಂದಲೇ ಡ್ರಗ್ ಮಾಫಿಯಾ ಬೆಳೆಯುತ್ತಿದೆ. ಲಾಕ್‌ಡೌನ್‌ನಿಂದಾಗಿ ಹಲವರ ಮನೆಗೂ ಡ್ರಗ್ ಸರಬರಾಜು ಆಗಿರುವ ಮಾಹಿತಿ ಇದೆ. ಡ್ರಗ್ ಗ್ರಾಹಕರಲ್ಲಿ ಕೆಲ ಖ್ಯಾತ ನಟರೂ ಇರುವ ಅನುಮಾನವಿದೆ. ತನಿಖೆಯಿಂದಲೇ ಅವರ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ವಿಚಾರಣೆಗೆ ಬಾರದ ರಾಗಿಣಿ; ಗಡುವು ನೀಡಿದ ಸಿಸಿಬಿ

ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದರೂ ನಟಿ ರಾಗಿಣಿ ಅವರು ಗುರುವಾರ ವಿಚಾರಣೆಗೆ ಹಾಜರಾಗಲಿಲ್ಲ.

ನೋಟಿಸ್‌ಗೆ ಉತ್ತರ ನೀಡಿರುವ ರಾಗಿಣಿ, ‘ತಡವಾಗಿ ನೋಟಿಸ್ ಕೈ ತಲುಪಿದೆ. ಸಮಯವ ಅಭಾವದಿಂದಾಗಿ ವಿಚಾರಣೆಗೆ ಬರಲು ಆಗುತ್ತಿಲ್ಲ. ನನ್ನ ಪರವಾಗಿ ವಕೀಲರು ಸಿಸಿಬಿ ಕಚೇರಿಗೆ ಬರಲಿದ್ದಾರೆ. ನಾನು ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ. ಇದಕ್ಕೆ ಅನುಮತಿ ನೀಡಿ’ ಎಂದು ಕೋರಿದ್ದಾರೆ.

ಎರಡನೇ ಬಾರಿ ನೋಟಿಸ್ ನೀಡಿರುವ ಸಿಸಿಬಿ ಅಧಿಕಾರಿಗಳು, ‘ಶುಕ್ರವಾರ ಬೆಳಿಗ್ಗೆ ಸಿಸಿಬಿ ಕಚೇರಿಗೆ ಬಂದು ವಿಚಾರಣೆ ಎದುರಿಸಬೇಕು. ಇಲ್ಲದಿದ್ದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ರಾಗಿಣಿಗಾಗಿ ಹೊಡೆದಾಡಿಕೊಂಡಿದ್ದ ಸ್ನೇಹಿತರು

ರಾಗಿಣಿ ದ್ವಿವೇದಿ ಅವರ ಸ್ನೇಹಿತರಾದ ಬಿ.ಕೆ. ರವಿಶಂಕರ್ ಹಾಗೂ ಶಿವಪ್ರಕಾಶ್ ಅಲಿಯಾಸ್ ಚಿಪ್ಪೆ ಎಂಬುವರು 2019ರ ಮಾರ್ಚ್‌ 15ರಂದು ಅಶೋಕನಗರದ ಹೋಟೆಲೊಂದರಲ್ಲಿ ಹೊಡೆದಾಡಿಕೊಂಡಿದ್ದರು.

ರಾಗಿಣಿ ಜೊತೆಯೇ ಅಶೋಕನಗರ ಠಾಣೆಗೆ ಹೋಗಿದ್ದ ರವಿಶಂಕರ್, ‘ಶಿವಪ್ರಕಾಶ್ ಅಲಿಯಾಸ್ ಚಿಪ್ಪೆ ಎಂಬುವರು ಬಿಯರ್ ಬಾಟಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯವಾಗಿದೆ’ ಎಂದು ದೂರಿದ್ದ.

ಆ ಸಂಬಂಧ ಪೊಲೀಸರಿಗೆ ಹೇಳಿಕೆ ನೀಡಿದ್ದ ಶಿವಪ್ರಕಾಶ್, ‘ರಾಗಿಣಿಗೆ ಕಾರು ಉಡುಗೊರೆ ನೀಡಿದ್ದೆ. ಇದೀಗ ಅವರು ನನ್ನನ್ನು ಬಿಟ್ಟು ಬೇರೆಯವರ ಜೊತೆ ಸುತ್ತಾಡುತ್ತಿದ್ದಾರೆ’ ಎಂದಿದ್ದ.

ತನಿಖೆ ಮುಂದುವರಿದರೆ ಮಾಫಿಯಾಗೆ ‘ಕಿಚ್ಚು’

‘ವೀಕೆಂಡ್‌, ಹುಟ್ಟುಹಬ್ಬ ಹಾಗೂ ಹಲವು ರೀತಿಯ ಪಾರ್ಟಿಗಳಿಂದಲೇ ಡ್ರಗ್ ಮಾಫಿಯಾ ಬೆಳೆಯುತ್ತಿದೆ. ಲಾಕ್‌ಡೌನ್‌ನಿಂದಾಗಿ ಹಲವರ ಮನೆಗೂ ಡ್ರಗ್ ಸರಬರಾಜು ಆಗಿರುವ ಮಾಹಿತಿ ಇದೆ. ಡ್ರಗ್ ಗ್ರಾಹಕರಲ್ಲಿ ಕೆಲ ಖ್ಯಾತ ನಟರೂ ಇರುವ ಅನುಮಾನವಿದೆ. ಖ್ಯಾತ ನಟರು ಪಾಲ್ಗೊಂಡಿದ್ದ ಪಾರ್ಟಿಗಳನ್ನೂ ಡ್ರಗ್ ಸುಳಿದಾಡಿದೆ. ತನಿಖೆಯಿಂದಲೇ ನಟರ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT