ಸೋಮವಾರ, ಡಿಸೆಂಬರ್ 6, 2021
27 °C
ಹೊರ ರಾಜ್ಯ, ವಿದೇಶಿಯರ ಕೈವಾಡ l ಖಾಸಗಿ ಕಂಪನಿ ಉದ್ಯೋಗಿಗಳೂ ಗ್ರಾಹಕರು

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಡ್ರಗ್ಸ್‌ಗೆ ವಿದ್ಯಾರ್ಥಿಗಳೇ ಗುರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮತ್ತು ರಾಜ್ಯದ ಇತರ ಪ್ರಮುಖ ನಗರಗಳ ಕೆಲವು ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿರುವ ಆಘಾತಕಾರಿ ಮಾಹಿತಿ ಸಿಸಿಬಿ ಪೊಲೀಸರ ತನಿಖೆಯಿಂದ ಬಯಲಾಗಿದೆ.

ವಿದ್ಯಾರ್ಥಿ ದೆಸೆಯಲ್ಲೇ ಮಾದಕ ದ್ರವ್ಯಗಳ ವ್ಯಸನಕ್ಕೆ ತುತ್ತಾಗಿ ಅಪರಾಧ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿರುವವರ ಮತ್ತು ಮಾನಸಿಕ ಕಾಯಿಲೆಗಳಿಗೂ ತುತ್ತಾಗುತ್ತಿರುವವರ ಸಂಖ್ಯೆ  ಹೆಚ್ಚಾಗಿರುವುದು ಈ ತನಿಖೆಯ ವೇಳೆ ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ನಗರದ ಕೆಲ ಶಾಲಾ– ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕವಸ್ತು ಸೇವಿಸುತ್ತಿರುವ ದೂರುಗಳು ಇವೆ. ಇದರ ವಿರುದ್ಧ ಕಾರ್ಯಾಚರಣೆ ನಡೆಸಲು ಶಿಕ್ಷಣ ಸಂಸ್ಥೆಗಳು ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮನವಿ ಮಾಡಿದ್ದಾರೆ.

‘ಡ್ರಗ್ಸ್‌ ಮಾರುತ್ತಿದ್ದ ಆರೋಪದಡಿ ಕೇರಳದ ಎಂ.ಎಸ್ಸಿ ವಿದ್ಯಾರ್ಥಿ ಸೇರಿ ಮೂವರನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದೆ. ವಿದ್ಯಾರ್ಥಿಗ
ಳನ್ನೇ ಗುರಿಯಾಗಿಸಿಕೊಂಡು ಆತ ಡ್ರಗ್ಸ್ ಮಾರುತ್ತಿದ್ದ. ವಿದೇಶಗಳಿಂದ ಬಂದವರೂ ಮಾರಾಟ ಜಾಲದಲ್ಲಿ ತೊಡಗಿದ್ದಾರೆ. ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಕಾರ್ಯಾಚರಣೆ ಆರಂಭಿಸಲಾಗಿದೆ. ಪೋಷಕರೂ ಪೊಲೀಸರೊಂದಿಗೆ ಸಹಕರಿಸಬೇಕು’ ಎಂದೂ ಅವರು ತಿಳಿಸಿದ್ದಾರೆ.

ಬೆಂಗಳೂರಿಗೆ 2ನೇ ಸ್ಥಾನ: ದೇಶದಲ್ಲಿ ಮುಂಬೈ ಹೊರತುಪಡಿಸಿದರೆ, ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಮಾಣ
ದಲ್ಲಿ ಮಾದಕವಸ್ತುಗಳ ಸರಬರಾಜು ಹಾಗೂ ಮಾರಾಟ ಆಗುತ್ತಿದೆ. ಹೊರ ದೇಶ– ಹೊರ ರಾಜ್ಯಗಳಿಂದ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ಬರುವ ಜನರೇ, ಈ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಐಷಾರಾಮಿ ಜೀವನ, ಅಕ್ರಮ ಹಣ ಸಂಪಾದನೆಗಾಗಿ ಪೆಡ್ಲರ್‌ಗಳ ಜೊತೆ ಕೈ ಜೋಡಿಸಿ ಉಪ ಪೆಡ್ಲರ್‌ಗಳಾಗಿ ಬೆಳೆಯುತ್ತಿದ್ದಾರೆ ಎಂದು ಪಂತ್‌ ತಿಳಿಸಿದರು.

ಡ್ರಗ್ಸ್‌ ಜಾಲ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳು ಹಾಗೂ ಗಣ್ಯರನ್ನು ಗುರಿಯಾಗಿಸಿಕೊಂಡು ಸಕ್ರಿಯವಾಗಿದೆ. ದುಬಾರಿ ಬೆಲೆಯ ವಿದೇಶಿ ಡ್ರಗ್ಸ್‌ಗಳಿಗೆ ಶ್ರೀಮಂತರು ದಾಸರಾಗುತ್ತಿದ್ದಾರೆ.

ಸ್ಥಳೀಯವಾಗಿ ಕಡಿಮೆ ಬೆಲೆಗೆ ಸಿಗುವ ಗಾಂಜಾ ವ್ಯಸನಕ್ಕೆ ಕೆಲ ಕಾರ್ಮಿಕರು, ಪುಂಡು– ಪೋಕರಿಗಳು ಹಾಗೂ ವಿದ್ಯಾರ್ಥಿಗಳು ದಾಸರಾಗಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 

ಉಚಿತವಾಗಿ ಕೊಟ್ಟು ’ಚಟ’

‘ಶಾಲಾ–ಕಾಲೇಜುಗಳ ಬಳಿ ಹಾಗೂ ವಿದ್ಯಾರ್ಥಿಗಳು ಒಟ್ಟಿಗೆ ಸೇರುವ ಜಾಗದಲ್ಲಿ ಡ್ರಗ್ಸ್‌ ಮಾರಾಟ ನಡೆಯುತ್ತಿರುವ ದೂರುಗಳು ಸಾಕಷ್ಟಿವೆ. ಪೂರ್ವ ಹಾಗೂ ಉತ್ತರ ವಿಭಾಗದಲ್ಲಿರುವ ಕಾಲೇಜುಗಳ ಬಳಿ ಹೆಚ್ಚು ಗಾಂಜಾ ಮಾರಾಟವಾಗುತ್ತದೆ. ವಿದ್ಯಾರ್ಥಿಗಳ ಚೀಲಗಳಲ್ಲಿ ಗಾಂಜಾ ಪೊಟ್ಟಣಗಳು ಇದ್ದಿದ್ದನ್ನು ಕಂಡಿದ್ದೇವೆ ’ ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಬಸ್‌, ಖಾಸಗಿ ವಾಹನಗಳಲ್ಲಿ ಡ್ರಗ್ಸ್

‘ಕೇರಳ, ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದ ಗಾಂಜಾ ನಗರಕ್ಕೆ ಬರುತ್ತದೆ. ಗೋವಾ ಹಾಗೂ ಮುಂಬೈನಿಂದ ವಿದೇಶಿ ಡ್ರಗ್ಸ್ ಸರಬರಾಜು ಆಗುತ್ತದೆ. ಬಸ್ ಹಾಗೂ ಖಾಸಗಿ ವಾಹನದಲ್ಲಿ ಸಾಗಿಸಲಾಗುತ್ತದೆ. ಮೆಜೆಸ್ಟಿಕ್‌ನಲ್ಲಿ ಇತ್ತೀಚೆಗೆ ಖಾಸಗಿ ಬಸ್ಸಿನಲ್ಲಿ ನೈಜೀರಿಯಾದ ಮಹಿಳೆಯೊಬ್ಬರು ಡ್ರಗ್ಸ್ ಸಮೇತವೇ ಸಿಕ್ಕಿಬಿದ್ದಿದ್ದಳು’ ಎಂದು ಸಿಸಿಬಿ ಅಧಿಕಾರಿ ವಿವರಿಸಿದರು.

‘ಗಾಂಜಾ ಸರಬರಾಜು ವೇಳೆ ಕೇರಳದ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ನಕ್ಸಲ್‌ ಜೊತೆ ಸಂಪರ್ಕವಿಟ್ಟುಕೊಂಡು ಒಡಿಶಾದಿಂದ ಗಾಂಜಾ ತರುತ್ತಿದ್ದ ಆರೋಪಿಯೊಬ್ಬ ಕಳೆದ ವರ್ಷ ಸಿಕ್ಕಿಬಿದ್ದಿದ್ದ. ಆತನಿಂದ 108 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿತ್ತು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು