ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 4,885 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಎಸ್‌.ಸುರೇಶ್ ಕುಮಾರ್

ಬೆಂಗಳೂರಿನ ಅಣಕು ಪರೀಕ್ಷಾ ಕೇಂದ್ರಗಳಿಗೆ ಭೇಟಿ, ಪರಿಶೀಲನೆ
Last Updated 17 ಜುಲೈ 2021, 8:56 IST
ಅಕ್ಷರ ಗಾತ್ರ

ಬೆಂಗಳೂರು: ‘ಜುಲೈ 19 ಮತ್ತು 22ರಂದು ರಾಜ್ಯದಾದ್ಯಂತ ಒಟ್ಟು 4,885 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತಿಳಿಸಿದರು.

ಪರೀಕ್ಷೆಗೆ ಪೂರ್ವಭಾವಿಯಾಗಿ ನಗರದ ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ, ಪೂರ್ಣ ಪ್ರಜ್ಞಾ ಶಾಲೆ ಸೇರಿದಂತೆ ಎಸ್ಸೆಸ್ಸೆಲ್ಸಿ ಅಣಕು ಪರೀಕ್ಷೆ ನಡೆಯುತ್ತಿದ್ದ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.

‘ಕಳೆದ ವರ್ಷ 3,310 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿತ್ತು. ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಈ ಬಾರಿ ಪರೀಕ್ಷಾ ಕೇಂದ್ರಗಳನ್ನು 4,885ಕ್ಕೆ ಏರಿಸಲಾಗಿದೆ. 48 ಸಾವಿರದಿಂದ 73,066ಕ್ಕೆ ಪರೀಕ್ಷಾ ಕೊಠಡಿಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಒಟ್ಟು 1,19,469 ಸಿಬ್ಬಂದಿಯನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಕೊಠಡಿಯಲ್ಲಿ 12ಕ್ಕಿಂತ ಹೆಚ್ಚು ಜನ ಇರಬಾರದು. ಕೊಠಡಿಯ ಹೊರಗೆ ಮತ್ತು ಒಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಕೆಲವೆಡೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರವೇಶ ದ್ವಾರ, ಸ್ಯಾನಿಟೈಸ್ ವ್ಯವಸ್ಥೆ, ಮಾಸ್ಕ್‌ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಈ ಬಾರಿ ವಿಶೇಷವೆಂದರೆ ಒಎಂಆರ್ ಶೀಟ್‌ನಲ್ಲೂ ಮಕ್ಕಳ ನೋಂದಣಿ ಸಂಖ್ಯೆ ಹಾಗೂ ಭಾವಚಿತ್ರ ಇರಲಿದೆ. ಪ್ರತಿ ವಿಷಯಕ್ಕೆ ವಿಶೇಷ ಬಣ್ಣದ ಒಎಂಆರ್‌ ಶೀಟ್‌ ವಿತರಿಸಲಾಗುವುದು’ ಎಂದರು.

‘ಕೇಂದ್ರಗಳಲ್ಲಿ ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆ ಇರಲಿದೆ. ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಯುವ ವಿಶ್ವಾಸ ಇದೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳಾಗಿರಲಿವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT