ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಘರ್ಷಣೆ: ತಾಯಿ ಜತೆಗೆ ಜೈಲಿನಲ್ಲಿದ್ದ ಮಗು ಸಾವು

Last Updated 3 ಜನವರಿ 2021, 2:30 IST
ಅಕ್ಷರ ಗಾತ್ರ

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ನಂತರ ನಡೆದ ಘರ್ಷಣೆಗೆ ಸಂಬಂಧಿಸಿ ಬಂಧಿತ ತಾಯಿಯೊಂದಿಗೆ ಜೈಲು ಸೇರಿದ್ದ ಮೂರು ವರ್ಷದ ಮಗು ಮೃತಪಟ್ಟಿದೆ.

‘ಮಗಳು ಭಾರತಿ ಆರೋಗ್ಯ ಸರಿ ಇರಲಿಲ್ಲ. ಜೈಲಿಗೆ ಕರೆದೊಯ್ಯಬೇಡಿ ಎಂದು ಪೊಲೀಸರಿಗೆ ಕೇಳಿಕೊಂಡೆವು. ನಮ್ಮ ತವರು ಮನೆಗೆ ಬಿಟ್ಟು ಬರುವುದಾಗಿ ಹೇಳಿ ಕರೆತಂದು ಜೈಲಿಗೆ ಹಾಕಿದರು. ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇದ್ದಾಗಲೇ ಮಗುವಿನ ಆರೋಗ್ಯ ತೀವ್ರ ಹದಗೆಟ್ಟಿತ್ತು. ಆಸ್ಪತ್ರೆಗೆ ತಂದಾಗ ಸತ್ತಿದೆ ಎಂದು ಹೇಳುತ್ತಿದ್ದಾರೆ. ಅದರೆ, ಮಗಳ ಸಾವಿಗೆ ಪೊಲೀಸರೇ ಕಾರಣ’ ಎಂದು ಮಗುವಿನ ತಾಯಿ ಸಂಗೀತಾ ಅವರು ಜಿಮ್ಸ್‌ ಆಸ್ಪತ್ರೆಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.

‘ಡಿ.30ರಂದು ಮಹಿಳೆಯರು, ಮಕ್ಕಳ ಸಮೇತ ಎಲ್ಲರನ್ನೂ ಠಾಣೆಯಲ್ಲೇ ಇಟ್ಟುಕೊಳ್ಳಲಾಗಿತ್ತು.31ರಂದು ತಹಶೀಲ್ದಾರ್‌ ಮುಂದೆ ಹಾಜರುಪಡಿಸಿ, ನಂತರ ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಕಾರಾಗೃಹದಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಅಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಈ ಮಗುವನ್ನು ಬಂಧಿಸಿರಲಿಲ್ಲ. ತಾಯಿ ಜೊತೆಗೆ ಮಗು ಸಹ ಜೈಲಿನಲ್ಲಿತ್ತು. ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಪೊಲೀಸ್‌ ವಶದಲ್ಲಾಗಲಿ, ಜೈಲಿನಲ್ಲಾಗಲಿ ಮೃತಪಟ್ಟಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿಮಿ ಮರಿಯಮ್‌ ಜಾರ್ಜ್‌ ತಿಳಿಸಿದರು.

‘ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಗೆ ಸೂಚಿಸಿದ್ದೇನೆ’ ಎಂದು ಐಜಿಪಿ ಮನೀಷ್‌ ಕರ್ಬೀಕರ್‌ ಪ್ರತಿಕ್ರಿಯಿಸಿದರು. ಇಬ್ಬರು ನ್ಯಾಯಾಧೀಶರ ಸಮ್ಮುಖದಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT