ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್: ₹15 ಸಾವಿರ ಕೋಟಿ ಬೊಕ್ಕಸಕ್ಕೆ ಹೊರೆ- ಈಶ್ವರ ಖಂಡ್ರೆ

ನಷ್ಟ ನಿವಾರಣೆಗೆ ಪೊನ್ನುರಾಜ್ ಬರೆದ ಪತ್ರ ಬಹಿರಂಗ
Last Updated 21 ನವೆಂಬರ್ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಇಂಧನ ಇಲಾಖೆಯ ಬೇಜವಾಬ್ದಾರಿ ಹಾಗೂ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಪಡಿಸದೇ ಇರುವುದರಿಂದ ಒಂದೂವರೆ ವರ್ಷದಲ್ಲಿ ಬೊಕ್ಕಸಕ್ಕೆ ₹15 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ದೂರಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಉತ್ಪಾದನಾ ಸಾಮರ್ಥ್ಯ ಇರದೇ ಇದ್ದಾಗ ವಿದ್ಯುತ್ ಕೊರತೆ ತಪ್ಪಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಬೇಡಿಕೆಗಿಂತ ಹೆಚ್ಚುವರಿ ಉತ್ಪಾದನೆ ಕರ್ನಾಟಕದಲ್ಲೇ ಆಗುತ್ತಿದೆ. ಬೇಡಿಕೆಯೇ ಇಲ್ಲದಿದ್ದರೂ ಮಾಡಿಕೊಂಡ ಒಪ್ಪಂದ ಮುಂದುವರಿಸಿರುವುದರಿಂದ ವಾರ್ಷಿಕ ₹11 ಸಾವಿರ ಕೋಟಿ ವೆಚ್ಚ ಮಾಡಲೇಬೇಕಾಗಿದೆ. ಒಪ್ಪಂದ ಮುಂದುವರಿಸಿರುವುದರ ಹಿಂದೆ ಯಾರ ಪಿತೂರಿ ಇದೆ ಎಂದು ಪ್ರಶ್ನಿಸಿದರು.

ಇಂಧನ ಇಲಾಖೆ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲೇ ಇದೆ. ಒಪ್ಪಂದ ಮುಂದುವರಿಸಿ, ಸರ್ಕಾರಕ್ಕೆ ನಷ್ಟ ಉಂಟು ಮಾಡಲು ಕಾರಣವಾಗಿರುವ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ಅವರು ಅಕ್ಟೋಬರ್ 14 ರಂದು ಇಂಧನ ಇಲಾಖೆ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ 41 ಪುಟಗಳ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಖಂಡ್ರೆ, ನಷ್ಟ ಉಂಟಾಗುವುದನ್ನು ತಪ್ಪಿಸಲು ಒಪ್ಪಂದ ರದ್ದುಪಡಿಸುವ ದಾರಿ ಇದೆ ಎಂದು ಪೊನ್ನುರಾಜ್ ಹೇಳಿದ್ದಾರೆ. ಈ ಪತ್ರದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

ಕೇಂದ್ರೀಕೃತ ಉತ್ಪಾದನಾ ಘಟಕ(ಸಿಜಿಎಸ್)ಗಳಿಂದ ವಿದ್ಯುತ್ ಖರೀದಿಸುವುದಾಗಿ ಎಲ್ಲ ಎಸ್ಕಾಂಗಳು ದೀರ್ಘಾವಧಿ ಒಪ್ಪಂದ ಮಾಡಿಕೊಂಡಿವೆ. ಈ ವಿದ್ಯುತ್ ಪ್ರಸರಣಕ್ಕಾಗಿ ಪವರ್ ಗ್ರಿಡ್ ಕಾರ್ಪೊರೇಶನ್ ಜತೆಗೂ ಒಪ್ಪಂದ ಮಾಡಿಕೊಂಡಿವೆ. ಕರ್ನಾಟಕದಲ್ಲಿ 53,387 ದಶಲಕ್ಷ ಯುನಿಟ್ ವಿದ್ಯುತ್ ಹೆಚ್ಚುವರಿ ಉತ್ಪಾದನೆಯಾಗುತ್ತಿರುವುದರಿಂದ ಹಿಂದೆ ಸಾಮರ್ಥ್ಯದಷ್ಟು ಬಳಕೆ ಮಾಡಲಾಗುತ್ತಿಲ್ಲ. ಆದರೆ, ಬಳಕೆ ಮಾಡಿಕೊಳ್ಳದೇ, ವಿದ್ಯುತ್‌ ಪ್ರಸರಣವನ್ನು ಮಾಡದೇ ಇದ್ದರೂ 2019–20ರಲ್ಲಿ ಒಪ್ಪಂದದ ಅನ್ವಯ ವಿದ್ಯುತ್ ಖರೀದಿಯ ಖಾತ್ರಿಗಾಗಿ ₹9,284 ಕೋಟಿ ಹಾಗೂ ಕಾರಿಡಾರ್ ಬಳಕೆ ಮಾಡದೇ ಇದ್ದರೂ ₹1785 ಕೋಟಿ ಸೇರಿ ₹11,069ಕೋಟಿ ಪಾವತಿ ಮಾಡಲಾಗಿದೆ. ಈ ಸಾಲಿನಲ್ಲಿ ಸುಮಾರು ₹4 ಸಾವಿರ ಕೋಟಿ ಕೊಡಲಾಗಿದೆ ಎಂದು ವಿವರಿಸಿದರು.

ಎನ್‌ಟಿಪಿಸಿ, ರಾಮಗುಂಡಂ 1,2, 3 ನೇ ಘಟಕ, ತಾಲ್ಚೇರ್‌, ಎನ್‌ಎಲ್‌ಸಿ, ಟಿಪಿಎಸ್‌ 2 ನೇ ಹಂತ, ಎನ್ಎಲ್‌ ಸಿ ಸೇರಿದಂತೆ ಅನೇ ವಿದ್ಯುತ್ ಘಟಕಗಳ ಜತೆ ಒಪ್ಪಂದ ಮಾಡಿಕೊಂಡು ದಶಕಗಳೇ ಕಳೆದಿವೆ. ಈ ಒಪ್ಪಂದ ರದ್ದು
ಮಾಡಲು ಯಾವುದೇ ನಿಯಮಗಳೂ ಅಡ್ಡಿ ಇಲ್ಲ. ಅಲ್ಲಿನ ಸಾಮರ್ಥ್ಯವನ್ನು ಕರ್ನಾಟಕ ಬಳಕೆ ಮಾಡಿಕೊಳ್ಳದೇ , ಖರೀದಿಯನ್ನೇ ಮಾಡದೇ ಇದ್ದರೂ ಒಪ್ಪಂದ ಅನ್ವಯ ಪಾವತಿ ಮಾಡಲಾಗುತ್ತಿದೆ. ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಈ ಒಪ್ಪಂದ ರದ್ದು ಮಾಡಿಕೊಂಡು ಸ್ವಂತ ಉತ್ಪಾದನೆಯ ವಿದ್ಯುತ್ ಬಳಸಿದರೆ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಬಹುದು. ಈ ದಾರಿ ಕಡೆ ನೋಡದ ಸರ್ಕಾರ, ವಿದ್ಯುತ್‌ ದರ ಏರಿಕೆ ಮಾಡಿ ಗ್ರಾಹಕರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ಖಂಡ್ರೆ ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT