ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಬಂಧಿ ಹೊಸ ಕಾಯ್ದೆ ಸಂವಿಧಾನ ವಿರೋಧಿ: ಜನತಾ ಭೂಮಿ ಅದಾಲತ್‌

ನಾಗಮೋಹನ ದಾಸ್‌ ನೇತೃತ್ವದ ಜನತಾ ಭೂಮಿ ಅದಾಲತ್‌
Last Updated 3 ನವೆಂಬರ್ 2020, 18:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಜಮೀನಿಗೆ ಸಂಬಂಧಿಸಿದ ಹೊಸ ಕಾಯ್ದೆಗಳು, ತಿದ್ದುಪಡಿಗಳು ಮತ್ತು ಸುಗ್ರೀವಾಜ್ಞೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ತಕ್ಷಣವೇ ಈ ಎಲ್ಲ ಕಾಯ್ದೆ ಮತ್ತು ಸುಗ್ರೀವಾಜ್ಞೆಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ನೇತೃತ್ವದ ‘ಜನತಾ ಭೂಮಿ ಅದಾಲತ್‌’ ಆಗ್ರಹಿಸಿದೆ.

ಕೃಷಿ ಜಮೀನಿಗೆ ಸಂಬಂಧಿಸಿದ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ನಾಗಮೋಹನ ದಾಸ್‌, ನಿವೃತ್ತ ಐಎಫ್‌ಎಸ್‌ ಅಧಿಕಾರಿ ಅ.ನ. ಯಲ್ಲಪ್ಪರೆಡ್ಡಿ, ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ, ಪ್ರೊ.ಎಂ.ಕೆ. ರಮೇಶ್‌, ಪ್ರೊ. ಎ.ಆರ್‌. ವಾಸವಿ ಮತ್ತು ರೇಣುಕಾ ವಿಶ್ವನಾಥ್‌ ಅವರನ್ನು ಒಳಗೊಂಡ ತಂಡದಿಂದ ಸೆಪ್ಟೆಂಬರ್‌ 19ರಂದು ನಗರದಲ್ಲಿ ಜನತಾ ಭೂಮಿ ಅದಾಲತ್‌ ನಡೆಸಲಾಗಿತ್ತು. ಇಡೀ ದಿನದ ವಿಚಾರಣೆಯ ವಿವರಗಳು ಮತ್ತು ತೀರ್ಮಾನಗಳನ್ನು ‘ಅದಾಲತ್‌’ ಬಿಡುಗಡೆ ಮಾಡಿದೆ.

ರೈತರ ಬಳಿಯೇ ಕೃಷಿ ಜಮೀನು ಉಳಿಯಬೇಕು. ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಅವಕಾಶ ನೀಡಿರುವುದರಿಂದ ಕೃಷಿ ಮತ್ತು ಗ್ರಾಮೀಣ ಬದುಕಿನ ಮೇಲೆ ಆಗಿರುವ ಪರಿಣಾಮಗಳನ್ನು ಪರಿಗಣಿಸಿ ಮುಂದೆ ಅಂತಹ ಸಮಸ್ಯೆ ಆಗದಂತೆ ತಡೆಯಬೇಕು. ವಿವಿಧ ಯೋಜನೆಗಳಿಗೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ರೈತರಿಗೆ ಕೇವಲ ಹಣ ನೀಡುವ ಬದಲಿಗೆ ಉದ್ದಿಮೆಗಳಲ್ಲಿ ಷೇರುಗಳ ರೂಪದಲ್ಲಿ ಪಾಲುದಾರಿಕೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ‘ಜನತಾ ಭೂಮಿ ಅದಾಲತ್‌’ ಶಿಫಾರಸು ಮಾಡಿದೆ.

ಸೋಲಾರ್‌ ಪಾರ್ಕ್‌ನಂತಹ ಯೋಜನೆಗಳಿಗೆ ಕೃಷಿ ಜಮೀನುಗಳ ಸ್ವಾಧೀನ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ವಿವಿಧ ಉದ್ದೇಶಗಳಿಗೆ ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದು, ಈವರೆಗೂ ಬಳಕೆಯಾಗದೆ ಉಳಿದಿರುವ ಕೃಷಿ ಜಮೀನುಗಳನ್ನು ರೈತರಿಗೆ ಹಿಂದಿರುಗಿಸಬೇಕು. ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಗ್ರಾಮಸಭೆಗಳ ಮೂಲಕ ಸ್ಥಳೀಯರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದೆ.

ಭೂಸ್ವಾಧೀನ ಕಾಯ್ದೆಗೆ 2019ರಲ್ಲಿ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳನ್ನು ವಾಪಸ್‌ ಪ‍ಡೆಯಬೇಕು. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಉದ್ದೇಶದಿಂದ ಜಾರಿಗೊಳಿಸಿರುವ ಸುಗ್ರೀವಾಜ್ಞೆಯನ್ನೂ ಹಿಂದಕ್ಕೆ ಪಡೆಯಬೇಕು. ಕಾರ್ಪೋರೇಟ್‌ ಭೂ ಕಬಳಿಕೆಗೆ ಆಸ್ಪದ ನೀಡುವಂತಹ ಯಾವುದೇ ಕಾಯ್ದೆಗಳನ್ನೂ ಜಾರಿಗೊಳಿಸಬಾರದು ಎಂದು ಅದಾಲತ್‌ನ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT